ಕಾವ್ಯ ಸಂಗಾತಿ
ಮಾಜಾನ್ ಮಸ್ಕಿಯವರ
ಗಜಲ್
ನಿನ್ನದೊಂದು ಕರೆಗೆ ಹೆಜ್ಜೆ ಚಲಿಸಿತು
ಗೆಜ್ಜೆಯೇ ಇಲ್ಲದೆ ಝಣ ಝಣಿಸಿತು
ಮೊಗವು ಮಂಜಿನ ಸೆರಗು ಹೊದ್ದಿದೆ
ನಿದ್ದೆಯು ಕನಸುಗಳಲ್ಲಿ ತೂಕಡಿಸಿತು
ಹಾಲಿನಲ್ಲಿ ಮಿಂದ ತಂಬೆಳಕು ನಕ್ಕಿತು
ಸೆಳೆದ ಪ್ರೀತಿ ನಲಿವಿಗೆ ಅಮಲೇರಿತು
ಬೆಟ್ಟದ ತುದಿಗೆ ಒಲವ ನದಿ ಹರವು
ಸ್ಪರ್ಶಿಸಿದೆಡೆ ಪ್ರೇಮಧಾರೆ ಸುರಿಸಿತು
ತುಂಬು ಹಸಿರ ಪ್ರಕೃತಿ ನವಿರು ನೋಟ
ಮಾಜಾ ನಾಚಿಕೆಯ ರಶ್ಮಿ ರಂಗೇರಿತು
ಮಾಜಾನ್ ಮಸ್ಕಿ