ಮಕ್ಕಳ ದಿನಾಚರಣೆಯ ವಿಶೇಷ

ಮಕ್ಕಳ ಸಂಗಾತಿ

ಮಕ್ಕಳು : ನಂದನವನದಲ್ಲಿ ನಗುವ ಹೂಗಳು

ಕೆ. ಎನ್.ಚಿದಾನಂದ

ಮಕ್ಕಳು : ನಂದನವನದಲ್ಲಿ ನಗುವ ಹೂಗಳು
( ನವೆಂಬರ್ 14 : ಮಕ್ಕಳ ದಿನಾಚರಣೆ )

ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂಬುದು ದೃಢವಾದ ನಂಬಿಕೆ. ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಭಾರತದ ಭವಿಷ್ಯವು ಇಂದಿನ ಮಕ್ಕಳ ಬೆಳವಣಿಗೆ ಮತ್ತು ವಿಕಾಸದ ಮೇಲೆ ನಿಂತಿದೆ ಎಂಬುದು ಒಂದು ಕಾಲದ ಮಾತಾದರೆ ” ಇಂದಿನ ಮಕ್ಕಳೇ ಇಂದಿನ ಪ್ರಜೆಗಳು, ” ಎಂಬುದು ಈಗಿನ ಮಾತಾಗಿದೆ. ಈ ಮಕ್ಕಳ ಬೆಳವಣಿಗೆ ಮತ್ತು ವಿಕಾಸವು ದಿನದಿನದ ಕ್ಷಣಕ್ಷಣವೂ ಮುಖ್ಯವೆನಿಸಿದೆ. ಮಕ್ಕಳಿಗೆ ನಾವು ನೀಡುವ ಪ್ರೀತಿ ಮತ್ತು ಕಾಳಜಿಯು ನಮ್ಮ ದೇಶದ ಭವಿಷ್ಯವು ಉತ್ತಮವಾಗಿ ಅರಳಲು ಸಹಕಾರಿಯಾಗುತ್ತದೆ. ನಮ್ಮೆಲ್ಲರ ಪ್ರೀತಿ ಮಕ್ಕಳ ದಿನಾಚರಣೆಯ ಚಿಂತನೆಗೆ ಸಂದ ಗೌರವವೆನಿಸಿದೆ. ಏಕೆಂದರೆ
ಮಕ್ಕಳು ಸುಂದರ ಸಿರಿಧರೆಯ ನಂದನವನದಲ್ಲಿ ಸಂತಸದ ನಗುವನ್ನು ಬೀರುತ್ತಾ ಅರಳುತ್ತಿರುವ ಹೂಗಳು. ಚಿಣ್ಣರ ನಲಿದಾಟ, ಸವಿಯುವ ರಸದೂಟ, ಕಲಿಯುವ ಹೊಸಪಾಠ ಎಲ್ಲವೂ ವಿಭಿನ್ನ, ವಿಶಿಷ್ಠ ಹಾಗೂ ವೈವಿಧ್ಯಮಯವಾಗಿರುತ್ತದೆ. ಮಕ್ಕಳ ಮುಖದಲ್ಲಿನ ಪ್ರತಿ ಸಣ್ಣ ನಗು ನಮ್ಮ ಹೃದಯಕ್ಕೆ ಮಾತೃತ್ವದ ಮಿತಿಯಿಲ್ಲದ ಸಂತೋಷವನ್ನು ನೀಡುತ್ತದೆ. ನವ ಚೈತನ್ಯವನ್ನು ಉಂಟು ಮಾಡುತ್ತದೆ. ಒಂದು ಮಗು ಯಾವಾಗಲೂ ದೊಡ್ಡವರಿಗೆ ಮೂರು ವಿಷಯಗಳನ್ನು ಕಲಿಸುತ್ತದೆ. ಯಾವುದೇ ಕಾರಣವಿಲ್ಲದೆ ಸಂತೋಷವಾಗಿರಲು, ಯಾವಾಗಲೂ ಯಾವುದರಲ್ಲಿಯಾದರೂ ಕಾರ್ಯನಿರತವಾಗಿರಲು ಮತ್ತು ಮಗು ಬಯಸಿದ ಎಲ್ಲವನ್ನೂ ತನ್ನ ಶಕ್ತಿಯಿಂದಲೇ ಹೇಗೆ ಪಡೆಯಬೇಕು ಎಂಬುದನ್ನು. ಮಕ್ಕಳ ಕಣ್ ದೃಷ್ಟಿಯಲ್ಲಿ ಜಗತ್ತಿನಲ್ಲಿ ಎಲ್ಲವೂ ಅದ್ಭುತಗಳೇ ಆಗಿವೆ. ಅವರ ಕಣ್ಣುಗಳಲ್ಲಿ ಕೋಟ್ಯಂತರ ಅದ್ಭುತಗಳಿವೆ. ನವೆಂಬರ್ 14 ಮಕ್ಕಳ ದಿನಾಚರಣೆ. ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತೆ ಮತ್ತು ಪರಿಶುದ್ಧತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಅವರು ಅಮೂಲ್ಯ. ಏಕೆಂದರೆ ಅವರು ನಮ್ಮ ಭವಿಷ್ಯ! ಆದ್ದರಿಂದಲೇ ಚಾಚಾ ನೆಹರೂರವರು ” THE CHILDREN OF TODAY WILL MAKE THE INDIA OF TOMORROW. THE WAY WE BRING THEM UP WILL DETERMINE THE FUTURE OF OUR COUNTRY.” ಎಂದು ಹೇಳಿದ್ದಾರೆ. ಅಂದರೆ ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಾಣ ಮಾಡುತ್ತಾರೆ. ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹೀಗೆ ಭಾರತದ ಭವಿಷ್ಯವನ್ನು ನಿರ್ಧರಿಸುವ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಬಾರದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಿಂದುಳಿಯಬಾರದು. ಹೀಗೆಂದೆ ಮಕ್ಕಳನ್ನು ಮಕ್ಕಳಿಗೆ ಅರ್ಥ ಮಾಡಿಸುವ, ಮಕ್ಕಳು ಸಂತೋಷದಿಂದ ನಲಿಯುವ ದಿನ ಮಕ್ಕಳ ದಿನಾಚರಣೆಯಾಗಿ ರುತ್ತದೆ. ಪ್ರತಿ ವರ್ಷ ನವೆಂಬರ್ 14 ರಂದು ಭಾರತದಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳೆಂದರೆ ಚಾಚಾ ನೆಹರೂರವರಿಗೆ ಬಹಳ ಪ್ರೀತಿ. ಆದ್ದರಿಂದ ಈ ದಿನವನ್ನು ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂರವರ ಜನ್ಮದಿನದ ಸವಿನೆನಪಿಗಾಗಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. 1964 ರಲ್ಲಿ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರುರವರ ನಿಧನದ ನಂತರ ಈ ದಿನವು ಭಾರತದಲ್ಲಿ ಮಕ್ಕಳ ದಿನಾಚರಣೆಯಾಗಿ ಜಾರಿಗೆ ಬಂದಿತು. ಈ ದಿನವನ್ನು ಮಕ್ಕಳ ಶಿಕ್ಷಣ ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಮಾಡಲಾಗುತ್ತದೆ. ಮಕ್ಕಳು ದೇವರಂತೆ ಎಂದು ಆಗಾಗ್ಗೆ ಜನ ಹೇಳುತ್ತಿರುವುದನ್ನು ನಾವು ಕೇಳಿರು ತ್ತೇವೆ. ಅವರ ಮುಗ್ದತೆ, ನಿಷ್ಕಲ್ಮಶ ನಗು, ಮಿತಿ ಇಲ್ಲದ ಪ್ರೀತಿ, ಸಕಾರಾತ್ಮಕ ಮನಸ್ಸು ವಯಸ್ಕರಾದ ನಮ್ಮಲ್ಲು ಬದುಕಿನ ಅಂತ್ಯದ ವರಗೂ ಶಾಶ್ವತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಬಹುತೇಕ ಜನರ ಆಸೆಯೇ ತಾವು ಮತ್ತೆ ಚಿಕ್ಕ ಮಕ್ಕಳಾಗಬೇಕು ಎಂಬುದಾಗಿರುತ್ತದೆ, ಏಕೆಂದರೆ ಆ ವಯಸ್ಸು, ಮನಸ್ಸು, ಸಂತೋಷ ಪ್ರೀತಿ ಎಲ್ಲವೂ ನಿರ್ಮಲವಾಗಿರುತ್ತದೆ. ಅದು ಜೀವನದಲ್ಲಿ ಮತ್ತೆಂದು ಮರುಕಳಿಸದು. ಈ ದಿನದಂದು ಶಾಲೆ, ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳಲ್ಲಿಯೂ ಕೂಡ ರಸಪ್ರಶ್ನೆ, ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಕ್ಕಳ ದಿನಾಚರಣೆಯಂದು ಮಕ್ಕಳ ಮೇಳ, ಮಕ್ಕಳ ಕೂಟ, ಮಕ್ಕಳಿಗಾಗಿ ಚಿತ್ರ ಬರೆಯುವ ಸ್ಪರ್ಧೆ, ಆಟೋಟಗಳ ಸ್ಪರ್ಧೆ ನಡೆಸಲಾಗುತ್ತದೆ. ಮಕ್ಕಳ ಚಲನಚಿತ್ರ ಪ್ರದರ್ಶನ ಮಾಡಲಾಗುತ್ತದೆ. ಆ ಒಂದು ವರ್ಷದ ಅವಧಿಯಲ್ಲಿ ಅತಿಯಾದ ಶೌರ್ಯ, ಅಸಾಮಾನ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಅಂದರೆ ನೀರಿನಲ್ಲಿ ಮುಳುಗಿ ಸಾಯುತ್ತಿದ್ದವರ ಪ್ರಾಣ ಉಳಿಸಿದ, ಬೆಂಕಿಯಲ್ಲಿ ಬಿದ್ದು ಸುಟ್ಟು ಹೋಗುತ್ತಿದ್ದವರ ಪ್ರಾಣ ರಕ್ಷಿಸಿದ ಮಕ್ಕಳಿಗೆ ಶೌರ್ಯಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿ ಪದಕ, ಪ್ರಶಸ್ತಿ ಹಾಗೂ ಹಣವನ್ನು ನೀಡಿ ಸತ್ಕರಿಸುವುದು ಇವೇ ಮೊದಲಾದ ಕಾರ್ಯಕ್ರಮಗಳನ್ನು ರಾಷ್ಟ್ರದಾದ್ಯಂತ ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗುವುದು. ದೇಶಪ್ರೇಮ, ಅನ್ಯಾಯವನ್ನು ವಿರೋಧಿಸುವ ಸ್ವಭಾವ, ನಿರಂತರ ಹೋರಾಟ ಮಾಡುವ ಪ್ರವೃತ್ತಿ, ಬಡವರ ಬಗ್ಗೆ ನ್ಯಾಯಕ್ಕಾಗಿ ಅನುಕಂಪ, ಎಲ್ಲರನ್ನೂ ಗೌರವದಿಂದ ಕಾಣುವುದು, ಧೈರ್ಯ, ಜೀವನೋತ್ಸಾಹ, ಸ್ನೇಹಪರತೆ, ಹೃದಯ ಶ್ರೀಮಂತಿಕೆ ಮೊದಲಾದ ಉತ್ತಮ ಗುಣಗಳನ್ನು ಮಕ್ಕಳು ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಗಳನ್ನಾಗಿ ರೂಪುಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಉತ್ತಮ ಶಿಕ್ಷಣ, ಉದಾತ್ತ ಮೌಲ್ಯಗಳು ಹಾಗೂ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಸತ್ಪ್ರ ಜೆಗಳಾಗಲು ಹಿತವಚನ ನೀಡಲಾಗುವುದು. ಭಾರತದ ಮಕ್ಕಳು ಜಗತ್ತಿನ ಇತರ ಯಾವುದೇ ರಾಷ್ಟ್ರದ ಮಕ್ಕಳಿಗೆ ಹಿಂದೆ ಬೀಳದಂತೆ ಬೆಳೆಯಲು, ಉತ್ತಮ ವ್ಯಕ್ತಿತ್ವನ್ನು ಪಡೆಯಲು ತಿಳುವಳಿಕೆ ನೀಡಲಾಗುತ್ತದೆ. ಭಾರತದ ಎಲ್ಲ ಮಕ್ಕಳೂ ಜಾತಿ, ಮತ, ಪಂಥ, ಪಂಗಡಗಳಿಗೆ ಸಂಬಂಧಿಸಿದ ಸಂಕುಚಿತ ಭಾವನೆಯನ್ನು ಬದಿಗೊತ್ತಿ ಒಟ್ಟಾರೆ ರಾಷ್ಟ್ರೀಯ ಭಾವನೆಯಿಂದ ಹೆಚ್ಚಿನ ದೇಶಾಭಿಮಾನದಿಂದ ನಡೆದುಕೊಳ್ಳಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ತಮ್ಮ ಬಾಲ್ಯದಿಂದಲೇ ಉತ್ತಮ ಜೀವನ ಮೌಲ್ಯಗಳನ್ನು, ಉದಾತ್ತ ಚಿಂತನೆಯನ್ನೂ ಬೆಳೆಸಿಕೊಂಡು ಸರ್ವಾಂಗೀಣ ಸುಂದರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪಠ್ಯ ವಿಷಯಗಳಲ್ಲಿ, ಪತ್ಯೇತರ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿ ಸಾಧನೆ ಮಾಡಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ನಾಣ್ನುಡಿ ಇದೆ. ಎಳೆಯ ವಯಸ್ಸಿನಲ್ಲಿ ಕೆಟ್ಟದ್ದಕ್ಕೆ ಮಾರು ಹೋಗದೆ ಒಳ್ಳೆಯದನ್ನೇ ವ್ಯಕ್ತಿತ್ವದಲ್ಲಿ ತುಂಬಿಕೊಳ್ಳಲು ಸತತವಾಗಿ ಶ್ರಮಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿನ ಒಳ್ಳೆಯದನ್ನು ಸ್ವೀಕರಿಸಿ ಅನುಸರಿಸಬೇಕು. ಜಾತೀಯತೆ, ಮತೀಯತೆ, ಅಸ್ಪೃಶ್ಯತೆಯಂತಹ ಕಳಪೆ ಹಾಗೂ ಹೇಯ ಆಚರಣೆಗಳನ್ನು ಬಿಟ್ಟು ಬಿಡಬೇಕು. ಅಂಧಾನುಚರಣೆ, ಮೂಢನಂಬಿಕೆ, ಮೇಲು-ಕೀಳು ಭಾವನೆಗಳನ್ನು ಬಿಟ್ಟು ಬಿಡಬೇಕು. ವೈಜ್ಞಾನಿಕ ಮನೋಭಾವ, ಸಮಾನತೆ, ಸಮಾನ ಗೌರವ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಿತ್ತಿ ಬೆಳೆಸಬೇಕು. ಮಗು ಹುಟ್ಟುವಾಗ ವಿಶ್ವಮಾನವನಾಗಿರುತ್ತದೆ. ಅದಕ್ಕೆ ಯಾವುದೇ ಮೇಲು ಕೀಳು, ಬೇಧ-ಭಾವ ತಿಳಿದಿರುವುದಿಲ್ಲ. ಮಗು ಯಾವುದೇ ಜಾತಿ, ಮತ, ಪಂಥ, ಧರ್ಮದ ನೆಲೆಗಟ್ಟಿನ ಅರ್ಥವನ್ನು ಮಾಡಿಕೊಂಡಿರುವುದಿಲ್ಲ. ಅದಕ್ಕಾಗಿಯೇ ವಿಶ್ವಮಾನವ ಕವಿ ರಸಋಷಿ ಕುವೆಂಪುರವರು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಠಿ ಎಂಬ ಪಂಚಮಹಾ ತತ್ವಗಳನ್ನು ಜಗತ್ತಿಗೆ ಸಾರಿದ್ದಾರೆ. ಈ ನಿಟ್ಟಿನಲ್ಲಿ ಈ ರಾಷ್ಟ್ರದ ಎಲ್ಲ ಮಕ್ಕಳೂ ತಯಾರಾಗಲು ಸತತವಾಗಿ ಶ್ರಮಿಸಬೇಕು. ತನ್ಮೂಲಕ ಮುಂದಿನ ಭಾರತ ಭವ್ಯಭಾರತವಾಗಿರುವಂತೆ ನೋಡಿಕೊಳ್ಳಬೇಕು. ಸಮಾಜಘಾತುಕ ಶಕ್ತಿಗಳ, ದೇಶದ್ರೋಹಿ ಶಕ್ತಿಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಈ ರಾಷ್ಟ್ರದ ಕೀರ್ತಿ, ಪ್ರತಿಷ್ಠೆ, ಘನತೆ, ಗೌರವವನ್ನು ಹೆಚ್ಚಿಸುವ ಕೆಲಸವನ್ನು ಕೆಲಸವನ್ನು ಮಾಡಲು ದೃಢ ಸಂಕಲ್ಪವುಳ್ಳವರಾಗಬೇಕು ಎಂದು ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತದೆ. ನಾವು ಮಕ್ಕಳು ಮಾನವರಾಗಲು ಕಲಿಸಬೇಕು
ನಮ್ಮ ಭವಿಷ್ಯವು ಸಂತೋಷ ಮತ್ತು ಸಾಮರಸ್ಯದಿಂದ ತುಂಬಿರುವುದನ್ನು ನಾವು ನೋಡಬೇಕೆಂದರೆ, ನಾವು ನಮ್ಮ ಮಕ್ಕಳಿಗೆ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಮಾನವರಾಗಲು ಕಲಿಸಬೇಕು. ಮಕ್ಕಳು ಸ್ವರ್ಗದಿಂದ ಬಂದ ಹೂವುಗಳು. ಈ ಜಗತ್ತನ್ನು ನಮ್ಮ ಮಕ್ಕಳಿಗೆ ಸುರಕ್ಷಿತ ಮತ್ತು ಆನಂದದಾಯಕ ಸ್ಥಳವನ್ನಾಗಿ ಮಾಡೋಣ. ಏಕೆಂದರೆ ಮಕ್ಕಳು ನಮ್ಮ ಉಜ್ವಲ ನಾಳೆಯ ಭರವಸೆಗಳನ್ನು ಮತ್ತು ನಮ್ಮ ಸಂತೋಷದ ಭವಿಷ್ಯದ ಕನಸುಗಳನ್ನು ಹೊತ್ತಿದ್ದಾರೆ. ಎಲ್ಲ ಮಕ್ಕಳ ಕನಸುಗಳು ನೆನಸಾಗಲಿ. ಭಾರತ ದೇಶದ ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.


ಕೆ. ಎನ್.ಚಿದಾನಂದ

Leave a Reply

Back To Top