ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಒಂಟಿ ಹೂವಿನ ಹಾಡು.
ದಾರಿಯಲಿ ಬಿದ್ದ ಒಂಟಿ
ಹೂವು ಕೊರಗುತ್ತಿದೆ,
ನನಗೆ ಯಾರಿಲ್ಲವೆಂದು…
ಅರಳಿದಾಗ ನಾಮುಂದು
ನೀ ಮುಂದೆಂದು,
ಹೆರಳಿಗೆ ಮುಡಿದವರೆಷ್ಟೋ..
ಕಿತ್ತಿ ಬಿಸಾಡಿದವರೆಷ್ಟೋ..
ಪ್ರೇಮಿಗಳಿಗೆ ಒಲವಿನ
ಕಾಣಿಕೆಯಾಗಿದ್ದೆ,
ದುಂಬಿಗಳ ಮನಸೆಳೆದು
ಮಿಲನಗೈದಿದ್ದೆ,
ಈಗ ಬಿದ್ದಿದ್ದೇನೆ ಅನಾಥನಾಗಿ
ರಸ್ತೆಯಲ್ಲಿ,
ಯಾರ ಪರಿವೆಗೂ ಬರದಂತೆ….
ದೇವರ ಮುಡಿಯಲ್ಲಿ ನಕ್ಕಿದ್ದೆ
ಶ್ರೇಷ್ಠವೆಂದು ಬೀಗಿದ್ದೆ
ಸಂಪಿಗೆ,ಮಲ್ಲಿಗೆ,ಪಾರಿಜಾತ,
ಕಣಗಿಲೆ,ಪುನ್ನಾಗ ಹೀಗೆ,
ನೂರೆಂಟು ಹೆಸರು ನನಗೆ…!
ನನ್ನ ಕನಸು ಗಗನಕುಸುಮ
ನನ್ನ ಮನವೋ
ನೀರ ಮೇಲಣಗುಳ್ಳೆ
ಆಯಸ್ಸು ಸೂರ್ಯಾಸ್ತದವರೆಗೆ
ಯಾರಿಗೂ ಬೇಡದಂತೆ
ಬಿದ್ದಿದ್ದೇನೆ
ತಿಪ್ಪೆ ಗುಂಡಿಯಲ್ಲಿ ನರಳುತ್ತಲೆ
ಒಂಟಿಯಾಗಿದ್ದೇನೆ
ಶಂಕರಾನಂದ ಹೆಬ್ಬಾಳ.