ಮಕ್ಕಳ ದಿನಾಚರಣೆ
ಸೋಮಲಿಂಗ ಬೇಡರ
ಬಲಿಪಾಡ್ಯಮಿ
ಸುರಾಸುರರ ಕಾಲದಲ್ಲಿ
ಇದ್ದನೊಬ್ಬ ರಾಜನು
ಅವನ ಹೆಸರು ಮಹಾಬಲಿಯು
ಮಹಾಶೂರ ಅಸುರನು
ವಿಷ್ಣುದೇವರೆಂದರವಗೆ
ಭಕ್ತಿ ಉಕ್ಕಿ ಬರುವುದು
ಧೈರ್ಯದಲ್ಲಿ ಅವನಿಗಾರು
ಸಾಟಿಯಾಗಿ ನಿಲ್ಲರು
ಮೂರು ಲೋಕಕೆಲ್ಲ ಬಲಿಯು
ಆಗಿ ಚಕ್ರವರ್ತಿಯು
ಆಳುತಿರಲು ದೇವತೆಗಳು
ಹೆದರಿ ನಡುಗುತ್ತಿದ್ದರು
ಸುರರು ಹೋದರೆಲ್ಲ ಕೂಡಿ
ವಿಷ್ಣು ದೇವನಲ್ಲಿಗೆ
ಬಲಿಯ ಭಯವು ನಮಗೆ ದೇವ
ಎಂದರವರು ಮೆಲ್ಲಗೆ
ಹರಿಯು ತನ್ನ ಬಳಗಕೆಲ್ಲ
ಅಭಯವನ್ನು ಕೊಟ್ಟನು
ಕುಬ್ಜ ವಾಮನ್ರೂಪಿಯಾಗಿ
ಭೂಮಿಗಿಳಿದು ಬಂದನು
ಭಿಕ್ಷೆಗಾಗಿ ಬಲಿಯ ಬಳಿಗೆ
ಹೋಗಿ ನಿಂತ ವಾಮನ
ಬೇಡು ನಿನಗೆ ಏನು ಬೇಕು
ಕೊಡುವೆ ಎಂದ ದಾನವ
ಒಡನೆ ಕುಬ್ಜ ಮೂರು ಹೆಜ್ಜೆ
ಜಾಗವನ್ನು ಕೇಳಿದ
ಮಹಾಬಲಿಯು ಅದನು ಕೊಟ್ಟು
ದಾನಶೂರನೆನಿಸಿದ
ವಾಮನ ರೂಪಿ ಕುಬ್ಜ ಹರ
ದೊಡ್ಡದಾಗಿ ಬೆಳೆದನು
ಒಂದು ಹೆಜ್ಜೆ ಧರೆಯ ಮೇಲೆ
ಧಾಪುಗಾಲಿಟ್ಟನು
ಮತ್ತೆ ಒಂದು ಪಾದ ನಭದಿ
ಪೂರ್ತಿ ಊರಿ ನಿಂತನು
ಇನ್ನೊಂದೆಲ್ಲಿ ಇಡಲಿ ಎಂದು
ಕೇಳ್ದ ಹರನು ಬಲಿಯನು
ಅದನು ತನ್ನ ತಲೆಯ ಮೇಲೆ
ಇಡಲು ಬಲಿಯು ಕೋರಿದ
ಹಾಗೆ ಮಾಡಿ ಬಲಿಗೆ ಹರನು
ಪಾತಾಳಕೆ ತಳ್ಳಿದ
ಕೊನೆಯ ಘಳಿಗೆ ಬಲಿಗೆ ವಿಷ್ಣು
ವರವನೊಂದು ಕೊಟ್ಟನು
ಅದರ ಫಲವೆ ಬಲಿಪಾಡ್ಯಮಿ
ಬಲಿಯ ಪೂಜೆಗಿಟ್ಟನು
—————————————-
ಸೋಮಲಿಂಗ ಬೇಡರ