ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ನನ್ನವನು
ಕವಿ ಹೃದಯ ಮೃದು
ಮಧುರ ಮಗು ಮನಸು…
ಚಿಗುರು ಮೊಳಕೆ ಪರಿಮಳ
ಕವನ ದವನ ಕನಸು..
ಸ್ನೇಹ ಪ್ರೀತಿ ಬನದ
ಸವಿಗೊರಳ ಹಸುಗೂಸು…
ಕವಿ ಮೋಡಿಗಾರ ನನ್ನವನು…
ಕಿರು ಬೆರಳನೂ ಸೋಕದೆ
ಇಡೀ ಹೃದಯವನ್ನೇ ಅಪಹರಿಸಿದ
ಕಳ್ಳ..ಮುದ್ದು ಚಂದಿರ…
ಆತ್ಮಕೆ ಕನ್ನ ಹಾಕಿದ ಮಹಾಚೋರ
ಪೂರಾ ಎದೆ ಬಳಿದು ಪ್ರೀತಿ ಬೀಜ
ಬಿತ್ತಿದ ಕವಿ ಸೊಗಸುಗಾರ..
ಮಾತುಗಾರ ನನ್ನವನು….
ಸೀದಾ ಹೃದಯಕೆ ಲಗ್ಗೆ ಮನಕೆ ಮುತ್ತಿಗೆ
ಸರಳ ನೇರ ನಡೆ ನುಡಿಯ ಸರದಾರ….
ಸರಳತೆಯೇ ಆಸ್ತಿ ಯಾವ ಅಲಂಕಾರ..
ಪ್ರಾಸಾಧನಗಳ ಲೇಪವಿಲ್ಲ..ಹಂಗಿಲ್ಲ
ಮುಗ್ಧ ಸ್ನಿಗ್ಧ ಮನದ ಮೊಗದ
ಮುಗುದೆಯ ನಗುವರಳಿದಂತೆ…
ಚೆಲುವ ಚೆನ್ನಿಗರಾಯ ನನ್ನವನು….
ಮೆಲ್ಲ ಗಾಳಿಯ ಬೀಸಿಗೆ
ಮಲ್ಲಿಗೆ ಅಂಬಿನ ಅರೆ ಬಿರಿದ
ದುಂಡು ಮಲ್ಲೆ ಮೊಗ್ಗೊಂದು
ನಗು ಸುರಿಸಿದಂತೆ…
ಮೆಲ್ಲನೆ ಭುವಿಯನಪ್ಪುವಂತೆ….
ಬೇಲಿ ಮೇಲಿನ ಹೂವ ಪರಿಮಳದಂತೆ…
ಸೊಗಸುಗಾರ ನನ್ನವನು….
ಸ್ಪರ್ಶ ವಾಸನೆ ರೂಪದ ಗೊಡವೆಯಿಲ್ಲ
ಬಯಕೆ ಆಸೆ ಆಕಾಂಕ್ಷೆಗಳು ಬೇಕಿಲ್ಲ
ದೂರ ಪಯಣದ ಜೊತೆ ಸವಿ ನೆನಪು
ಭಾವ ಬುತ್ತಿಯ ಸವಿ ತುತ್ತು
ನೆನಪು ನಕ್ಷತ್ರಗಳ ಮೇನೆಯಲಿ
ಶಶಿಯೊಡನೆ ನಿತ್ಯ ನೀಲಿಯ ದಿಬ್ಬಣ
ಗುಳಿಗಲ್ಲದ ಸುಳಿಯಲಿ ಮುಳುಗಿದ
ಕನಸುಗಾರ ನನ್ನವನು…
–
ಇಂದಿರಾ ಮೋಟೆಬೆನ್ನೂರ