ಕಾವ್ಯ ಸಂಗಾತಿ
ವಿಷ್ಣು ಆರ್. ನಾಯ್ಕ
“ರಕ್ಷಿಸು ಕನ್ನಡ ಮಾತೆ”
ತಾಯೆ ಕನ್ನಡ ಮಾತೆ ನಿನಗೆ
ಮುದದಿ ವಂದಿಪೆ ನಲಿವಲಿ
ಸ್ವರ್ಣ ಕಳೆಯನು ತಳೆದು
ಬದುಕು ಸಲಹು ನೀನು ಬಲದಲಿ
ಕನ್ನಡಾಂಬೆಯ ಅಂಗ ಛೇದಿಸಿ
ಮಾಂಸ ಬೇಡಿಹ ರಕ್ಕಸ
ಸಾಮರಸ್ಯದ ಮಂತ್ರವಿಲ್ಲದೇ
ನಿನ್ನ ‘ಗೂಡಿಗೆ’ ಸಂಕಟ
ಅನ್ನ ನೀಡುವ ನಿನ್ನ ಭಾಷೆಯ
ಕೊಲ್ಲ ಹೊರಟಿದೆ ಜನಮನ
ಅರಿವು ಪಡೆಯದೇ ನಿತ್ಯ ಸಾಗಿದೆ
ಅನ್ಯ ಭಾಷೆಯ ಮಣಮಣ
ತಾಯ ಅಮೃತ ಉಣ್ಣುವಾ ಮಗು
ಸಂಕಟದಿ ಬಿಕ್ಕಳಿಸಿದೆ
ಅಮೃತದ ಜಲ ಕಸಿದ ಜನಮನ
ವಿಕಟಾಟ್ಟಹಾಸದಿ ನಕ್ಕಿದೆ
ಚೆಂದ ಸುಂದರ ಕಾಡು, ಖಗ- ಮೃಗ
ಬದುಕು ನಂದಿತು ದಾಳಿಗೆ
ತುತ್ತು ಚೀಲವ ಪೊರೆಯಲೋಸುಗ
ಬಿಕ್ಕಿ ಹೊರಟಿವೆ ಊರಿಗೆ
ಉದಯವಾಗಿಹ ನಿನ್ನ ನಾಡೊಳು
ಸಾಮರಸ್ಯವು ಪಥ ತಪ್ಪಿದೆ
ಸರ್ವ ಮತಗಳ ಶಾಂತಿ ತೋಟದಿ
ಕೋಮು ‘ಮೃಗ’ ಊಳಿಟ್ಟಿದೆ
ಕನ್ನಡಿಗರೆ ಅನ್ಯರಾಗಿ
ಬದುಕು ಸಾಗಿದೆ ಗಡಿಯಲಿ
ಕನ್ನಡಾಂಬೆಯು ಮೂಕಳಾದ
ಪರಿಯ ನಾನೇನೆನ್ನಲಿ
ತನ್ನ ಒಳಗನು ತಾನು ತಿಳಿದರೆ
ನೂರಾರು ಬರುವುದು ಸಂಭ್ರಮ
ಬಳಲಿ ಬದುಕನು ಕಳೆಯುತ್ತಿದ್ದರೆ
ಅಳಿದು ಹೋಹುದು ನಂದನ
ವಿಷ್ಣು ಆರ್. ನಾಯ್ಕ