ಕಾವ್ಯಸಂಗಾತಿ
ಮಂಜಿನ_ಬಿಂದು
ಹೊಸ ಕವಿತೆ
ನನ್ನ ಬಾಳು ಹೀಗೊಮ್ಮೆ ಅಂತ್ಯವಾದರೆ…
ನನ್ನ ಶವದ ಅಂತಿಮಯಾತ್ರೆಗೆ ಬರದಿರಿ ಯಾರೂ!
ನಾನಿನ್ನಿಲ್ಲವೆಂದು ನನ್ನಾತ್ಮೀಯರಿಗಂತೂ ಸುದ್ದಿ ಮುಟ್ಟದಿರಲಿ.
ಮಾತು ಕೊಂದ ಮೌನ ಘಳಿಗೆ ಎಂದಷ್ಟೇ
ಅವರ ನೆನಪಲಿ ಉಳಿಯಬಯಸುತ್ತೇನೆ.
ನಿಷ್ಕಲ್ಮಶ ಕಣ್ಣೀರಿಗೆ ಕಟ್ಟಿಬೀಳದಿರಲಿ ಎನ್ನ ಶವವು.
ನಾಟಕದ ಕಣ್ಣೀರಿಗೆ ಕಲ್ಮಶವಾಗದಿರಲಿ ಎನ್ನ ಶವವು.
ಮತ್ತೊಮ್ಮೆ ಮಾತನಾಡು ಎಂದು ಕೇಳುವುದು ಬೇಡ ಯಾರೂ
ಜೀವಿಸಿದ ಪ್ರತಿಗಳಿಗೆಯಲು ನಾನು ಲಭ್ಯವಿದ್ದೇ ಮಾತಿಗೆ.
ಮತ್ತೆ ಹುಟ್ಟಿ ಬಾ ಎಂದು ಕರೆಯುವುದೂ ಬೇಡ ಯಾರೂ!
ಮತ್ತೊಮ್ಮೆ ಈ ಲೋಕದ ಬಂಧನ ಬೇಡವೇ ಬೇಡವೆನಗೆ
ಇಲ್ಲಸಲ್ಲದ ಹೊಗಳಿಕೆ ತೆಗಳಿಕೆಯಲಿ
ಮುಳುಗಿ ಹೋಗಲಿನ್ನು ನಾನಿಲ್ಲ
ವ್ಯರ್ಥ ಮಾಡಿಕೊಳ್ಳದಿರಿ ನಿಮ್ಮ ಸಮಯ
ಎಂದೇ ನನ್ನ ಸಲಹೆ.
ಸಾಕುಸಾಕೆನಿಸಿದೆ ಒಂದೇ ಬದುಕಿಗೆ.
ಮತ್ತವವೇ ಜಂಜಾಟಗಳ ಅಂಟಿಸಿ ಕೊಳ್ಳಲಾರೆ ಆತ್ಮಕೆ.
ಎಷ್ಟೋ ಬಾರಿ ಸಾವಿಗೆಣಸಿ ಬೇಸರಗೊಂಡಿದ್ದೇ
ಕೊನೆಗೂ ನನ್ನ ತಲುಪಿತೆಂದು ಧನ್ಯವಾದವಷ್ಟೇ ಹೇಳಬೇಕು ಅದಕೆ…
ಭವ-ಬಂಧನ ತೊರೆದು ಹೋಗುವಂತ ಘಳಿಗೆ ಆತ್ಮ ತೃಪ್ತಿ.
ಚಿರ ವಿಶ್ರಾಂತಿಯಲಿ ಮನಸು ನಿದ್ರಿಸಲಿ…
ನನ್ನಸ್ತಿತ್ವ ಕಾದುಕೊಂಡ ಸಾಲುಗಳಷ್ಟೇ ಮತ್ತೆ ಮತ್ತೆ ಮಾತಿ ಗಿಳಿಯುತ್ತವೆ.
ಅಳಿಸಿದ ಘಳಿಗೆಗೊಮ್ಮೆ ಕ್ಷಮೆಯ ಕಾದಿರಿಸಿ…
ಸೂಪರ್.. ❤️