ಪುಸ್ತಕ ಸಂಗಾತಿ

ಅಪರೂಪದ ಕತೆಗಳು

ಕೆ.ವಿ. ತಿರುಮಲೇಶ್

ಅಪರೂಪದ ಕತೆಗಳು
ಕಥಾಸಂಕಲನ
ಕೆ.ವಿ. ತಿರುಮಲೇಶ್
ಅಭಿನವ ಪ್ರಕಾಶನ.

ಇದು ಒಂದು ಅಪೂರ್ವವಾದ ಕಥೆಗಳ ಸಂಕಲನ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲಿ ಒಟ್ಟು ಹದಿನಾರು ಕತೆಗಳಿವೆ. ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ತಿರುಮಲೇಶರು ಈ ಕತೆಗಳನ್ನು ಹೇಳಿದ್ದಾರೆ.

ಅವರ ಕವನ ಸಂಕಲನಗಳು – ಅಕ್ಷಯ ಕಾವ್ಯ,ಅರಬ್ಬಿ, ಅವಧ, ಏನೇನ್ ತುಂಬಿ,ಪಾಪಿಯೂ,
ಮಹಾಪ್ರಸ್ಥಾನ, ಮುಖವಾಡಗಳು,ಮುಖಾಮುಖಿ,ವಠಾರ.

ಕಥಾಸಂಕಲನಗಳು- ನಾಯಕ ಮತ್ತು ಇತರರು, ಕೆಲವು ಕಥಾನಕಗಳು,ಕಳ್ಳಿ ಗಿಡದ ಹೂ,ಅಪರೂಪದ ಕತೆಗಳು.
ಕಾದಂಬರಿಗಳು- ಆರೋಪ, ಮುಸುಗು, ಅನೇಕ.

ನಾಟಕಗಳು – ಕಲಿಗುಲ, ಟೈಬೀರಿಯಸ್

ತಿರುಮಲೇಶರು ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿರುವುದು ಇಲ್ಲಿ ಕಂಡುಬರುತ್ತದೆ. ಈ ಕಥಾಗುಚ್ಛದಲ್ಲಿ ನನಗೆ ಅತ್ಯಂತ ಪ್ರಿಯವಾದ ಕತೆ ‘ ಭುಜ್’.

ಸದಾಶಿವ ಮತ್ತು ಶಾರದಾ ಹಳ್ಳಿಯಲ್ಲಿ ವಾಸಿಸುತ್ತಿರುವವರು. ಅವರ ತೋಟದಲ್ಲಿ ಕೆರೆಯ ಕೆಸರು ತೆಗೆಯುವ ಕೆಲಸ ಶುರು ಮಾಡಿದ ಮಾಹಿತಿಯೊಂದಿಗೆ ಕತೆ ಆರಂಭವಾಗುತ್ತದೆ. ಭುಜ್ ಎಂಬುದು ಅವರ ಮನೆಯಲ್ಲಿ ಸಾಕಿದ ನಾಯಿ. ಅದು ಅಪರಿಚಿತ ವ್ಯಕ್ತಿಗಳನ್ನು ಕಂಡರೆ ಬೊಗಳುವುದು. ಈ ಕೆಲಸಕ್ಕೆ ಬಂದ ಕೆಲಸಗಾರರ ಮುಖ್ಯಸ್ಥ ನಂಜೇಶನನ್ನು ನೋಡಿ ಬೊಗಳುವುದು ಜಾಸ್ತಿ ಆಗುತ್ತದೆ.

ಕೆಸರೆತ್ತುವ ಕೆಲಸವನ್ನು ತೀರ್ಪಿಗೆ ( ಗುತ್ತಿಗೆಗೆ) ನಂಜೇಶನಿಗೆ ನೀಡಿದ ಮೇಲೆ ಸದಾಶಿವರಿಗೆ ಅವನ ಮೇಲೆ ಅಲವರಿಕೆ ಶುರುವಾಗುತ್ತದೆ. ಕೆಲಸ ವಿಳಂಬವಾಗುತ್ತಿದೆ ಎಂದು ಅನುಮಾನ ಉಂಟಾಗುತ್ತದೆ. ಮಧ್ಯೆ ಅವರಿಗೆ ಬೆಂಗಳೂರು ತಿರುಗಾಟ ಬೇರೆ. ಆಗ ಅವರ ಸಂಶಯ ಓದುಗರದೂ ಆಗುತ್ತದೆ. ಹೀಗೆ ಹಲವು ತಿರುವುಗಳನ್ನು ಪಡೆಯುತ್ತಾ ಕತೆ ಸಾಗುತ್ತದೆ‌. ಆದರೆ ಈ ಕತೆ ನಾಯಿಯ ನಿಷ್ಠೆಯ ಬದಲಾವಣೆ, ಅದರಿಂದ ಸದಾಶಿವರಿಗೆ ಉಂಟಾಗುವ ವೇದನೆ ಮತ್ತು ಅವರು ಅಂತಿಮವಾಗಿ ಕಂಡುಕೊಳ್ಳುವ ಊಹಿಸಲಾಗದ ಪರಿಹಾರದೊಂದಿಗೆ ಅಂತ್ಯಗೊಳ್ಳುತ್ತದೆ.

ಈ ಕತಾಸಂಕಲನದ ಆರಂಭದ ಕತೆ ಐತ – ಇಲ್ಲಿ ಅಜಿತ ಎಂಬಾತನ ಮೂಲಕ ಬಾಲ್ಯ ಮತ್ತು ಅದರ ನೋವು, ಹಲ್ಲು ಮುರಿದುಕೊಳ್ಳುವ ಪ್ರಸಂಗ ಎಲ್ಲ ಹೇಳುವಾಗ ಒಮ್ಮೊಮ್ಮೆ ಕತೆಗಾರ ಕತೆಯ ಒಳನುಗ್ಗಿ ಏನೋ ಹೇಳುತ್ತಿದ್ದಾರೆ ಅನಿಸುತ್ತದೆ. ಅದೇ ರೀತಿ ಅವಿನಾಶನ ಜನ್ಮದಿನ 1 ಮತ್ತು 2 ರಲ್ಲಿ ಹಾಗೂ ಅನೇಕ: ದ ಮಾರ್ಜಿನಲ್ ಮ್ಯಾನ್ ಎಂಬ ಕಥೆಗಳಲ್ಲಿ ಕಟುವಾಸ್ತವ ಮತ್ತು ತಮ್ಮ ಅನುಭವಕ್ಕೆ ಬಂದ ವಿಷಾದವನ್ನು ಅನಾವರಣ ಮಾಡಿದ್ದಾರೆ ಎಂದೆನಿಸುತ್ತದೆ.

ಸಿಂಗರೇನಿ ಸಿರಾಮಿಕ್ಸ್ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಒಂದೊಳ್ಳೆಯ ಕತೆ. ಅತಿಥಿ ನಟಿ ಗ್ರಾಮೀಣ ಪರಿಸರದಲ್ಲಿ ನಡೆಯುವ ಉತ್ತಮ ಕತೆ. ಅರೇಬಿಯಾ – ಅರಬ್ ದೇಶಗಳಲ್ಲಿ ನಡೆದ ಕ್ರಾಂತಿ, ಧಂಗೆ, ಧರ್ಮ ರಾಜಕಾರಣದ ಬಗ್ಗೆ ಹೇಳುತ್ತಾ ವಿಶ್ವದ ರಾಜಕೀಯವನ್ನು ನಮ್ಮ ಮುಂದಿಡುತ್ತದೆ.

ಕಾಡಿನ ಯಕ್ಷಿಯೂ ಕಾಡಗದ ರಾಣಿಯೂ ಜನಪದದ ಕತೆಯನ್ನು ಹೇಳುತ್ತಾ ಹಳ್ಳಿಯ ಅಮಾಯಕತೆಯನ್ನು, ವಾತಾವರಣವನ್ನೂ ಬಿಚ್ಚಿಡುತ್ತದೆ. ಎಲ್ಲಿ ಮನಕಳುಕಿರದೊ ಒಂದು ನವಿರಾದ ಪ್ರೇಮ ಮತ್ತು ಸಾಮಾಜಿಕ ಕತೆ.

ಸಂಧ್ಯಾದೇವಿ ಎಂಬ ಕತೆಯಲ್ಲಿ ಆರಂಭದಲ್ಲಿ ಮೂರು ಡಾಟು ಮತ್ತು ಅಂತ್ಯದಲ್ಲಿ ನಾಲ್ಕು ಡಾಟು ಬಿಟ್ಟರೆ ಮಧ್ಯೆ ಯಾವ ವಿರಾಮವೂ ಇಲ್ಲ. ಇದು ಚನ್ನಣ್ಣ ವಾಲೀಕಾರ ಅವರನ್ನು ನೆನಪಿಸಿತು. ಮಾತು ಮತ್ತು ಮೌನದ ಕತೆಯಿದು.

ಒಂಯ್ಕ ಒಬ್ಬ ಹಳ್ಳಿಯ ಹುಡುಗನ ಕತೆ. ಇಶ್ನಾತ ಮಾಸ್ತರರು ಒಂಯ್ಕ ಓಂಕಾರನಾಥ ಎಂಬ ಹೆಸರಾಂತ ನಟನಾಗಲು ಹೇಗೆ ಕಾರಣರಾದರು ಎಂಬುದನ್ನು ಈ ಕಥೆ ಹೇಳುತ್ತದೆ. ಕಂದೀಲಿನ ಸ್ತ್ರೀ, ಮಾಯಾಬಝಾರ್, ನಿನಾದಗಳು, ಶುಭವಾಗುತೈತೆ! ಕತೆಗಳು ಕೂಡ ತಿರುಮಲೇಶರ ಛಾಪಿನ ವಿಭಿನ್ನ ಕತೆಗಳು. ಈ ವಿಶಿಷ್ಟವಾದ ಕಥಾಸಂಕಲನವನ್ನು ಒಮ್ಮೆ ಓದಿ, ಆಸ್ವಾದಿಸಿ.

*****************************************

ಡಾ. ಅಜಿತ್ ಹರೀಶಿ


Leave a Reply

Back To Top