ಕಾವ್ಯಸಂಗಾತಿ
ಸಂಧ್ಯಾ ಶೆಟ್ಟಿ
ಹೊಸ ಚೈತನ್ಯ
ಭೂರಮೆಯ ಸಿಂಗಾರಕೆ ಋತುಗಳ ರಾಜ ವಸಂತನ ಆಗಮನ.
ಎಲ್ಲೆಲ್ಲೂ ಕಂಗೊಳಿಸುತ್ತಿದೆ ಹಸಿರಿನ ಸಂಭ್ರಮ.
ಚಿಗುರಿದ ಮಾಮರದ ಮರೆಯಲಿ ಕೋಗಿಲೆಯ ಕೂಗು
ಪ್ರಕೃತಿಯಲ್ಲಿ ತುಂಬಿಹುದು ಸಂತಸದ ಸೊಬಗು
ಶಿಶಿರ ಕಳೆದು ತರು-ಲತೆಗಳು ಚಿಗುರಿ ಸಂಭ್ರಮಿಸಿವೆ
ಹೊಸ ಹೂವುಗಳು ಕಂಪನು ಬೀರುತ್ತಾ ವಸಂತನಿಗೆ ಸ್ವಾಗತ ಕೋರುತ್ತಿವೆ
ಹೂವಿನ ಮಕರಂದ ಹೀರಿದ ದುಂಬಿಗಳು ಪುನಃ ಪುನಃ ಹೂವನ್ನು ಮುತ್ತಿಡುತ್ತಿವೆ
ತಣ್ಣಗೆ ಬೀಸುವ ತಂಪಾದ ತಂಗಾಳಿ ಚಿಗುರಿದ ಚಿಗುರನ್ನು ನಾಟ್ಯ ವಾಡಿಸುತ್ತಿದೆ
ಹಸಿರು ಸೀರೆ ತೊಟ್ಟ ಮದುವಣಗಿತ್ತಿಯಂತೆ ಗಿಡ ಮರಗಳು ಹಸಿರ ಹೊದಿಕೆ ಹೊತ್ತು ಕಂಗೊಳಿಸುತ್ತಿವೆ
ಮಾವು ಬೇವು ಹೊಂಗೆಗಳು ಚಿಗುರೊಡೆದು ಹೂ ಬಿಟ್ಟು ಹೂ ನಗೆಯ ಚೆಲ್ಲಿವೆ
ವಸಂತನ ಸ್ಪರ್ಶದಿಂದ ಹೂ ಬಿಟ್ಟ ಮರಗಳು ನಾವು ನಡೆವ ಹಾದಿಗೆ ಹೂವ ಚೆಲ್ಲಿ ಸ್ವಾಗತ ನೀಡುತ್ತಿವೆ
ಕಂಗೊಳಿಸುವ ಸುಮಗಳ ಸೌಂದರ್ಯ ಕಂಡು ಮನಸಿಂದು ಅರಳಿದೆ
ಹೊಂಗೆಯ ನೆರಳಿನ ತಂಪಲ್ಲಿ ನಿಂತರೆ ಸಾಕು ಮೈ ಮನ ಹಗುರಾಗುತ್ತಿದೆ
ಪ್ರಕೃತಿಯ ಸೊಬಗನ್ನು ಸವಿದ ಹೃದಯವೇಕೋ ಮೌನ ಗೀತೆ ಹಾಡಲು ಶುರು ಮಾಡಿದೆ
ಚಳಿ ಮತ್ತು ಬಿಸಿಲ ಬೇಗೆಯ ನಡುವೆ ಬರುವ ವಸಂತ ಬರಡು ಬದುಕಿಗೆ ಹೊಸ ಚೈತನ್ಯ ನೀಡುತ್ತಿದೆ
ಎಲ್ಲೋ ಹುದುಗಿರುವ ಬಾಳಿಗೆ ಜೀವ ಸಂಚಾರವಾಗುತ್ತಿದೆ.
-ಸಂಧ್ಯಾ ಶೆಟ್ಟಿ
ಸೂಪರ್.