ಡಾ ಅನ್ನಪೂರ್ಣಾ ಹಿರೇಮಠ ಅವರ ಕವಿತೆ-ನಿನ್ನ ಬರುವೆನಗೆ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ

ನಿನ್ನ ಬರುವೆನಗೆ

ಕಳ್ಳನಂತೆ ಮಗುಳುನಗೆಯಾ
ಮೆಲ್ಲ ಸೂಸುತ
ಬಂದು ಬಯಗೊಳಿಸಿ.
ಮುತ್ತು ಮಳೆಗರೆದೆ
ನಿನ್ನ ಆ ಮುತ್ತು ನನ್ನ ಮೆತ್ತಗೆ ಬಳಸಿ
ಮೈಮನಗಳ ಪುಳಕಿಸಿ
ಅರಿಯದಾ ಮತ್ತು ಬರಿಸಿ
ಕಸಿವಿಸಿಯ ಹುಟ್ಟುಹಾಕಿ
ಅದೇನೊ ಸಂಕಟ
ಅದೆಂತದೋ ಸುಖ//

ಮಿಂಚೊಂದು ಸುಳಿದಂತೆ
ತಂಪೆರಚಿದಂತೆ ಇಂಪಾದ
ಸಂಗೀತ ಕೇಳಿದಂತೆ
ತಿಳಿಯದೆ ಮೂಕಳಾದೆ
ಆಸೆ ಸಂಚು ಮಾಡಿ ಇಣುಕಿನುಕಿ
ಹೌಹಾರಿ ನೋಡುತಿರಲು
ಯಾವುದೋ ಬಂಧನ ಬಳಿ ಬಂದು//

ಬಯಕೆ ಬಾಂದಳ
ಏನೇನೋ ಬಯಸಿ
ಕಸಿವಿಸಿ ನನ್ನ ಕಾಡಿ ಕಾಡಿ
ತನು ತಲ್ಲಣಿಸಿ
ಸ್ಪರ್ಶಸುಖ ಬೇಡಿ ಬೇಡಿ
ನೆಮ್ಮದಿಯ ಕದಡಿ
ಅಂತರಾಳದಿ ಕಲಹ ಕೋಲಾಹಲ
ಹುಟ್ಟು ಹಾಕಿ ನಿಂತ ನೆಲ ಕುಸಿದಂತೆ//

ಕಣ್ಣಲಿ ತುಂಬಿ ಹನಿಯೊಂದು
ಗಲ್ಲ ನೇವರಿಸಿ ಕೆಂಪಾಗಿಸಿ
ತುಟಿಗಳದರಿ ನಿನ್ನೆದೆಗೊರಗಿ
ಕಣ್ಮುಚ್ಚಿ ನನ್ನ ನಾ ಮರೆತೆ
ನಿನ್ನ ತೋಳ ಸೆರೆಯಲಿ
ಸುಖನಿದ್ರೆ ಕ್ಷಣದಲೆ//

ಬಿಗಿ ಅಪ್ಪುಗೆಯಲಿ ಜರ್ಜರಿತ ಜೀವ
ಕೈ ಕೈ ಕುಲುಕಿದಾಗ
ಮಿಂಚಿನ ಸಂಚಾರ
ವಿಹರಿಸಿದಂತೆ ಗಗನಪಥದೆ
ಹಸಿವೆ ನಿದಿರೆ ನೀರಡಿಕೆ ಮಾಯ
ಎಲ್ಲಾ ಅಯೋಮಯ
ಪರಚದೆ ಗಾಯ
ಆಲಿಂಗನ ಸಾರುತಿತ್ತು
ಅಮರ ಪ್ರೇಮ
ಪರಿಣಯ ಸರಸ ಸಲ್ಲಾಪ
ಸಲುಗೆಯ ಸಿಹಿಗನಸುಗಳ//

ಡಾ ಅನ್ನಪೂರ್ಣಾ ಹಿರೇಮಠ

Leave a Reply

Back To Top