ಸುಜಾತಾ ರವೀಶ್- ಕಾವ್ಯದ ವಿವಿಧ ಪ್ರಕಾರಗಳಲ್ಲಿ ಕನ್ನಡ ಕರುನಾಡು ಹಾಗೂ ಕನ್ನಡಮ್ಮ ನ ಬಗೆಗಿನ ನುಡಿಗಳು .

ಕನ್ನಡ ರಾಜ್ಯೋತ್ಸವ ವಿಶೇಷ

ಸುಜಾತಾ ರವೀಶ್-

ಕಾವ್ಯದ ವಿವಿಧ ಪ್ರಕಾರಗಳಲ್ಲಿ

ಕನ್ನಡ ಕರುನಾಡು ಹಾಗೂ

ಕನ್ನಡಮ್ಮನ ಬಗೆಗಿನ ನುಡಿಗಳು

ಕಾವ್ಯದ ವಿವಿಧ ಪ್ರಕಾರಗಳಲ್ಲಿ ಕನ್ನಡ ಕರುನಾಡು ಹಾಗೂ ಕನ್ನಡಮ್ಮ ನ ಬಗೆಗಿನ ನುಡಿಗಳು .

(೧)  ಕವನ

ಕನ್ನಡ ಕೆಫೆ

ಗೆಳೆಯರೇ ನಾವಿಂದು ನಿಮಗಾಗಿ ಆರಂಭಿಸಿರುವೆವು
ಸುಸಜ್ಜಿತ ಕನ್ನಡ ಕೆಫೆ ಉಪಾಹಾರ ಮಂದಿರವನು ಎಲ್ಲರಿಗೂ ಸ್ವಾಗತ ಸುಸ್ವಾಗತ ಕೋರುವೆವು
ಕನ್ನಡ ಸಾಹಿತ್ಯ ಸವಿರುಚಿಯ ಉಣಬಡಿಸುವೆವು.

ಕರ್ನಾಟಕದ ಮಸಾಲೆ ದೋಸೆ ವಚನ ದಾಸಸಾಹಿತ್ಯ ಇಡ್ಲಿ ವಡೆ ಸಾಂಬಾರುಗಳಂತೆ ಪ್ರಬಂಧ ಲೇಖನ
ಸೆಟ್ ದೋಸೆ ಮಾಮೂಲಿ ದೋಸೆಗಳ ಸಣ್ಣ ಕಥೆಗಳು ದಕ್ಷಿಣ ಭಾರತದ ಊಟವೆಂಬ ಕಾದಂಬರಿಗಳು

ವಿಶೇಷವಾದ ಚೌಚೌ ಭಾತ್ ಪ್ರವಾಸ ಕಥನಗಳು
ಪೂರಿ ಸಾಗುವಿನಂತೆ ವಿಶೇಷ ಕನ್ನಡ ಭಾವಗೀತೆಗಳು
ಸದಾ ದೊರೆಯುವ ಕಾಫಿ ಟೀ ಗಳು ಕವನಗಳು  
ತಂಪು ಪಾನೀಯ ಐಸ್ ಕ್ರೀಂನಂತೆ ಚುಟುಕುಗಳು

ನಾವು ಬಳಸುವ ಮಸಾಲೆ ನವರಸಗಳು
ಅನ್ಯರಾಜ್ಯದ ರುಚಿಗಳು ಬೇಕೆಂದರೆ ಅನುವಾದಗಳು
ವೈಜ್ಞಾನಿಕ ತಾಂತ್ರಿಕ ಪರಿಭಾಷೆಗಳ ಪರಿವಿಡಿಗಳು
ನಿಂತ ನೀರಾಗದೆ ಕಾಲದ ಜೊತೆ ಮುಂದುವರೆದಿಹೆವು.

ಬಂದು ಹೋಗಿರುವರಿಲ್ಲಿ ಅನೇಕ ಬಾಣಸಿಗರು  ರಸಕಾವ್ಯ ರಚನೆಗಳನಿಂದಿಗೂ ಸವಿಯುತಿಹರು
ಮನಕ್ಕೆ ಸಿಹಿ ಅನುಭವ ತರುವ ಈ ಎಲ್ಲ ಮಹನೀಯರು
ಸಾಹಿತ್ಯ ಲೋಕದ ದಿಗ್ಗಜರಿಗೆ ನಮ್ಮ ನಮನಗಳು  .

(೨) ಸುನೀತ

ಸುನೀತ
ಕನ್ನಡಕ್ಕಾಗಿ ಕೈ ಎತ್ತು

ಕನ್ನಡದ ಪ್ರತಿ ತುಂಬಿರಲಿ ಪ್ರೀತಿ
ದೇಹದ ನರನಾಡಿಗಳಲಿ
ಮಾತೃಭಾಷೆ ಗೌರವಿಸುವುದೇ ನೀತಿ
ಒಲವಿರಲಿ ಆಡುನುಡಿಗಳಲಿ

ನೆಲ ಜಲವು ಹರಡಿವೆ ವಿಸ್ತಾರ
ಸಿರಿಯಿಹುದು ಮಣ್ಣ ಕಣದಿ
ಹಾಕು ನೀ ಒಲ್ಮೆಯ ಪ್ರಸ್ತಾರ
ಮಿಡಿಯುವುದು ವೀಣೆ ಮನದಿ

ಮೊದಲು ಹೆತ್ತಮ್ಮನ ಕಣ್ಣೊರೆಸು
ನಂತರವೇ ಅನ್ಯರ ಓಲೈಕೆ
ತಾಯಿಯನು ರಥದಲ್ಲಿ ಮೆರೆಸು
ಇದುವೇ ಎಲ್ಲರ ಹಾರೈಕೆ

ಹೋಗು ಕನ್ನಡಕ್ಕಾಗಿ ಕೈಯೆತ್ತು
ಸಾಗು ಜವಾಬ್ದಾರಿಯ ಹೊತ್ತು

(೩)  ಜಡೆ ಕವನ

ಜಡೆ ಕವನ
ತಾಯ್ನುಡಿ

ಮುಂದೆ ಸಾಗಲಿ ಕನ್ನಡಮ್ಮನ ಸಾಹಿತ್ಯದ ತೇರು
ತೇರು ಸುಗಮವಾಗಿ ನಡೆದು ಮುಟ್ಟಲಿ ಮೇರು.

ಮೇರು ಕೃತಿಗಳು ಜನಮಾನಸದಲ್ಲಿಹವು ವರ್ಷಾನು ವರ್ಷ  
ವರ್ಷ ಧಾರೆಯಂತೆ ಸುರಿಸಿ ಓದುಗರಲ್ಲಿ ಹರ್ಷ

ಹರ್ಷ ತರುತಿದೆ ಕಾವ್ಯರಸ ಗಂಗೆ ಹೊನಲು ಹರಿದು
ಹರಿದು ಹಾಳಾಗದಿರಲಿ ಹಿಂದಿನ ಜ್ಞಾನ ಪುಟಗಳು ಎಂದೆಂದೂ

ಎಂದೆಂದೂ ಬರಹಗಳ ಮಳೆ ಸುರಿದು ನೆನಸಲಿ
ನೆನಸಲಿ ಬರುವ ಪೀಳಿಗೆ ಲೇಖಕರನ್ನು ಮನಸಲಿ

ಮನಸಲಿ ಇರಲಿ ತಾಯ್ನುಡಿಯ ಮೇಲೆ ಪ್ರೇಮ ಇಂದು
ಇಂದು ಕಾಂತಿಯಂತೆ  ಹೊಳೆಯಲಿ ನಾಡ ಪ್ರೇಮ ಸಿಂಧು.

(೪) ಕ ಗುಣಿತಾಕ್ಷರ ಕವನ

ಕನ್ನಡ ಕಸ್ತೂರಿ

ಕಸ್ತೂರಿ ಕನ್ನಡದ ನಮ್ಮ ಕರುನಾಡು
ಕಾವೇರಿ ಹರಿಯುವ ನಲ್ಮೆಯ ಸಿರಿನಾಡು
ಕಿನ್ನರಿಯರು ನಕ್ಕು ನಲಿಯುವ ಸುಂದರ ಲೋಕ
ಕೀಳು ಮೇಲೆನ್ನದೇ ಸರ್ವರ ಸಲಹುವ ನಾಕ

ಕುಹುಗುಟ್ಟುವುದಿಲ್ಲಿ ಹಿರಿಕಿರಿ ಕವಿ ಕೋಗಿಲೆಗಳು
ಕೂಜನಗೈದಿವೆ ಕನ್ನಡ ದೇವಿಗೆ ಜೈಕಾರಗಳು
ಕೃತಾರ್ಥ ನಾನು ಜನ್ಮಿಸಿಹೆನಿಲ್ಲಿ ,ಇಲ್ಲೇ ನನ್ನ ಬಾಳು .
ಕೆಳೆತನಕ್ಕೆ ಇನ್ನೊಂದು ಹೆಸರು ನಮ್ಮ ಜನರು
ಕೇಳಿ! ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧರಾಗಿಹರು
ಕೈಲಾಸ ವೈಕುಂಠ ಇಲ್ಲೇ! ಕನ್ನಡಮ್ಮನೇ ನಮ್ಮ ದೇವರು.

ಕೊಡುಗೆ ಕೊಟ್ಟಿಹಳು ದೇಶಕ್ಕೆ ಅದೆಷ್ಟೋ ರತ್ನಗಳ
ಕೋವಿದ ಪಂಡಿತರ ಕಬ್ಬಿಗ ಮಾಣಿಕ್ಯಗಳ
ಕೌತುಕ ಅಚ್ಚರಿ ಸೋಜಿಗ ತುಂಬಿದ ಸೊಬಗು
ಕಂದ ನಾನು ,ನಿನ್ನ ಮಡಿಲಲ್ಲಿ ಆಡುವ ಮಗು .

(೫)

ಗಝಲ್

ಗಝಲ್

ವನ್ಯರಾಶಿಯ ಸಂಪದ ಸಿರಿ ಸೊಬಗಲಿ
ಮೂಡಿದೆ ಕರುನಾಡು
ಅನ್ಯಭಾಷಿಗರಿಗೂ ತನ್ನೊಡಲಲಿ ಎಡೆಯ
ನೀಡಿದೆ ಕರುನಾಡು

ಸ್ವಾಭಿಮಾನದ ಹಣತೆ ಪೂರ್ವದಿಂದಲೂ  ಬೆಳಗಿದೆ ನೋಡು
ನಿರಭಿಮಾನ ಈಗೀಗ ಹಣಕಿರಲು ಚಿಂತನೆ
ಮಾಡಿದೆ ಕರುನಾಡು

ಚಿನ್ನದ ಗಣಿಗಳಲಿ ಐಶ್ವರ್ಯ ಹೊನ್ನ ಕಲಶ ತುಂಬುತಿದೆಯಲ್ಲ
ರನ್ನ ಪಂಪ ಜನ್ನ ರಾಘವಾಂಕರ ಕಾವ್ಯಗಳ
ಹಾಡಿದೆ ಕರುನಾಡು

ಜ್ಞಾನಪೀಠಗಳ ಮಣಿಗಳನು ಧರಿಸಿದೆ ಕನ್ನಡಾಂಬೆಯ ಮುಕುಟ  
ಧ್ಯಾನವೆತ್ತಣದೋ ಮಕ್ಕಳದು ಎನ್ನುತಲಿ
ಬಾಡಿದೆ ಕರುನಾಡು

ಭವ್ಯ ಇತಿಹಾಸದ ಚರಿತೆ  ಕಲ್ಲುಗಳಲಿ ಶಿಲ್ಪವಾಗಿದೆ ಬಲ್ಲಳು ಸುಜಿ
ದಿವ್ಯ ಪರಂಪರೆಯ ಮರೆತ ವಿಪರ್ಯಾಸ ನೋಡಿದೆ ಕರುನಾಡು

ಸುಜಾತಾ ರವೀಶ್

(೬) ಸಾಂಗತ್ಯ

ಅಂದದ ನಾಡಿದು ಚೆಂದದ ಬೀಡಿದು
ಗಂಧದ ಪರಿಮಳವಿಲ್ಲಿ
ಸಂದಿವೆ ಗೌರವ ಪ್ರೀತಿಯು ಮಮತೆಯು ಬಂಧುರ ಬಂಧಗಳಲ್ಲಿ  

(೭) ಹನಿಗವನ
ಬಳವಿಯಾಗಲಿ ಬಾಳು

ಬಳಕೆಯಲಿರಲಿ ಸಿರಿಗನ್ನಡ ನುಡಿ
ಬಳಗ ಮೆಚ್ಚುವಂತಿರಲಿ ನಡೆನುಡಿ
ಬಳಚಿಕೊಳದೆಲೆ ಕಷ್ಟದಲಿ ನೆರವಾಗು  
ಬಳತದಂತಿರಲಿ ನಿನ್ನ ಜ್ಞಾನದೊಳಗು  
ಬಳಯಿಸುತ ತಾಯ್ಭಾಷೆ ಸಮೃದ್ಧಿಯನು
ಬಳಲಿಕೆಯ ಬಳಿ ಬರಗೊಡದೆಯೆ ದುಡಿ
ಬಳಸುದಾರಿಯಿರದೆ ನೇರಹಾದಿಯಲಿ ನಡಿ
ಬಳವಿಯಾಗುವುದು ಜೀವನರಥ, ಸಾಧನಪಥ  

ಸುಜಾತಾ ರವೀಶ್
(೮)
ಚುಟುಕ
ಕರ್ನಾಟಕ

ನಮ್ಮ ನಾಡಿದು ಒಲುಮೆಯ ಕರ್ನಾಟಕ
ಹೆಸರಿನಲ್ಲಿಯೇ ತರುವುದು ಹರುಷ ಪುಳಕ
ಭಾರತಾಂಬೆಯ ಹೆಮ್ಮೆಯ ಮಗಳಿವಳು
ದೇಶಕ್ಕೆಲ್ಲಾ ಹಿರಿಮೆ ಸಾರುವ ಮುಗುಳು

              ಸುಜಾತಾ ರವೀಶ್

(೯)
ರುಬಾಯಿ

ಕನ್ನಡದ ಉತ್ಸವ ಪ್ರತಿದಿನ ಮೆರೆಯಲಿ
ಸಾಹಿತ್ಯ ಸಂಭ್ರಮದ ಮಳೆ ಸುರಿಯಲಿ
ವರ್ಷದಲ್ಲೊಂದು ದಿನದ ಆಚರಣೆ ಸಲ್ಲ
ನಾಡುನುಡಿ ಮೈಮನದೆ ತಾ ಬೆರೆಯಲಿ

ಸುಜಾತಾ ರವೀಶ್

(೧೦) ತನಗ

ರಾಷ್ಟ್ರಕೂಟ ಕದಂಬ
ಹೊಯ್ಸಳ ಒಡೆಯರು
ಆಳಿದ ಭೂಮಿ ಇದು
ಪುಣ್ಯದ ಧಾಮವಿದು

(೧೧) ಶರಷಟ್ಪದಿ

ಬುವಿಯ ಸಗ್ಗ

ಕನ್ನಡ ನಾಡಿದು
ಚಿನ್ನದ ಬೀಡಿದು
ಹೊನ್ನನು ಬೆಳೆಯುವ ಸೀಮೆಯಿದು
ಮಣ್ಣಲೆ ಗಂಧವು
ಕಣ್ಣಿಗೆ ಅಂದವು
ಕನ್ನಡಿಯಂತೆಯೆ ಹೊಳೆಯುವುದು

(೧೨) ಮುಕ್ತಕ

ಮುಕ್ತಕ

ತಂಪಿಹುದು ಗಾಳಿಯಲಿ ಕಣಕಣದ ಧೂಳಿಯಲಿ
ಕಂಪಿಹುದು ಚಂದನದ ಮಲ್ಲಿಗೆಗಳ
ಪೆಂಪಿಹುದು ಪಂಡಿತರ ಕೋವಿದರ ಕಬ್ಬದಲಿ  
ಸೊಂಪಿಹುದು ಕನ್ನಡದೆ  ನರಹರಿಸುತೆ

(೧೩) ತ್ರಿಪದಿ ಮುಕ್ತಕ

ಕನ್ನಡದ ಜ್ಯೋತಿಯನ್ನು ಬೆಳಗಿಸುವ ಕೈಂಕರ್ಯ
ನನ್ನುಸಿರು ಎನ್ನುತಲಿ ಸಾಗಿಸುವ ಬನ್ನಿರೈ
ಮುನ್ನಡೆಯು ಅಲ್ಲಿಹುದು ಮೂಢಾತ್ಮಾ

(೧೪) ಪಂಚದಳ ಮುಕ್ತಕ

ನುಡಿಯಾಡಿ ಮುದದಿಂದ ನಾಡಿಗರ ಒಡಗೂಡಿ
ಮಡಿಯಿಂದ ಕನ್ನಡಕೆ ಸಲಿಸುತಿರಿ ಪೂಜೆಯನು
ತಡೆಯಾಗಿ ಬರುವೆಲ್ಲಾ ಅಡೆತಡೆಯ ಪರಿಹರಿಸಿ
ನಡೆಯುತಲಿ ಸನ್ಮಾರ್ಗದೆ ಸಫಲತೆಯ ಹೊಂದುತಿರಿ
ಮುಡಿಪಿಡುತ ಜೀವನವ ನರಹರಿಸುತೆ

(೧೫) ಫಿಬೋನಾಚಿ


ಹೋ
ಬಂತು
ಸುದಿನ
ರಾಜ್ಯೋತ್ಸವದ
ಸವಿ ಕ್ಷಣದ ಸ್ಮರಣ
ನಾಡು ನುಡಿ ಭಾಷೆ ಮಹತಿ ತಿಳಿಯುವ
ಅದರ ಹಿರಿಮೆ ಗರಿಮೆ ಅರಿತು ಗರ್ವದಿಂದ  ಮುಂದೆ ಸಾಗುವ

(೧೬)ಹೈಕು

ಹೈಕು

ಬಾಳಿನ ಅರ್ಥ
ಜೀವನದ ಸರ್ವಸ್ವ
ಕನ್ನಡ ನುಡಿ

(೧೭) ಟಂಕಾ

ಟಂಕಾ
ಕರುನಾಡು

ಚೆಂದದ ನಾಡು
ಚಂದನದ ಕಾಡು
ಅಂದದ ಬೀಡು
ಸೌಂದರ್ಯವ ನೋಡು
ಅದುವೇ ಕರುನಾಡು

(೧೮) ಗಿಣಿ ಕವನ

ರಾಜ್ಯೋತ್ಸವ

ಭುವನೇಶ್ವರಿಯ ತೇರು
ಸಾಗುತ ಮುಟ್ಟಲಿ ಮೇರು

(೧೯) ಸಿಂಖೇನ್

ಕನ್ನಡ ನುಡಿ
ಕಸ್ತೂರಿ ಕಂಪ ಮತ್ತು
ಚಂದನದ ಗಮ್ಮತ್ತು
ಕನ್ನಡಿಗರು
ಸಂಸ್ಕೃತಿ ಪಾಲಿಸುವ
ಸುಗುಣಿ ಸುಮಿತ್ರರು

(೨೦) ಅಬಾಭಿ

ನಾಡು ನುಡಿ ಎನ್ನಯ ಪ್ರಾಣವೆಂಬರು  ಕನ್ನಡದಿ ಮಾತಾಡೆ ಹಿಂಜರಿವರು
ಮಕ್ಕಳನು ಆಂಗ್ಲ ಶಾಲೆಗೆ ಸೇರಿಸುವರು
ಸುಜೀ
ಈ ದೌರ್ಭಾಗ್ಯಕೆ ಏನೆಂದು ಹೇಳುವುದು?

———————–

ಸುಜಾತಾ ರವೀಶ್

Leave a Reply

Back To Top