ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ದಿನಚರಿ
ಬೆಳಗಾನ ಮಾಡಿದ ಸಂಸಾರ ಸಂತೆಯ
ಕನಸುಗಳ ಕಂಬಳಿಯ ಹೊದಿಸಿ
ಬೆಚ್ಚನೆ ಮಲಗಿಸಿ
ಬೆಳ್ಳಿಚಿಕ್ಕಿ ಮೂಡುವ ಮುಂಚೆ
ಎದ್ದು ರವಿಯ ಬರುವಿಗೆ
ಬಾನಂಗಳದ ತುಂಬೆಲ್ಲ
ನೀರ ತಳಿ ಹೊಡೆದು
ಬಣ್ಣದ ಚಿತ್ತಾರವ ರಂಗೋಲಿಯ ಬಿಡಿಸಿ
ಮುತ್ತಿನ ನೀರ ಹನಿ
ಲತೆಗಳಿಗೆ ಸಿಂಪಡಿಸಿ
ಹಿತ್ತಲಿನ ಗಿಡಗಳಿಗೆ ನೀರುಣಿಸಿ
ಹಾಡೊಂದನ್ನು ಗುನುಗುನಿಸುತ್ತ
ಮರೆತ ಒಲೆಯ ಮೇಲಿನ
ಹಾಲು ಉಕ್ಕೇರಿ ನನ್ನ ಎಚ್ಚರಿಸಿತ್ತು
ತನುವಿಗೊಂದಿಷ್ಟು ಕಸರತ್ತು
ಯೋಗ ಧ್ಯಾನ
ತನು – ಮನಗಳ ಯೋಗಾಯೋಗ
ಸಮಯ ಏಳಾಗುತ್ತಿದೆ
ಕಸಗೂಡಿಸಿದ ಕೈಗಳಿಗೆ
ಕಾಫಿ ಕೊಟ್ಟು ಸಮಾಧಾನಿಸಬೇಕು
ಒಲೆ ಹೊತ್ತಿಸಬೇಕು
ಗಾಣದೆತ್ತಿಗೆ ಗುಗ್ಗರಿ ಇಡಬೇಕು
ನೆರವಾಗುತ್ತದೆ ನೊಗ ಎಳೆಯಲು
ದೈನಂದಿನ ರೊಟ್ಟಿಗೆ ಜೋಡಿಸಬೇಕು ಪಲ್ಲೆ
ತಿಂಡಿಗೆ ತಡವರಿಸಬೇಕು ನಿತ್ಯವೂ
ಅವಲಕ್ಕಿ ಉಪ್ಪಿಟ್ಟು ಮೂಗು ಮುರಿಯುವರು
ಇಡ್ಲಿ ದೋಸೆ ಪೂರಿ ಬಾಯಿ ಚಪ್ಪರಿಸುವರು
ಬೆಳಗಿನಿಂದ ಬೈಗಿನವರೆಗೂ
ಹೊರಡಬೇಕಿನ್ನು ನಿತ್ಯ ಕಾಯಕಕ್ಕೆ
ಹಳೆಯ ಗೋಡೆಗಳಿಗೆ ಸುಣ್ಣ ಬಳಿದಂತೆ
ಸುಕ್ಕುಗಟ್ಟಿದ ಮುಖಕ್ಕೆ ಬಣ್ಣ ಬಳಿದು
ಕೆನ್ನೆಗೊಂದಿಷ್ಟು ಮಿಂಚು ಸವರಿ
ಅಧರಕ್ಕೆ ರಂಗು ಲೇಪಿಸಿ
ವೇಷಾಗಾರರಂತೆ ವೇಷ ಮರೆಸಿ
ಹಾಡುತ್ತ ನಡೆಯಬೇಕಿದೆ
ಬದುಕಿನ ಪಥದಿ
ಡಾ. ಮೀನಾಕ್ಷಿ ಪಾಟೀಲ್