ಶಮಾ. ಎಂ. ಜಮಾದಾರ ಕವಿತೆ-ನಂದಾದೀಪ.

ಕಾವ್ಯ ಸಂಗಾತಿ

ಶಮಾ. ಎಂ. ಜಮಾದಾರ

ನಂದಾದೀಪ.

ನಂದಿತೊಂದು ಜಾತ್ಯತೀತ ದೀಪ ನಭಕೆ ಬೆಳಕ ಬೀರಿ
ಕುಂದಿತೊಂದು ಅಗಾಧ ಶಕ್ತಿ ಜಗಕೆ ದಾರಿ ತೋರಿ
ನಂಬಿದವರ ಆಪತ್ಬಂಧು ನಡೆದರು ಪ್ರೀತಿಯ ತೂರಿ
ಅಳೆದು ತೂಗಿ ನೋಡಿದರೂ ಹೇಳಿದ್ದೆಲ್ಲವೂ ಸರಿ

ಬರಲಿಲ್ಲ ಮನದಲೆಂದೂ ಮೇಲುಕೀಳಿನ ಕಿಲುಬು
ಎಲ್ಲರ ಅಭ್ಯುದಯಕೆ ಹಗಲುರಾತ್ರಿಯ ಹಲುಬು
ಒಲವಿನ ಧವಳಗಿರಿ ಧೀಮಂತ ರೂಪವದು ಅಂದ
ಮೆಲುನಗೆಯ ಮೊಗದರಸನ ನೋಡುವುದೇ ಚೆಂದ

ಮಾತುಗಳಲೇ ಬದುಕುಗಳನು ಹದಗೊಳಿಸಿದ ದೇವ
ಮುಖ ನೋಡಿಯೇ ಅರಿವರು ಮನದಲ್ಲಿಯ ನೋವ
ಹುರಿದುಂಬಿಸುವ ಶಕುತಿಯಿಂದು ಮಾಯವಾಯಿತಲ್ಲ
ನಿನ್ನವರೆಂದು ಅಪ್ಪಿಕೊಂಡವರು ಅನಾಥರಾದರಲ್ಲ

ನಡೆದಾಡುವ ದೇವರಂತೆ ಎದೆಗಳಲಿ ನೆಲೆಸಿದಿರಿ
ಬದುಕು ಬೇಡವೆಂದವರಿಗೆ ಬದುಕಲು ಕಲಿಸಿದಿರಿ
ಅದೇನು ಅವಸರವಿತ್ತೋ ಎದ್ದು ನಡೆದಿರಲ್ಲಾ
ಮಾಡಲಿರುವ ಕೆಲಸಗಳನು ಮರೆತು ಹೋದಿರಲ್ಲಾ

ದಿ. ೭/೧೧/೨೦೧೩ ರಂದು ನಿಧನರಾದ ನಮ್ಮ ಭಾವನವರ ಬಗ್ಗೆ ಬರೆದ ಕವನ (ದಿ. ಎ. ಕೆ. ಜಮಾದಾರ ಯರಗಟ್ಟಿ.)


ಶಮಾ. ಎಂ. ಜಮಾದಾರ.

Leave a Reply

Back To Top