ಆಂಡ್ರಾಯ್ಡ್ ಫೋನ್ ಬಂದ ನಂತರ ನನ್ನ ಬದುಕಿನಲ್ಲಾದ ಬದಲಾವಣೆ-ಅಮ್ಮು ರತನ್ ಶೆಟ್ಟಿ

ವಿಶೇಷ ಲೇಖನ

ಆಂಡ್ರಾಯ್ಡ್ ಫೋನ್ ಬಂದ ನಂತರ

ನನ್ನ ಬದುಕಿನಲ್ಲಾದ ಬದಲಾವಣೆ

ಅಮ್ಮು ರತನ್ ಶೆಟ್ಟಿ

ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ಹಾಗೆಯೇ ವಿಜ್ಞಾನ ತಂತ್ರಜ್ಞಾನ ಮುಂದುವರಿದಂತೆ ಅದನ್ನು ಅವವಡಿಕೆ ಮಾಡಿಕೊಂಡು ಹೋಗಬೇಕು. ಅದು ಸರಿ ಇದು ತಪ್ಪು ಎಂದು ಅದನ್ನು ತಿರಸ್ಕರಿಸುವುದಿಲ್ಲ, ಯಾಕೆಂದರೆ ಯಾವುದೇ ವಿಷಯದಲ್ಲಿಯಾದರೂ ಎರಡೂ ದೃಷ್ಟಿಕೋನವಿರುತ್ತದೆ . ಅದರಲ್ಲಿನ ಒಳಿತು ಕೆಡುಕುಗಳಂತೂ ನಮ್ಮದೇ ಸಂಪಾದನೆ , ಯಾಕೆಂದರೆ ಬಳಕೆಯಿಂದಾಗಿ ಸಮಸ್ಯೆ ಪರಿಹಾರ ಎರಡೂ ಸಿಗುತ್ತೆ.‌

*ಆಂಡ್ರಾಯ್ಡ್ ಫೋನ್ ನಿಂದಾದ ಉಪಯೋಗ*

ನಾನಂತೂ ಎಲ್ಲರಂತೆ ಮೊಬೈಲ್ ಫೋನ್ ನಿಂದಾಗಿ ಬರಿಯ ಕೆಡುಕುಗಳೇ ಇರುವುದೆಂದು ಖಂಡಿತಾ ಒಪ್ಪುವುದಿಲ್ಲ, ಯಾಕೆಂದರೆ ಒಬ್ಬ ಪುಟ್ಟ ಬರಹಗಾತಿಯಾಗಿ ಅಲ್ಲಿಲ್ಲಿ ಕಾಗದದಲ್ಲಿ ಗೀಚಿ, ಕಸದ ಬುಟ್ಟಿ ಸೇರುತ್ತಿದ್ದ ನನ್ನ ಬರಹಗಳಿಗೆ ಒಂದು ಅವಕಾಶ ಸಿಕ್ಕಿದ್ದು ಇದೇ ಆಂಡ್ರಾಯ್ಡ್ ಫೋನ್ ನಿಂದಾಗಿ.  ಅಲ್ಲಿನ ಕೆಲವು ಪತ್ರಿಕೆಗಳ ಮೂಲಕ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಕೆಲವು ಜನರಿಗೆ ತೀರ್ಥಹಳ್ಳಿಯಂತಹ ಪುಟ್ಟ ಊರಿನವಳ ಕೆಲವು ಬರಹಗಳು ಅದೆಷ್ಟೋ ಜನರಿಗೆ ತಲುಪಿಸುವ ಈ ಆಂಡ್ರಾಯ್ಡ್ ಫೋನ್ ತಪ್ಪು ಅಂತ ಹೇಗೆ ಹೇಳೋದು.

ಇನ್ನೂ ಅಡಿಗೆಯ ವಿಷಯಕ್ಕೆ ಬರುವುದಾದರೆ ನಾನು ಹಾಗೆ ನನ್ನಂತಹ ಕೆಲವು ಸ್ತ್ರೀಯರಿಗೆ ಮದುವೆಗೆ ಮುನ್ನ ಯಾವತ್ತೂ ಅಡಿಗೆ ಮನೆಗೆ ಹೋಗುವ ಅಭ್ಯಾಸ ಇರುವುದಿಲ್ಲ. ಅಂತಹವರು ನಿಜಕ್ಕೂ ವಿವಾಹ ನಂತರ ಕಕ್ಕಾಬಿಕ್ಕಿಯಾಗುವುದು ಪಕ್ಕಾ, ಆಗೆಲ್ಲಾ ಕೈಹಿಡಿಯುವುದು ಅದೇ ಯುಟ್ಯೂಬ್ ಚಾನೆಲ್ ಗಳು, ಮನೆಯಲ್ಲಿರುವ ದಿನಸಿಗಳಿಂದ ಬೇಯಿಸಿ, ರುಚಿಯಾಗಿಸಲು ಕಲಿಸುವುದು ಅವರಲ್ಲವೇ , ಬಹುಶಃ ಅದಿಲ್ಲದೇ ‌ಹೋದರೆ ನಾನೀಗಲೂ ಹೋಟೇಲ್ ನಲ್ಲೇ ಊಟೋಪಚಾರ ಮುಗಿಸಬೇಕಿತ್ತು.  ಅದಕ್ಕೆ ನಾನು ಧನ್ಯವಾದ ತಿಳಿಸುವುದು ನನ್ನ ಆಂಡ್ರಾಯ್ಡ್ ಫೋನ್ ಗೆ.

ನನ್ನದೇ ಕುಟುಂಬದ ಹೆಚ್ಚಿನ ಸದಸ್ಯರು ಮುಂಬೈ, ದುಬೈನಲ್ಲೇ  ನೆಲೆಸುವುದು. ಹಿಂದೆಲ್ಲಾ ಎಸ್.ಟಿ.ಡಿ. ಬೂತ್ ನಿಂದ ಎಂದೋ ಒಮ್ಮೆ ಕರೆ ಮಾಡಿ ಮಾತನಾಡುತ್ತಿದ್ದೆವು , ಆದರೆ ಆಂಡ್ರಾಯ್ಡ್ ಬಂದ ಮೇಲೆ ಮುಂಬೈ ಮನೆಯ ಅಂಗಳದಲ್ಲೇ ಇರುವಂತೆ ಭಾಸವಾಗುತ್ತದೆ. ಪ್ರತಿ ಮುಂಜಾನೆ ವೀಡಿಯೋ ಕರೆಯ ಮೂಲಕ ನಿತ್ಯವೂ ಅವರನ್ನು ನೋಡಿ ಮಾತನಾಡುತ್ತೇನೆ, ಜೊತೆಗೆ ಅವರ ಮನೆ , ಊರು, ಅಲ್ಲಿ ನಡೆಯುವ ಪೂಜೆ, ಅಲಂಕಾರ ಎಲ್ಲವನ್ನೂ ನೋಡಲು ಸಹಕಾರಿ. ಅಷ್ಟೇ ಯಾಕೆ ಅವರ ಮನೆಯ ನಾಯಿಮರಿ ಕೂಡ ವಿಡಿಯೋ ತುಣುಕಿನಲ್ಲಿ ಆಗಾಗ ಕಾಣುವ ನನ್ನ ಪರಿಚಯ ಮಾಡಿಕೊಂಡಿದೆ .

ಹೆಣ್ಣು ಮಕ್ಕಳಿಗೆ ಅತಿ ಪ್ರಿಯವಾದ ವಿಷಯ ಬುಟ್ಟಿಗಳ ಖರೀದಿ, ನಾನದಕ್ಕೆ ಹೊರತಾಗಿಲ್ಲ, ಮೊದಲೆಲ್ಲ ಬೀದಿ ಬೀದಿಗಳಲ್ಲಿ ಅಲೆದು ಸುಸ್ತಾಗಿ, ಕೊನೆಗೆ ಕೈಗೆ ಸಿಕ್ಕ ಯಾವುದೋ ಬಟ್ಟೆ ಖರೀದಿ ಮಾಡಿ ಬರುತ್ತಿದ್ದೆವು ಆದರೆ ಆಂಡ್ರಾಯ್ಡ್ ಫೋನ್ ನಿಂದಾಗಿ ಆನ್ಲೈನ್ ಖರೀದಿ ಮಾಡಬಹುದು, ಇಚ್ಛೆಯಂತೆ ಉಡುಪುಗಳನ್ನು ಮನೆಯಿಂದಲೇ ಆರ್ಡರ್ ಮಾಡಬಹುದು, ಜೊತೆಗೆ ಅಲ್ಲಿಲ್ಲಿ ಅಲೆದಾಡುವ ಪ್ರಸಂಗವೂ ಇರುವುದಿಲ್ಲ.

ಇನ್ನೂ ಉದ್ಯೋಗದ ನಿಮಿತ್ತ ಅಲ್ಲಿಲ್ಲಿ ಅಲೆದಾಡುವ ಕಾಲವೊಂದಿತ್ತು ಈಗ ಹಾಗಿಲ್ಲ, ಆಂಡ್ರಾಯ್ಡ್ ಫೋನ್ ನಲ್ಲಿ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಕೆಲಸ ಹುಡುಕಬಹುದು, ಜೊತೆಗೆ ಕೆಲವೊಮ್ಮೆ ಸಂದರ್ಶನ ಕೂಡ ವಿಡಿಯೋ ಕಾಲ್ ಮೂಲಕ ಸಂದರ್ಶನ ನಡೆಯುತ್ತದೆ.

*ಆಂಡ್ರಾಯ್ಡ್ ಫೋನ್ ನಿಂದಾದ ಅನಾನುಕೂಲ*

ಯಾವುದೇ ವಿಷಯ ಇರಲಿ ಅದರಿಂದ ಒಳಿತು ಎಷ್ಟು ಇರುತ್ತದೆಯೋ ಅದಕ್ಕೆ ಸಮನಾಗಿ ಅನಾನುಕೂಲಗಳು ಖಂಡಿತಾ ಇರುತ್ತದೆ. ಹಾಗೆ ನನ್ನ ವಿಷಯದಲ್ಲೂ ಮೊಬೈಲ್ ಬಂದ ಮೇಲೆ ಕೆಲವೊಂದು ಉಪದ್ರವ ಆಗಿರುವುದಂತೂ ನಿಜ

೧. ಫೇಸ್ಬುಕ್ ನಕಲಿ ಖಾತೆಗಳ ಉಪಟಳ : ನಾನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಯಾರೊಂದಿಗೂ ಮಾತುಕತೆ ಬಯಸುವುದಿಲ್ಲ, ಆದರೆ ಅಪರಿಚಿತ ವ್ಯಕ್ತಿಗಳು, ಮಹಿಳೆಯರೂ ಸೇರಿದಂತೆ ಪದೇ ಪದೇ ಮೆಸೇಜ್ ಮಾಡುವುದು, ಕುಶಲೋಪರಿ ವಿಚಾರಿಸಿ, ಹಣಕ್ಕಾಗಿ ಬೇಡಿಕೆ ಇಡುವುದು, ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇನೆ . ನಿಜವಾಗಿಯೂ ಸಮಸ್ಯೆ ಇದ್ದವರು ಯಾವತ್ತೂ ಅಪರಿಚಿತರ ಬಳಿ ಹಂಚಿಕೊಳ್ಳುವುದಿಲ್ಲ , ಹಾಗಾಗಿ ದಯವಿಟ್ಟು ಇಂತಹ ಮೋಸಗಾರರನ್ನು ಯಾವತ್ತೂ  ನಂಬಿ ಮೋಸಹೋಗಬೇಡಿ.


೨. ಹೆಚ್ಚು ಸಮಯ ಮೊಬೈಲ್ ಫೋನ್ ನಲ್ಲೇ ಕಳೆಯುವುದು:  ಹೌದು ನಾನಂತೂ ಕಥೆ ಬರೆಯುವುದು, ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ, ಹಾಗಾಗಿ ಮೊಬೈಲ್ ಫೋನ್ ಗೆ ಅತಿ ಹೆಚ್ಚು ಸಮಯ ಮೀಸಲಿಟ್ಟ ಬಾಹ್ಯ ಪ್ರಪಂಚವನ್ನು ಮರೆಯುವಂತೆ ಆಗಿದೆ.

೩.  ಮಾನಸಿಕ ಒತ್ತಡ: ಹೌದು ಹೆಚ್ಚಾಗಿ ಮೊಬೈಲ್ ಫೋನ್ ಬಳಕೆ ಮಾಡಿದಂತೆ ಒಂಟಿಯಾಗಿ ಬಿಡುತ್ತೇನೆ, ಇದರಿಂದ ಯಾರೊಂದಿಗೂ ಬೇರೆಯದೇ,‌ಯಾರ ಸಂಗವೂ ಇರದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಸ್ವತಃ ನನ್ನದೇ ಅನುಭವ.

೪ . ಸಂಸಾರದಲ್ಲಿ ಭಿನ್ನಾಭಿಪ್ರಾಯ :  ಈ ಮೊದಲೇ ಹೇಳಿದಂತೆ ಹೆಚ್ಚು ಸಮಯ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ನಮಗೆ ಸಂಸಾರಕ್ಕೆ ಗಮನ ಕೊಡುವುದು ಕಷ್ಟಸಾಧ್ಯ. ಇದೇ ಕಾರಣಕ್ಕೆ ಭಿನ್ನಾಭಿಪ್ರಾಯ ಕೂಡ ಮೂಡುತ್ತಿದೆ.

———————————

ಅಮ್ಮು ರತನ್ ಶೆಟ್ಟಿ

Leave a Reply

Back To Top