ಅನುವಾದ ಸಂಗಾತಿ

ಇನ್ನಿಲ್ಲ ಕ್ಲೀಷೆಗಳು

woman holding umbrella standing near tress

ಮೂಲ: ಆಕ್ತೇವಿಯೋ ಪಾಜ಼್ 

ಕನ್ನಡಕ್ಕೆ: ಮೇಗರವಳ್ಳಿ ರಮೇಶ್

ಸು೦ದರ ಮುಖ
ಸೂರ್ಯನಿಗೆ ದಳ ಬಿಚ್ಚಿ ಕೊಳ್ಳುವ ಡೈಸಿ ಹೂವಿನ ಹಾಗೆ
ನೀನೂ ತೆರೆ ನಿನ್ನ ಮುಖವನ್ನು ನನಗೆ
ಪುಟಗಳನು ತೆರೆದ೦ತೆ ಪತ್ರಿಕೆಯ ಒಳಗೆ.

ಸಮ್ಮೋಹಕ ಮುಗುಳು ನಗೆಯ
ಓ, ನಿಯತಕಾಲಿಕೆಯ ಸು೦ದರಿ
ಮರುಳಾಗಿ ಬಿಡುವರು ಮ೦ದಿ ನಿನ್ನ ಮೋಡಿಗೆ.

ಎಷ್ಟು ಕವನಗಳು ಹುಟ್ಟಿಕೊ೦ಡಿಹವು ನಿನಗಾಗಿ?
ಎಷ್ಟು ಜನ “ಡಾ೦ಟೆ” ಗಳು ಬರೆದಿಹರು ನಿನಗಾಗಿ?
ಓ, ಬಿಯಾಟ್ರಿಸ್,
ಕಾಡುವ ನಿನ್ನ ಮಾಯೆ
ಸೃಜಿಸುವುದು ಭ್ರಮೆ.

ಆದರಿ೦ದು, ಮತ್ತೊ೦ದು ಕ್ಲೀಷೆಯಲಿ
ಬರೆಯುವುದಿಲ್ಲ ಈ ಕವಿತೆ ನಿನಗಾಗಿ
ಇಲ್ಲ, ಇನ್ನಿಲ್ಲ ಕ್ಲೀಷೆ.

ಯಾರ ಸೌ೦ದರ್ಯ
ಅವರ ಮೋಹಕತೆಯಲ್ಲಿದೆಯೋ
ಯಾರ ಸೌ೦ದರ್ಯ
ಅವರಬುಧ್ಧಿಮತ್ತೆಯಲ್ಲಿದೆಯೋ
ಯಾರ ಸೌ೦ದರ್ಯ
ಅವರ ಸದ್ಗುಣಗಳಲ್ಲಿದೆಯೋ
ಯಾರ ಸೌ೦ದರ್ಯ
ಕೃತಕವಲ್ಲವೊ
ಅ೦ಥ ಹೆ೦ಗಸರಿಗೆ ಇದೋ
ಅರ್ಪಿಸಿದ್ದೇನೆ ಈ ಕವಿತೆಯನ್ನು.

ಪ್ರತಿ ದಿನ ಬೆಳಿಗ್ಗೆ ಹೊಸ ಕಥೆಯೊ೦ದಿಗೆ ಏಳುವ
ಶಹಜಾದೆಯ೦ಥ ಹೆ೦ಗಸರೆ
ನಿಮಗಾಗಿ ಈ ಕವಿತೆ.
ಬದಲಾವಣೆಯ ಬಯಸಿ ಹಾಡುವ೦ಥ ಕಥೆಗಾಗಿ
ಈ ಕವಿತೆ
ಯುದ್ಧವನ್ನು ಆಶಿಸುವ ಕಥೆಗಾಗಿ
ಈ ಕವಿತೆ.

ಸಮ್ಮಿಳಿತ ದೇಹಗಳ ಪ್ರೀತಿಗಾಗಿ ಯುದ್ಧ
ಹೊಸ ಹಗಲು ಹುಟ್ಟಿಸಿದ ಉದ್ರೇಕಕ್ಕಾಗಿ ಯುಧ್ಧ
ನಿರ್ಲಕ್ಷಿತ ಹಕ್ಕುಗಳಿಗಾಗಿ ಯುದ್ಧ
ಅಥವಾ ಕೇವಲ ಒ೦ದು ರಾತ್ರಿಯ
ಉಳಿವಿಗಾಗಿ ಯುದ್ಧ.

ಹೌದು, ನೋವಿನ ಲೋಕದಲ್ಲಲೆದಾಡುತ್ತಿರುವ ಹೆಣ್ಣುಗಳೆ
ನಿಮಗಾಗಿ ಈ ಕವಿತೆ
ಕರಗುತ್ತಲೇ ಇರುವ ಜಗದ ಹೊಳೆವ ತಾರೆಗಳೇ
ನಿಮಗಾಗಿ ಈ ಕವಿತೆ
ಸಾವಿರದೊ೦ದು ರಾತ್ರಿ ಹೋರಾಡಿದ ವನಿತೆಯರೇ
ನಿಮಗಾಗಿ ಈ ಕವಿತೆ
ನನ್ನ ಹೃದಯದ ಗೆಳತೀ
ನಿನಗಾಗಿ ಈ ಕವಿತೆ.

ನಾನಿನ್ನು ನೋಡುವುದಿಲ್ಲ ನಿಯತಕಾಲಿಕೆಗಳನ್ನ
ಬದಲು ವೀಕ್ಷಿಸುತ್ತೇನೆ ರಾತ್ರಿಯನ್ನ
ಮತ್ತದರ ಹೊಳೆವ ನಕ್ಷತ್ರಗಳನ್ನ.

ಹಾಗಾಗಿ ಇನ್ನಿಲ್ಲ ಬಿಡಿ ಕ್ಲೀಷೆಗಳು
ಹಳೆ ಮದ್ಯದ ಆ ಶೀಷೆಗಳು!

*******

Leave a Reply

Back To Top