ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಅಸಹನೀಯ

ಕಾವ್ಯ ಸಂಗಾತಿ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಅಸಹನೀಯ!

ನಗಬೇಡ ನನ್ನ ಅಸಹಾಯಕತೆ ಕಂಡು
ಆ ನಿನ್ನ ಕೆನ್ನೆಯ ಅಕ್ಕಪಕ್ಕದ ಗುಳಿಗಳು
ನಾ ಸೋತು ಬಿದ್ದಿರುವ ಪ್ರಪಾತದ ಆಚೆಗಿನ
ವರ್ತುಳದಂತೆ ಕಾಣುತಿದೆ

ನಗಬೇಡ ನನ್ನ ಅವಸಾನವ ಕಂಡು
ನಕ್ಕಾಗ ಕಾಣುವ ದಂತ ಪಂಕ್ತಿಯೋ
ನನ್ನ ಇರಿದು ಇರಿದು ಕೊಲ್ಲುವ
ಚೂಪಾದ ಭರ್ಚಿಯಂತೆ ಕಾಣುತಿದೆ

ನಗಬೇಡ ನನ್ನ ಅವಮಾನವ ಕಂಡು
 ಆ ನಿನ್ನ ನಗುವಿನ ಸದ್ದು
ನನ್ನ ಸೋಲಿಸಿದ ಎದುರಾಳಿಯ
ಆರ್ಭಟಿಸುವ ಗೆಲುವಿನ ಕೇಕೆಯಂತೆ
ಕರ್ಕಶವಾಗಿ ಕೇಳುತಿದೆ

ನಗಬೇಡ ನನ್ನ ಅವನತಿ ಕಂಡು
ಖುಷಿಯ ಭರಾಟೆಗೆ ಕಣ್ಣಂಚಲಿ
ಒಸರುವ ಪನ್ನೀರ ಹನಿಯೋ
ಗಾಯಗೊಂಡ ನನ್ನ ಹೃದಯದಿಂದ
ಹರಿವ ರಕ್ತದಂತೆ ಕಾಣುತಿದೆ

ನಗಬೇಡ ನನ್ನ ಅಂಧಕಾರವ ಕಂಡು
ನಗುವಾಗಿನ ನಿನ್ನ ಮೊಗದ ತೇಜಸ್ಸು
ನನ್ನ ಕತ್ತಲೆಯ ಕೂಪಕ್ಕೆ ತಳ್ಳುವ
ಆ ಕಾರ್ಗತ್ತಲಿನಲಿ ಮಿಂಚಿನ
ಸಂಚಾರದಂತೆ ಹಿಂಸೆ ಕೊಡುತಿದೆ

————————————————-

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

2 thoughts on “ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಅಸಹನೀಯ

Leave a Reply

Back To Top