ಎಸ್.ಎಸ್.ಸಾತಿಹಾಳ ಅವರ‘ಹಾಡು ಕೋಗಿಲೆ ಹಾಡು’ ಸಂಕಲನದ ಅವಲೋಕನ -ನಾಗರಾಜ ಎಂ ಹುಡೇದ

ಪುಸ್ತಕ ಸಂಗಾತಿ

ಎಸ್.ಎಸ್.ಸಾತಿಹಾಳ

‘ಹಾಡು ಕೋಗಿಲೆ ಹಾಡು’

ಸಂಕಲನದ ಅವಲೋಕನ

ನಾಗರಾಜ ಎಂ ಹುಡೇದ

ಹಾಡು ಕೋಗಿಲೆ ಹಾಡು’
ಮಕ್ಕಳ ಕವನ ಸಂಕಲನ
ಲೇಖಕರು: ಎಸ್.ಎಸ್.ಸಾತಿಹಾಳ
ಪುಟಗಳು: ೭೬, ಬೆಲೆ: ೧೦೦ ರೂಪಾಯಿ
ಮೊದಲ ಮುದ್ರಣ: ೨೦೨೩ಪ್ರಕಾಶಕರು: ವಿಶ್ವಚೇತನ ಪ್ರಕಾಶನ ಸಿಂದಗಿ, *ಮೊ: ೯೯೭೨೭೮೨೫೦೯

 ಮೊದ ಮೊದಲು ರಂಜನೆಗೆ ಮತ್ತು ತರಗತಿಯ ಪಠ್ಯಕ್ಕಾಗಿಯೇ ಮಕ್ಕಳ ಸಾಹಿತ್ಯ ರಚನೆಯಾಗುತ್ತಿತ್ತು. ಅದು ಇತ್ತೀಚಿನ ದಿನಗಳಲ್ಲಿ ಪಠ್ಯವನ್ನು ಮೀರಿ ಸೃಜನಾತ್ಮಕ ರೂಪದಲ್ಲಿ ಹೊಸತನವನ್ನು ಅವಗಾಹಿಸಿಕೊಂಡಿದೆ ಎನ್ನಬಹುದು. ಅದನ್ನು ಹಲವಾರು ಕವಿಗಳ  ಪ್ರಕಟಿತ ಕೃತಿಗಳಲ್ಲಿ ನಾವು ಕಾಣಬಹುದು. ಹಾಗೆಯೇ ‘ಹಾಡು ಕೋಗಿಲೆ ಹಾಡು’ ಕೂಡಾ ಒಂದು ಒಳ್ಳೆಯ ಮಕ್ಕಳ ಕವನ ಸಂಕಲನ. ಕವಿ ಎಸ್.ಎಸ್.ಸಾತಿಹಾಳ ಅವರು ಕ್ರೀಯಾಶೀಲರು ಮತ್ತು ಮಕ್ಕಳ ಮನಸ್ಸು ಉಳ್ಳವರು. ಸಾತಿಹಾಳ ಅವರು ಈಗಾಗಲೇ ‘ವಿಶ್ವಮಾನ್ಯರು’, ಮತ್ತು ‘ಹಕ್ಕಿಯ ಹಾಡು’ ಎಂಬ ಎರಡು ಮಕ್ಕಳ ಕವನ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿ ಮಕ್ಕಳ ಮೆಚ್ಚುಗೆಯನ್ನು ಗಳಿಸಿದ್ದಾರೆ. ಅವರು ಶಿಕ್ಷಕರಾಗಿಯೂ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಸಹೃದಯತೆ, ಕಳಕಳಿ ಎಲ್ಲವೂ ಅವರ ಪ್ರಕಟಿತ ಕೃತಿಗಳಲ್ಲೂ ಎದ್ದು ಕಾಣುತ್ತದೆ.
    ‘ಹಾಡು ಹಕ್ಕಿ ಹಾಡು’ ಕವನ ಸಂಕಲನದಲ್ಲಿ ನಾಡು-ನುಡಿ, ಪರಿಸರ, ಹಬ್ಬ ಹರಿದಿನಗಳು, ರಜೆಯ ಮಜಾ, ವ್ಯಕ್ತಿ ಚಿತ್ರಣಗಳು, ಭಾವೈಕ್ಯತೆ , ವೈಜ್ಞಾನಿಕ ಚಿಂತನೆಗಳು ಮುಂತಾದವು ಕಾವ್ಯ ನಿರ್ಮಿತಿಯನ್ನು ಪಡೆದುಕೊಂಡಿವೆ. ಅವುಗಳಿಗೆಲ್ಲ ಒಂದು ಸೊಗಸಾದ ಭಾವಲಯವಿದೆ ಅದು ಮಕ್ಕಳ ಮತ್ತು ಓದುಗರ ಮನಸ್ಸಿಗೆ ಮುಟ್ಟುವ ಸೇತುವೆಯಾಗಬಲ್ಲದು. ವಿಶೇಷವೆಂದರೆ ಇಲ್ಲಿಯ ಕವನಗಳು ಗಾಯನಕ್ಕೂ ಅಳವಡಿಸಿಕೊಂಡು ಹಾಡಬಲ್ಲ ಕವನಗಳಾಗಿವೆ. ಕವಿ ಎಸ್.ಎಸ್.ಸಾತಿಹಾಳ ಅವರು ತಮ್ಮೆಲ್ಲ ಕೃತಿಗಳನ್ನು ಒಂದು ಶ್ರದ್ಧೆ, ಬದ್ಧತೆಯಿಂದ ರಚಿಸಿದ್ದಾರೆ. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತೆಂಟು ಕವನಗಳಿವೆ.
      ‘ಭಾವೈಕ್ಯ ದೀಪ’ ಕವನವು ಎಳೆಯ ಮಕ್ಕಳ ಮನಸ್ಸಿನಲ್ಲಿ ಐಕ್ಯತೆಯ ಬೀಜವನ್ನು ಬಿತ್ತಬಲ್ಲದು. ಪ್ರತಿಯೊಬ್ಬರಲ್ಲೂ ಸಹಕಾರ, ಸಮಭಾವ, ಜಾತ್ಯಾತೀತ ಮನೋಭಾವ ಮತ್ತು ಪ್ರೀತಿ ಇರಬೇಕು. ಇವುಗಳಿಂದ ನಾಡಿನೆಲ್ಲಡೆ ಸುಖ ಶಾಂತಿಯನ್ನು ಕಾಣೋಣ ಎಂದು ಕವಿ ಈ ಕವನದಲ್ಲಿ ಆಶಯ ವ್ಯಕತಪಡಿಸಿದ್ದಾರೆ. ಈ ಮೂಲಕ ಆದರ್ಶ ನಾಡು ಕಟ್ಟೋಣ ಎಂದು ಕರೆ ನೀಡಿದ್ದಾರೆ.
        ‘ಸಾವಯವ ಕೃಷಿ’ ಕವನವು ಸಾವಯವ ಗೊಬ್ಬರದ ಮಹತ್ವ ತಿಳಿಸುವ ಕವನವಾಗಿದೆ. ಸರಳ ಪ್ರಾಸ ಪದಗಳ ಬಳಕೆಯಿಂದ ಸುಂದರವಾಗಿ ಮೂಡಿ ಬಂದಿದೆ. ಬರಿ ರಾಸಾಯನಿಕ ಔಷಧಿ, ಗೊಬ್ಬರಗಳ ಹಿಂದೆ ಹೊರಟಿರುವ ನಾವು ವಿ಼ಷವನ್ನು ಉಣ್ಣುತ್ತಿರುವುದು ದುರಂತದ ಸಂಗತಿಯಾಗಿದೆ. ಅದಕ್ಕೆ ಕವಿ ಹೀಗೆ ಹೇಳುತ್ತಾರೆ: “ಸಾವಯವ ಗೊಬ್ಬರಕೆ/ ಕೊಡಬೇಕು ಒತ್ತು/ ಭೂದೇವಿ ಕೈ ಹಿಡಿವಳು/ ನಮಗ ಯಾವತ್ತು/
    ‘ಹೆಣ್ಣು ಗಂಡು ಭೇದ ಬೇಡ’ ಕವನವು ಸಮಾಜದಲ್ಲಿ ಹೆಣ್ಣು ಗಂಡು ಮಕ್ಕಳ ನಡುವಿನ ತಾರತಮ್ಯವನ್ನು ಎತ್ತಿ ತೋರಿಸುತ್ತದೆ. ಎಷ್ಟೇಲ್ಲಾ ಕಾನೂನುಗಳು ಮಹಿಳೆಯರ ಸಮಾನತೆಗಾಗಿ ಬಂದರೂ ಶೋಷಣೆ ಮತ್ತು ತಾರತಮ್ಯ ನಡೆಯುತ್ತಲೇ ಇದೆ. ಕಾನೂನಗಳು  ಪುರುಷರ ಕಪಿಮುಷ್ಠಿಯಲ್ಲಿಯೇ ಇವೆ ಎಂಬ ಸಾಮಾಜಿಕ ಕಳಕಳಿಯನ್ನು ಈ ಕವನದಲ್ಲಿ ತೋರ್ಪಡಿಸಿದ್ದಾರೆ.
     ಇನ್ನು   ‘ಬಾನ ಬೆಳಗು’ ಕವನವು ಸರ‍್ಯೋದಯದ ಸೊಬಗಿನ ಸವಿಯನ್ನು ಮಕ್ಕಳಿಗೆ ಉಣಬಡಿಸುತ್ತದೆ. ಹಲವು ಕವಿಗಳು ಸರ‍್ಯೋದಯವನ್ನು ಹಲವು ರೀತಿಯಲ್ಲಿ ವರ್ಣಿಸಿದ್ದಾರೆ. ಇದು ಎಲ್ಲ ಕವಿಗಳಿಗೂ ಸ್ಫೂರ್ತಿ ನೀಡುವ ಸಮಯವೇ ಆಗಿದೆ. ಅದರ ಕೆಲವು ಸಾಲುಗಳು:


ಬಾನ ಬಯಲಲಿ ರಂಗು ರಂಗಿನ
ಬಣ್ಣದೋಕುಳಿಯಾಡಿದ
ಉಷೆಯ ಕಾಲದಿ ಹಸಿರು ಹುಲ್ಲಲಿ
ಮುತ್ತಿನ್ಹನಿಗಳ ತೋರಿದ ||

ಹೀಗೆ ಅದೊಂದು ಚೈತನ್ಯದಾಯಕ ಸಂದರ್ಭವಾಗಿದೆ ಎಂಬುದನ್ನು ಕವಿಗಳು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನು ನಮ್ಮ ನಾಡಹಬ್ಬ ದಸರ ಕುರಿತು ಮಕ್ಕಳ ಮನಮುಟ್ಟುವಂತೆ ಅರ್ಥವಾಗುವ ರೀತಿಯಲ್ಲಿ ಕವನವೊಂದಿದೆ ಅದುವೇ ‘ನಾಡ ಹಬ್ಬ’. ಹಬ್ಬಗಳು ನಮ್ಮನ್ನು ಒಂದುಗೂಡಿಸಿ ಮತ್ತೆ ಚೈತನ್ಯದಿಂದ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತವೆ. ಇದು ನಮ್ಮ ಮಕ್ಕಳಿಗೆ ನಮ್ಮ ಸಂಪ್ರದಾಯ ಮತ್ತು ಪರಂಪರೆಯನ್ನು ಪರಿಚಯಿಸುತ್ತದೆ ಎನ್ನಬಹುದು. ಅದರ ಕೆಲವು ಸಾಲುಗಳು: ನಾಡ ಜನತೆಯ ದೊಡ್ಡ ಹಬ್ಬವು/ ವಿಜಯದಶಮಿಯು ಬಂದಿದೆ/ ನಮ್ಮ ನಮ್ಮಲ್ಲಿ ಪ್ರೀತಿ ಬೆಸೆಯುತ/ ಮನದಿ ಹರುಷವ ತಂದಿದೆ./ ವೈರ ಮತ್ಸರ ದೂರ ಮಾಡುತ/ ಸ್ನೇಹ ಸೇತುವೆ ಕಟ್ಟಿದೆ/ ಸರ್ವರೆದೆಯೊಳು ಸಮತೆ ಸಾರುತ ಕೆಟ್ಟ ಗುಣಗಳ ಅಟ್ಟಿದೆ.
         ಹಾಗೆಯೇ ‘ರೈತನ ಹಿರಿಮೆ’ ಕವನವು ರೈತನ ಪರಿಶ್ರಮ ಮತ್ತು ಅವನ ಕಾಯಕ ನಿಷ್ಠೆ ಅಭಿವ್ಯಕ್ತಗೊಂಡಿದೆ. ತನ್ನ ಒಡನಾಡಿಗಳೊಂದಿಗೆ ಜೀವನ ಸಾಗಿಸುವ ರೀತಿಯನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಸರಳವಾಗಿ ನಿರೂಪಿಸಿದ್ದಾರೆ. ‘ರೈತನ ಬೆವರಿನ ದುಡಿಮೆಯ ಫಲದಿ/ ನೀಡಿದೆ ಭೂಮಿಯು ಅನ್ನವನು/ ದೇಶದ ಜನತೆಯ ಒಡಲನು ತುಂಬುವ / ಅವನೇ ಎಲ್ಲಕೂ ದೊಡ್ಡವನು.
        ನಮ್ಮ ಕನ್ನಡ ನಾಡಿನಲ್ಲಿ ಅನೇಕ ಮಹತ್ವಪೂರ್ಣವಾದ ನಗರಗಳಿವೆ. ಅವುಗಳ ವಿಶೇಷತೆಯನ್ನು ಸಾರುವ ಕವನವೇ ‘ನಗರಗಳ ಮಹಿಮೆ’. ಇದು ವಿಭಿನ್ನತೆಯಿಂದ ಕೂಡಿದ ಕವನವಾಗಿದೆ. ಮಕ್ಕಳ ಜ್ಞಾನವನ್ನು , ಓದಿನ ಹರವನ್ನು ವಿಸ್ತರಿಬಲ್ಲದು.
         ಈ ಸಂಕಲನದ  ಶೀರ್ಷಿಕೆಯನ್ನು ಹೊಂದಿರುವ ಕವನ ‘ಹಾಡು ಕೋಗಿಲೆ ಹಾಡು’. ಓ ಮಧುರ ಕಂಠದ ಕೋಗಿಲೆಯೇ ನೀನು ನಮ್ಮ ಕನ್ನಡ ನಾಡಿನ ಮಹಿಮೆಯನ್ನು, ಕವಿಗಳ ಕಾವ್ಯ ಸುಧೆಯನ್ನು, ಕನ್ನಡ ನಾಡಿನ ಸೃಷ್ಠಿ ಸೋಬಗನ್ನು ದಿಕ್ಕು  ದಿಕ್ಕುಗಳಿಗೆ ತಲುಪುವಂತೆ ಹಾಡು ಎಂದು ಕವಿ ಮನಪೂರ್ವಕವಾಗಿ ಬೇಡಿಕೊಳ್ಳುತ್ತಾರೆ. ಈ ಕವನವು ರಸಪೂರ್ಣವಾದ, ಭಾವತುಂಬಿದ ಕವನವಾಗಿದೆ.

          ಹಾಗೆಯೇ ‘ಕನ್ನಡ ವಾಗ್ದೇವಿಗೆ,’ ಮರಗಳ ಕೊಡುಗೆ, ಕಲಾಂಗೆ ಸಲಾಂ,  ಮಾಲಿನ್ಯ ತಡೆಯೋಣ, ನನ್ನ ಗುರಿ, ದೀಪಾವಳಿ ಮುಂತಾದ ಕವನಗಳು ಓದುಗರ ಮನಸ್ಸನ್ನು ಮುಟ್ಟಬಲ್ಲ ಕವನಗಳಾಗಿವೆ.  ‘ಹಾಡು ಕೋಗಿಲೆ ಹಾಡು’ ಕವನ ಸಂಕಲನವನ್ನು ಓದಿದಾಗ ಅನಂದತುಲಿತರಾಗುತ್ತೇವೆ. ಮಕ್ಕಳಂತೂ ಕವನಗಳನ್ನು ಹಾಡಿಯೇ ಆನಂದಿಸುತ್ತಾರೆ ಎಂಬ ಭಾವ ನನ್ನದಾಗಿದೆ. ಅಷ್ಟೊಂದು ಗೇಯತೆಯನ್ನು ಹೊಂದಿರುವ ಕವನಗಳು ಇಲ್ಲಿವೆ. ಈ ಕೃತಿಗೆ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಅವರು ಮುನ್ನುಡಿ ಬರೆದಿದ್ದಾರೆ. ಶ್ರೀ ಎ.ಆರ್ ಹೆಗ್ಗನದೊಡ್ಡಿ ಅವರು ಬೆನ್ನುಡಿ ಬರೆದಿರುವರು. ಆಕರ್ಷಣೀಯವಾದ ಮುಖಪುಟ ಮತ್ತು ಕವನಗಳಿಗೆ ರೇಖಾ ಚಿತ್ರಗಳು ಅರ್ಥಪೂರ್ಣವಾಗಿವೆ.  ಅಚ್ಚುಕಟ್ಟಾದ ಮುದ್ರಣವೂ ಇದೆ. ವಿಶ್ವಚೇತನ ಪ್ರಕಾಶನ ಸಿಂದಗಿ ಅವರು ಕೃತಿಯನ್ನು ಪ್ರಕಾಶನ ಮಾಡಿದ್ದಾರೆ.  ಈ ಸಂಕಲನದ ಅನೇಕ ಕವನಗಳು ಈಗಾಗಲೇ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಒಂದಕ್ಕಿಂತ ಒಂದು ಚೆಂದವಿವಿರುವ ಕವನಗಳನ್ನು ನಾವು ನೀವೆಲ್ಲ ಓದಿಯೇ ಆನಂದಿಸಬೇಕಿದೆ. ಹಾಗಾಗಿ ಈ ಸಂಕಲನವನ್ನು ನಾವೂ ಓದೋಣ, ನಮ್ಮ ಮಕ್ಕಳಿಗೂ ಓದಲು ನೀಡೋಣ.
ಒಟ್ಟಿನಲ್ಲಿ ಕವನ ಕಟ್ಟುವ ಕಲೆ, ಕಾವ್ಯದ ಸೆಲೆ ನಮ್ಮ ಎಸ್.ಎಸ್ ಸಾತಿಹಾಳ ಅವರಿಗೆ ಒಲಿದಿದೆ. ಅವರಿಂದ ಇನ್ನಷ್ಟು ಹೊಸತನದ ಕೃತಿಗಳು ರಚನೆಯಾಗಲಿ ಎಂದು ಆಶಿಸುವೆ.

 ‘ಹಾಡು ಕೋಗಿಲೆ ಹಾಡು’
ಮಕ್ಕಳ ಕವನ ಸಂಕಲನ
ಲೇಖಕರು: ಎಸ್.ಎಸ್.ಸಾತಿಹಾಳ
ಪುಟಗಳು: ೭೬, ಬೆಲೆ: ೧೦೦ ರೂಪಾಯಿ
ಮೊದಲ ಮುದ್ರಣ: ೨೦೨೩ಪ್ರಕಾಶಕರು: ವಿಶ್ವಚೇತನ ಪ್ರಕಾಶನ ಸಿಂದಗಿ, *ಮೊ: ೯೯೭೨೭೮೨೫೦೯


 ಶ್ರೀ ನಾಗರಾಜ ಎಂ ಹುಡೇದ

Leave a Reply

Back To Top