ಕಾವ್ಯಯಾನ

ಇಷ್ಟೇ ಸಾಕು!

Human Lips

ಮಮತ ಕೆಂಕೆರೆ

ಮನೆಯಲ್ಲಿ ಇಲ್ಲದಿದ್ದರೂ
ಮನಸಲ್ಲಿ ಇದ್ದರೆ ಸಾಕು

ನನಸಲ್ಲಿ ಸಿಗದಿದ್ದರೂ
ಕನಸಲ್ಲಿ ಬಂದರೆ ಸಾಕು

ಹೆಸರಲ್ಲಿ ಸೇರದಿದ್ದರೂ
ಉಸಿರು ಮಿಡಿದರೆ ಸಾಕು

ಗಳಿಸಿ ಗೌರವ ತರದಿದ್ದರೂ
ಗೆಳೆಯನಾಗಿದ್ದರೆ ಸಾಕು

ಇಷ್ಟವೆ ಇಲ್ಲವೆಂದಾದರೂ
ಕಷ್ಟ ಕೊಡದಿದ್ದರೆ ಸಾಕು

ಅಪ್ಪಿ ಮುದ್ದಾಡದಿದ್ದರೂ
ಬೆಪ್ಪಳನ್ನಾಗಿಸದಿದ್ದರೆ ಸಾಕು

ಜೊತೆಜೊತೆ ಸಾಗದಿದ್ದರೂ
ಹಿತವ ಬಯಸಿದರೆ ಸಾಕು

ಹೂನಗೆಯ ತುಳುಕಿಸದಿದ್ದರೂ
ಹಗೆಯಾಗದಿದ್ದರೆ ಸಾಕು

ದೇಹ-ಮೋಹ ಬೆಸೆಯದಿದ್ದರೂ
ಜೀವ-ಭಾವ ಬೆಸೆದರೆ ಸಾಕು

ದೂರದಲ್ಲಿ ಎಲ್ಲೋ ನೆಲೆಸಿದರೂ
ಎದುರಾದಾಗ ವಾರೆನೋಟ ಸಾಕು

********

Leave a Reply

Back To Top