ಹಂಸಪ್ರಿಯ ಅವರ ಕವಿತೆ ಖುರ್ಚಿ

ಕಾವ್ಯ ಸಂಗಾತಿ

ಹಂಸಪ್ರಿಯ

ಖುರ್ಚಿ

ಖುರ್ಚಿ ಎರಡು ಕಾಲಿನ ನರ ನೀನು, ನಿನ್ಗೆ
ನಾಲ್ಕು ಕಾಲಿನ ಮೇಲೆ ಕೂತು ಮೆರೆಯುವಾಸೆ.
ಗೆದ್ದಲು ಹತ್ತಿವೆ, ತುಕ್ಕು ಹಿಡಿದಿದೆ ನನ್ನ
ನಾಲ್ಕು ಕಾಲಿಗೆ.

ಗೆದ್ದು ಬಂದೆವು ಎಂದು ಬೀಗುತ್ತಾ
ಖುರ್ಚಿಯ ಮೇಲೆ ಕೂತು
ಮೋಜು ಮಾಡುವಾಸೆ ನಿನಗೆ.

ನೋಟು ಕೊಟ್ಟ ನಿನಗೆ
ಓಟು ಕೊಟ್ಟರು ಅವರು
ಸೂಟು -ಕೋಟು – ಬೂಟು,ಉಟ್ಟ ನಿನಗೆ
ನೋಟ ನಯವಂಚಕವಾಯ್ತು.

ಗೆದ್ದು ಬಂದೆ ನೀನು
ಗದ್ದುಗೆ ಹಿಡಿದೆ ನೀನು
ಗೆಲ್ಲಿಸಿದವರ ಸೇವೆ ಮಾಡುವ ಮರೆತ ನಿನಗೆ
ಹೊಳೆ ದಾಟಿದ ಮೇಲೆ ಅಂಬಿಗನ ಮಿಂಡ ನೆಂಬ
ಗಾದೆ ಮಾತು ಅನ್ವಥರ್ಕವಾಯ್ತು.

ನನ್ನ ನಾಲ್ಕು ಕಾಲಿಗೆ ಒಂದೊಂದು ಹೆಸರು
ಎಲ್ಲಾ ಕಾಲಿಗೂ ಮೆತ್ತಿದೆ ಭ್ರಷ್ಟತೆಯ ಕೆಸರು
ಸಂವಿಧಾನದ ಮೇಲೆ ಪ್ರಮಾಣಮಾಡಿ
ನಡೆಸುವಿರಿ ಸಂ – ವಿಧಾನ.

ಪ್ರಜೆಗೆಲ್ಲಿ ಪ್ರಭುತ್ವ?
ಗೆದ್ದ ಮೇಲೆ ಬರಿ ಗದ್ದುಗೆಗಾಗಿ – ಗುದ್ದಾಟ.
ಜಾತಿ – ಹಣ – ತೊಳ್ಬಲದಿ ಗೆದ್ದ ನಿನಗೆ
ಗೆದ್ದಲು – ತುಕ್ಕು ಹತ್ತಿದ
ನನ್ನ ಕಾಲ್ಗಳ ಸ್ವಚ್ಛ ಮಾಡುವ ಸಂಕಲ್ಪ ನಿನಗೆಲ್ಲಿ?


ಹಂಸ ಪ್ರಿಯ

Leave a Reply

Back To Top