ಸುಜಾತ ಹೆಬ್ಬಾಳದ (ಸುಗ್ಗಿ )-ಸರಳವಲ್ಲ ಅವನಾಗುವುದು

ಕಾವ್ಯ ಸಂಗಾತಿ

ಸುಜಾತ ಹೆಬ್ಬಾಳದ (ಸುಗ್ಗಿ )

ಸರಳವಲ್ಲ ಅವನಾಗುವುದು

ಬಂದೂಕಿನ ಸದ್ದು
ತುಪಾಕಿ ಸಿಡಿಮದ್ದು
ಬೆತ್ತದ ಹೊಡೆತ
ಚರ್ಮದ ಬೂಟಿನ ಒದೆತ
ಸೆರೆಮನೆಯ ಕತ್ತಲು
ಗುಲಾಮಗಿರಿಯ ದಾಪುಗಾಲು
ನಿದ್ದೆ ಬಾರದ ಕಂಗಳಿಗೆ
ದುಸ್ವಪ್ನ ಹೆಜ್ಜೆ ಹೆಜ್ಜೆಗೆ
ಆದರೂ ಹೆದರಲಿಲ್ಲ ಅವನ ಗುಂಡಿಗೆ
ತೊಡರಲಿಲ್ಲ ಆ ನೇರ ನಡಿಗೆ
ಬಿಳಿಯರ ದಬ್ಬಾಳಿಕೆಗೆ ಬಾಗಲಿಲ್ಲವವನ ಶಿರ
ನಿರಾಯುಧನಾಗೇ ಆಂಗ್ಲರ ಹಿಮ್ಮೆಟಿಸಿ ಸ್ವತಂತ್ರಗೊಳಿಸಿದ ಭಾರತೀಯರ
ಫಕೀರನಂತೆ ಬದುಕಿದ ಮಹಾತ್ಮನಿವನು
ಸಾಮಾನ್ಯರಿಗೆ ಅಸಾಮಾನ್ಯ ಕತೆಯಾದನು

ಅವನೊಂದು ಹಿಮಾಲಯ ಪರ್ವತ
ಅವನ ತತ್ವಗಳ ಪಾಲಿಸುವುದೊಂದು ವ್ರತ
ಇತರರಲ್ಲಿ ಬಯಸುವ ಬದಲಾವಣೆ
ತನ್ನಿಂದಲೇ ಆರಂಭಿಸಿ
ಆತ್ಮಶೋಧನೆ ಮಾಡಿದ
ಸತ್ಯದೊಂದಿಗೆ ಪ್ರಯೋಗ ನಡೆಸಿ
ಸುಲಭವಲ್ಲ ನಮಗೂ ನಿಮಗೂ ಅವನಾಗುವುದು
ನಡೆನುಡಿ ಒಂದಾಗಿಸಿ ಸರಳರೇಖೆಯಂತೆ ನಡೆಯುವುದು

ಅವನ ಮುಖವಾಡ ಧರಿಸಿ
ಲಂಚ ಪಡೆಯುವಾಗ ಜನ
ನೋಟಿನ ತನ್ನ ಚಿತ್ರದೊಳಗಿಂದಲೇ ನಗುತ್ತಾನೆ
ಕಟಕಟೆಯಲ್ಲಿ ಗೀತೆಯ ಮೇಲೆ ಕೈಯಿಟ್ಟು
ತನ್ನ ಪಟದ ಮುಂದೆಯೇ ನನ್ನಿ ನುಡಿಯುವ ಜನರ ಕಂಡು
ತಲೆ ತಗ್ಗಿಸುತ್ತಾನೆ

ರಾಮರಾಜ್ಯದ ಕನಸು ಕಂಡ ನಾಡಲ್ಲಿ
ನಿಮಿಷಕ್ಕೊಂದು ಅತ್ಯಾಚಾರ ಸುಲಿಗೆ ವಂಚನೆ ನಡೆಯುತ್ತಿರುವಾಗ
ಕಣ್ಣೀರು ಹಾಕುತ್ತಾನೆ

ಮೌಲ್ಯಗಳ ಕಳಚಿ ಬೆತ್ತಲಾಗುವ ಜನ
ಖಾದಿ ಧರಿಸಿ ಸಲಾಮು ಹೊಡೆಯುವಾಗ
ಬಾರಿ ಬಾರಿ ಕೊಲೆಯಾಗಿದ್ದಾನೆ

ಪುಸ್ತಕದಲ್ಲಿ ಅಚ್ಚಾದ ಅವನ ನೀತಿ ಪಾಠಗಳು
ಶಬ್ದಗಳ ಸಂಕೋಲೆಯಲ್ಲೇ ಬಂಧಿಸಲ್ಪಟ್ಟಿರುವಾಗ ಪುಟಗಳಲೆ ಸಮಾಧಿಯಾಗಿದ್ದಾನೆ

ಓ ಶಾಂತಿದೂತನೇ ಬಿನ್ನವಿಸುವೆ ನಿನ್ನ
ತಡಮಾಡದೆ ಹೊರಬಂದುಬಿಡು ನೋಟು ಚಿತ್ರಪಟ ಪುಸ್ತಕದ ಪರಿಧಿಯಿಂದ
ಪ್ರತಿಯೊಬ್ಬರ ಮನದ ಅಂತರಾತ್ಮವಾಗಿ
ಸನ್ಮಾರ್ಗ ತೋರಿಸು ಪ್ರೀತಿಯಿಂದ
ನಡೆಸೆಮ್ಮನು ಸತ್ಯ ಧರ್ಮದ ಮಾರ್ಗದಲ್ಲಿ
ಕಟ್ಟುವೆವು ನಾವ್ ರಾಮರಾಜ್ಯವ
ಮುಂಬರುವ ಪೀಳಿಗೆಗೆ ಜತನದಿಂದ


ಸುಜಾತ ಹೆಬ್ಬಾಳದ (ಸುಗ್ಗಿ ),

One thought on “ಸುಜಾತ ಹೆಬ್ಬಾಳದ (ಸುಗ್ಗಿ )-ಸರಳವಲ್ಲ ಅವನಾಗುವುದು

Leave a Reply

Back To Top