ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ-
ಗಜಲ್
ಮರಳ ಗೊಂಬೆಗೆ ನೀರ್ಗೆಜ್ಜೆ ತೊಡಿಸಿದಂತೆ ಬದುಕಿದು
ನೆರಳ ಮುಡಿಗೆ ನಿಗಿನಿಗಿ ಕೆಂಡ ಹನಿಸಿದಂತೆ ಬದುಕಿದು
ಒಡಲ ಉರಿಗೆ ಎಳೆಯಲೇಬೇಕಲ್ಲವೇ ಬಾಳ ಬಂಡಿಯನು
ಕರುಳ ಕಿಚ್ಚಿಗೆ ಬಸಿವ ನೀರು ಸುರಿಸಿದಂತೆ ಬದುಕಿದು
ಗೋಳುಗಳ ತಿರುಗಣಿಯಲಿ ತಿರುಗುತಿವೆ ಅದುಮಿಟ್ಟ ವೇದನೆಗಳು
ಒರಳು ಕಲ್ಲಿಗೆ ತಲೆ ಕೊಟ್ಟು ಮಲಗಿಸಿದಂತೆ ಬದುಕಿದು
ಭಾವ ಬಯಕೆಗಳೆಲ್ಲ ಕರಗಿ ಕಣ್ಣೀರಾಗಿ ಹರಿದಿವೆ ಕಂಗಳಲಿ
ಬೆರಳಿನೊಳಗೆ ವಿಷದ ಮುಳ್ಳು ಮುರಿಸಿದಂತೆ ಬದುಕಿದು
ಬೇಗಂ ಳ ಮನದಿ ಅವಿತ ಅಳಲುಗಳು ಎದೆಯೊಳಗೆ ಕುದಿಯುತಿವೆ ಬೆಂದು
ಉರುಳು ಪಾಶಕೆ ಕುಣಿಕೆಯೊಂದನು ಮರೆಯಲಿ ಹೆಣೆಸಿದಂತೆ ಬದುಕಿದು.
ಹಮೀದಾ ಬೇಗಂ ದೇಸಾಯಿ
ವ್ಹಾ……….ಮೆಡಂ ಬದುಕಿನ ಚಿತ್ರಣವನ್ನ ಅತಿ ಸೂಕ್ಮ್ಮವಾಗಿ ಬಿಡಿಸಿಟ್ಟಿರುವಿರಿ
ಜ್ಯೋತಿ ಮಾಳಿ