ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಒಲವಿದ್ದರಲ್ಲವೇ ದೀಪದ ಬೆಳಕು..

ಬೆಳಕು ಯಾರಿಗೆ ಬೇಡ ಹೇಳಿ…? ಬೆಳಕಿಲ್ಲದೆ ಬದುಕಿನ ಹಾದಿಯಲ್ಲಿ ನಡೆಯುವುದಾದರೂ ಹೇಗೆ…??

 ಖ್ಯಾತ ನಾಟಕಕಾರರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಗಿರೀಶ್ ಕಾರ್ನಾಡ್ ಅವರು,  ತಮ್ಮ ನಾಟಕದಲ್ಲಿ “ಬೆಳಕಿಲ್ಲದ ಹಾದಿಯಲ್ಲಿ ನಡೆಯಬಲ್ಲೆ;  ಕನಸುಗಳೆಲ್ಲಿದ ಹಾದಿಯಲ್ಲಿ ಹೇಗೆ ನಡೆಯಲಿ…??  ಎಂದು ತಿಳಿಸಿದ್ದಾರೆ.

 ಬೆಳಕು ಒಂದು ಸಂಕೇತ. ಬೆಳಕು ಜಗತ್ತಿನ ಎಲ್ಲಾ ಜ್ಞಾನದ ಕಿಟಕಿಗಳ ಅನಾವರಣ.  ಹಬ್ಬಗಳು ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ರಾಯಭಾರಿಗಳು.  ಅವು ಒಬ್ಬರನ್ನೊಬ್ಬರು ಒಂದು ಗೂಡಿಸುವ, ಪ್ರೀತಿಯಿಂದ ಮಾತನಾಡಿಸುವ, ಸಂಬಂಧವನ್ನು ಗಟ್ಟಿಗೊಳಿಸುವ ಪರಂಪರೆಯನ್ನು ಮೊದಲಿನಿಂದಲೂ ಉಳಿಸಿಕೊಂಡು ಬಂದಿವೆ.

ಯುಗಾದಿ, ದೀಪಾವಳಿ ದಸರಾ,ಎಳ್ಳು ಅಮವಾಸ್ಯೆ, ಮಕರ ಸಂಕ್ರಮಣ, ಮೊಹರಮ್, ಕ್ರಿಸ್ ಮಸ್…. ಮುಂತಾದ ಹಬ್ಬಗಳು ತಮ್ಮದೇ ಆದ ಮಹತ್ವವನ್ನು ಒಳಗೊಂಡಿವೆ. ಸಾಮಾಜಿಕ ಜೀವನದಲ್ಲಿ ಉತ್ಸವಗಳು, ಜಾತ್ರೆಗಳು, ಉರುಸುಗಳು, ಮುಂತಾದ ಸಾಂಸ್ಕೃತಿಕ ಆಚರಣೆಗಳು ಹೊಸ ಜಗತ್ತನ್ನು ರೂಪಿಸುವ ಮೌಲ್ಯಯುತವಾದ ಆಶಯಗಳನ್ನು ಒಳಗೊಂಡಿವೆ.

ಯಾವುದೇ ಒಂದು ಹಬ್ಬ ಆಚರಣೆಗೆ ಮುಖ್ಯ ಮನಸ್ಸು.  ಅದು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುವ ಸಂದರ್ಭಗಳಲ್ಲಿ ಬೇರೆ ಬೇರೆ ಧರ್ಮದವರು ಇತರ ಧರ್ಮದವರ ಆಚರಣೆಗಳನ್ನು ಗೌರವಿಸುವ, ಪ್ರೀತಿಸುವ ಅದರಲ್ಲಿ ಪಾಲ್ಗೊಳ್ಳುವ ದೊಡ್ಡತನವಿರಬೇಕು. ಇಂತಹ ದೊಡ್ಡತನವು ನಮ್ಮ ಭಾರತೀಯ ಪರಂಪರೆಗಿದೆ.

 ನಮ್ಮ ದೇಶ ಹಲವು ಧರ್ಮಗಳ  ಕಟ್ಟುಪಾಡುಗಳಿಂದ ಕೂಡಿದೆ.  ಇವತ್ತು ನಾವು ಭಾವೈಕ್ಯತೆಯಿಂದ ಬಾಳುತ್ತೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಹಬ್ಬಗಳೇ..!!  ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗುವಂತಹ,  ತಾಗುವಂತಹ ಸಮಯ ಹಬ್ಬಗಳು..!!  ಇಂತಹ ಹಬ್ಬಗಳನ್ನು ಆಚರಿಸಲು ಕುಟುಂಬ ವರ್ಗದವರೆಲ್ಲರೂ ಒಂದುಗೂಡಿ ಆಚರಿಸಿದರೇ ಮಾತ್ರ ಸಾಲದು.  ಕೇವಲ ದೈಹಿಕವಾಗಿ ಬೆರೆತರಷ್ಟೇ ಸಾಮರಸ್ಯ ಮೂಡದು. ದೈಹಿಕವಾಗಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವಾಗಿ ,  ಪ್ರೀತಿಯನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಪರಸ್ಪರ ಮಾತನಾಡುತ್ತಾ, ಹಬ್ಬಗಳನ್ನು ಆಚರಿಸಿದಾಗ ಮಾತ್ರ ಹಬ್ಬಗಳ ಆಚರಣೆಗೆ ಒಂದು ಸಾರ್ಥಕ ಸಿಗುತ್ತದೆ.

 ಇತ್ತೀಚಿನ ಜಾಗತೀಕರಣ ಮತ್ತು ಯಾಂತ್ರಿಕರಣದ ದಿನಮಾನಗಳಲ್ಲಿ ಹಬ್ಬಗಳು ತಮ್ಮ ಮೊದಲಿನ ಹಿಡಿತವನ್ನು ಕಳೆದುಕೊಂಡರೂ, ಇನ್ನೂ ಆ ಪರಂಪರೆ ಮುಂದುವರೆದಿದೆ ಎನ್ನುವುದು ನಮಗೆ ಸಮಾಧಾನದ ವಿಷಯವೆನ್ನಬಹುದು. ಹಬ್ಬಗಳು ಮಕ್ಕಳಿಂದ ವೃದ್ಧರವರೆಗೂ ನವಚೈತನ್ಯವನ್ನು, ಉತ್ಸಾಹವನ್ನು ತುಂಬುತ್ತವೆ.

 ದೂರ ದೂರದ ಊರಿನಿಂದ ಬರುವ ನೆಂಟರು, ಬಂಧುಗಳು,  ಮಕ್ಕಳು ಎಲ್ಲರೂ ಸೇರಿಕೊಂಡು ಅತ್ಯುತ್ಸಾದಿಂದ ಹಬ್ಬವನ್ನು ಆಚರಿಸುವಲ್ಲಿ ಪಾಲ್ಗೊಳ್ಳುತ್ತಾರೆ.  ಇದು  ಒಂದು ನೆಪ ಮಾತ್ರ ಅದರಾಚೆ ಅಲ್ಲಿ ಪ್ರೀತಿ ಇದೆ. ಗೌರವವಿದೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವ ಹೊಸ ಬಗೆಯ ಆಶಯ ಹೊಂದಿದೆ. ಇಂತಹ ಆಶಯಗಳ ಹೂರಣವೇ ಹಬ್ಬಗಳು..!!

ದೀಪಾವಳಿ ದೀಪಗಳ ಹಬ್ಬ. ಬೆಳಕಿನ ಹಬ್ಬ.  ಅದು ಕತ್ತಲಿನಿಂದ ಬೆಳಕಿನ ಕಡೆಗೆ ನಮ್ಮನ್ನು ಕರೆದುಯ್ಯುವ ಹಬ್ಬ.  ಈ ಹಬ್ಬಕ್ಕೆ ಮಹಾಭಾರತ, ರಾಮಾಯಣದಂತಹ ಮಹಾ ಕಾವ್ಯಗಳ ನಂಟಿದೆ. ಇಲ್ಲಿಯ ಜನರ ಬದುಕು, ಭವಣೆಯ ಜೊತೆಗೆ ಸಂಬಂಧವನ್ನು ಬೆಸೆದುಕೊಂಡಿದೆ. ಪಾಂಡವರ, ಕೌರವರ ಪ್ರಸ್ತಾಪಗಳು ಒಳ್ಳೆಯದರ  ಮತ್ತು ಕೆಟ್ಟದರ ಸಂಕೇತಗಳಾಗಿ ರೂಪಗೊಂಡಿವೆ.

ಅದೇನೇ ಇರಲಿ,  ಒಲವಿದ್ದಾಗ ಮಾತ್ರ ಹಬ್ಬಗಳ ಆಚರಣೆ ಅರ್ಥಪೂರ್ಣವಾಗಬಲ್ಲದು.   ಎಣ್ಣೆ ಬತ್ತಿ ಒಂದಕ್ಕೊಂದು ಕೂಡಿಕೊಂಡಾಗ ತಾನೆ ಹಣತೆಯೊಳಗೆ ಕುಡಿಯೊಡೆದು ಬೆಳಕು ಬೀರಲು ಸಾಧ್ಯ.  ಅಂತಹ ಒಲವು ಇದ್ದಾಗಲೇ ಬೆಳಕು ಸಾಧ್ಯ.   ಮನುಷ್ಯರಾದ ನಾವು ಒಬ್ಬರನ್ನೊಬ್ಬರನ್ನು ಅರಿತುಕೊಂಡಾಗ ಮಾತ್ರ ಬೆಳಕು ಬೀರಬಲ್ಲೆವು.  

ತಾನು ಬೆಳಕು ಕೊಡುವ ಹಣತೆಯು ಇನ್ನೊಂದು ಹಣತೆಗೆ ಬೆಳಕು ಕೊಡುವ ಶಕ್ತಿಯನ್ನು ಕೊಡಬಲ್ಲದು. ತಾನೇ ಬೆಳಕು ಕೊಡಲಾರದಂತ ಸ್ಥಿತಿಯಲ್ಲಿರುವ ಹಣತೆ ಇನ್ನೊಂದು ಹಣತೆಗೆ ಬೆಳಕು ಕೊಡುವ ಶಕ್ತಿ ಕೊಡಲು ಸಾಧ್ಯವೇ ಇಲ್ಲ.   ಹಾಗಾಗಿ ದೀಪವು ಬೆಳಕು ಬೀರಲು ಬತ್ತಿ ಎಣ್ಣೆ ಎಷ್ಟು ಮುಖ್ಯವೋ ನಮ್ಮ ಬದುಕಿನಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರಿತುಕೊಂಡಾಗ ಮಾತ್ರ ಬದುಕಿನಲ್ಲಿ ಬೆಳಕು ಬೀರಲು ಸಾಧ್ಯ.   ಅಂತಹ ದೀಪಾವಳಿ ಬೆಳಕಿನ ಹಬ್ಬದಲ್ಲಿ ನಾವು ಪರಸ್ಪರರು ಗೌರವದಿಂದ ಬಾಳಿದಾಗ ಮಾತ್ರ ಬೆಳಕು ಬೀರಬಲ್ಲೆವು. ಒಲವಿದ್ದರೆ ತಾನೇ ದೀಪದ ಬೆಳಕು..!!   ಜಗತ್ತು ಸುಂದರವಾಗಲು ನಮಗೆ ಬೆಳಕು ಅಗತ್ಯ.  

ಬನ್ನಿ ಗೆಳೆಯರೇ,

 ಅಜ್ಞಾನವೆಂಬ ಕತ್ತಲಿಂದ ಸುಜ್ಞಾನವೆಂಬ ಬೆಳಕಿನ ಕಡೆಗೆ ಹೋಗಲು ನಾವು ಒಲವನ್ನು ಹಂಚೋಣ.  ಆಗ ಮಾತ್ರ ಬದುಕಿನಲ್ಲಿ ಇಂತಹ ಹಬ್ಬಗಳು ಆಚರಿಸುತ್ತಿರುವುದಕ್ಕೆ ಸಾರ್ಥಕವಾಗುತ್ತದೆ.


 ರಮೇಶ. ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

4 thoughts on “

  1. ಸರ್ ನಾನು ಶ್ರೀಮತಿ ನಾಗವೇಣಿ ಅಶೋಕ್ತ ತಮ್ಮ ಊರಿನವರೇ ನಾವು ಕೂಡ.. ತಮ್ಮ ಬಗ್ಗೆ ತಿಳಿದು ತುಂಬಾ ಖುಷಿ ಮತ್ತು ಅಭಿಮಾನ ಮೂಡಿತು. ನಿಮ್ಮ ಸಾಹಿತ್ಯ ಕೃಷಿ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ. ವಂದನೆಗಳು..

  2. ಜೀವನದಲ್ಲಿ ಒಲವೊಂದಿದ್ದರೆ ಹಬ್ಬಕ್ಕೂ ಮೆರುಗು ಬರುತ್ತದೆ ಎಂಬುದನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿರುವಿರಿ. ಪ್ರತಿಯೊಂದು ಅಂಕಣದಲ್ಲೂ ಸಮಾಜಕ್ಕೆ ಒಂದು ಅದ್ಭುತ ಸಕಾರಾತ್ಮಕ ಸಂದೇಶವನ್ನು ಕೊಡುತ್ತಿರುವಿರಿ.
    ತುಂಬು ಹೃದಯದ ಅಭಿನಂದನೆಗಳು. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

  3. Pingback: -

Leave a Reply

Back To Top