ಗಝಲ್
ತೇಜಾವತಿ.ಹೆಚ್.ಡಿ
ಗರ್ಭದ ಕೊರಳ ಹಿಂಡಿ ಬಸಿದ ದ್ರವದಲ್ಲಿ ತೇಲುತ್ತಾ ಬಂದೆಯಲ್ಲ
ನವಮಾಸದ ನೋವ ಒಂದೇ ಅಳುವಲ್ಲಿ ಮಾಯ ಮಾಡಿದೆಯಲ್ಲ
ತಾಯ್ತನದ ಸುಖವ ಕ್ಷಣಕ್ಷಣವೂ ಸವಿದು ಪುಳಕಿತಗೊಂಡಿದ್ದೆ
ಬಯಸಿದವಳು ಬಗಲಿಗೆ ಬಂದೊಡನೆ ಅಮ್ಮನ ಮಡಿಲು ಮರೆತೆಯಲ್ಲ
ವೃದ್ಧಾಪ್ಯದಲಿ ನೆರಳಾಗುವೆಯೆಂದು ನೂರಾರು ಭವಿಷ್ಯದಕನಸು ಕಂಡಿದ್ದೆ
ರೆಕ್ಕೆ ಬಲಿತೊಡನೆ ಗುಟುಕುಕೊಟ್ಟ ಗೂಡುತೊರೆದು ಹಾರಿಹೋದೆಯಲ್ಲ
ತಾಯ ಹಾಲುಂಡ ಕೂಸಿದು ವಾತ್ಸಲ್ಯದ ಪರ್ವತವೆಂದುಕೊಂಡಿದ್ದೆ
ಕರುಳಬಳ್ಳಿ ಹರಿದು ಕಿಂಚಿತ್ತು ಕರುಣೆಯೂ ಇಲ್ಲದಾಯಿತಲ್ಲ
ನಿನ್ನ ಪಡೆದ ಈ ಜೀವ ಏಳೇಳು ಜನ್ಮದ ಪುಣ್ಯವೆಂದುಕೊಂಡಿದ್ದೆ
ನಿತ್ಯವೂ ಮಾತೃಹೃದಯ ತಾ ಮಾಡಿದ ಪಾಪವೇನೆಂದು ಕೊರಗುತ್ತಿದೆಯಲ್ಲ
*******