ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. 
ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ

ಗಝಲ್ ಲೋಕ

ನಾಲ್ಕನೆ ಅದ್ಯಾಯ

selective focus photography of pink lotus flower

ಕನ್ನಡಕ್ಕೆ ಗಜಲ್ ಬಂದ ರೀತಿ

ಪ್ರಪಂಚದಲ್ಲಿ ಗಜಲ್ ಹುಟ್ಟಿದ ರೀತಿ, ಅದು ಬೆಳೆದು ಬಂದ ಬಗೆ ಮೊದಲಾದ ಸಂಗತಿಗಳ ನಂತರ ಈಗ ನಮ್ಮ ಕನ್ನಡ ಗಜಲಗಳಿಗೆ ಬರೋಣ

ಕನ್ನಡದ ಜಾಯಮಾನ

ಒಂದು ಮಟ್ಟಿಗೆ ಕಷ್ಟಕರವಾದ ಮತ್ತು ವಿದೇಶಿಯ ಪರ್ಷಿಯನ್, ಅರಬ್ಬೀ, ಉರ್ದು ಭಾಷೆಗೆ ಒಗ್ಗಿದ ಸಾಹಿತ್ಯ ಪ್ರಕಾರವಾದ ಗಜಲ್ ಎಪ್ಪತ್ತನೇ ದಶಕದಲ್ಲಿ ನಮ್ಮ ಕನ್ನಡ ಭಾಷೆಯಲ್ಲಿಯೂ ಸಹ ಆರಂಭಗೊಂಡಿತು. ಅತ್ಯಂತ ವಿಶಾಲ, ಪುರಾತನ, ಅಗಾಧ ಸಾಹಿತ್ಯದ ಪಟ್ಟುಗಳು ಮತ್ತು ಅತ್ಯಂತ ಮಧುರತೆಯಿಂದ ಕೂಡಿದ ಕನ್ನಡ ಭಾಷೆಯ ಜಾಯಮಾನಕ್ಕೆ ಗಜಲ್ ಸುಲಭವಾಗಿಯೇ ಒಗ್ಗಿಕೊಂಡಿತು. ಪ್ರಪಂಚದ ಯಾವುದೇ ಸಾಹಿತ್ಯದ ಪ್ರಕಾರವೇ ಆಗಲಿ, ಆ ಸಾಹಿತ್ಯದ ಸೂತ್ರಗಳ ಅನುಸಾರ ಹೋದರೆ ಎಂತಹ ಕಾವ್ಯವನ್ನು ಸಹ ಹುಟ್ಟಿ ಹಾಕುವಂತಹ ಸಾಮರ್ಥ್ಯ ಕನ್ನಡಕ್ಕೆ ಇರುವುದು ಭಾಷೆಯ ಹಿರಿಮೆಯನ್ನು ತೋರಿಸುತ್ತದೆ. ಇತರ ಕೆಲವು ಭಾಷೆಗಳಲ್ಲಿ ಆದ ಆರಂಭದ ಆಭಾಸ ಕನ್ನಡದಲ್ಲಿ ಆಗದೆ ಸಹಜವಾಗಿಯೇ ಮೂರ್ತರೂಪ ತಾಳಿತು.

ಕನ್ನಡ ಸಂಸ್ಕೃತಿ, ಸಮುದಾಯ, ಜನ ಜೀವನದೊಂದಿಗೆ ಹೋದಾಗ ಗಜಲ್ ತನ್ನ ಮೊದಲನೇ ಮೆಟ್ಟಿಲನ್ನು ಕನ್ನಡದಲ್ಲಿ ಯಶಸ್ವಿಯಾಗಿ ಇಟ್ಟಿತು‌. ಮಧುಶಾಲೆ, ಮಧುಪಾತ್ರೆ, ಸಾಕಿ ಮೊದಲಾದವುಗಳನ್ನು ಗಜಲ್ ಆರಂಭದಲ್ಲಿಯೇ ಕಳೆದುಕೊಂಡು ತನ್ನ ಔಪಚಾರಿಕತೆಯನ್ನು ಮಾತ್ರ ಉಳಿಸಿಕೊಂಡಿದಕ್ಕೆ ಆ ಯಶಸ್ಸು ಸಾಧ್ಯವಾಯಿತು. ಅನುಭವ, ಅನುಭಾವ ಮತ್ತು ಭಾವಾಭಿವ್ಯಕ್ತಿಯ ಸಾಧ್ಯತೆಗಳು ಕನ್ನಡದಂತಹ ಭಾಷೆಯಲ್ಲಿ ಮಾತ್ರ ಅತಿ ಹೆಚ್ಚು ಗೋಚರವಾಗುತ್ತವೆ.

ಕನ್ನಡ ಗಜಲಗಳ ಜನಕ

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಚರಿತ್ರೆ, ಛಂದಸ್ಸು, ಚೌಕಟ್ಟು ಮೊದಲಾದ ಎಲ್ಲಾ ಪಟ್ಟುಗಳನ್ನು ಅರಿತು ಅದರ ಲಕ್ಷಣಗಳ ಅನುಸಾರ ನಿಯಮಬದ್ಧವಾಗಿ ಗಜಲ್ ಬರೆದ ಶಾಂತರಸವರು ಕನ್ನಡ ಗಜಲಗಳ ಜನಕರಾಗಿದ್ದಾರೆ.  ಅವರ “ಗಜಲ್ ಮತ್ತು ಬಿಡಿ ದ್ವೌಪದಿಗಳು” ಕನ್ನಡದ ಮೊಟ್ಟ ಮೊದಲ ಗಜಲ್ ಸಂಕಲನವಾಗಿದೆ. ಶಾಂತರಸ ಎನ್ನುವುದು ಕಾವ್ಯನಾಮ ಹೊಂದಿರುವ ಇವರ ಮೂಲ ಹೆಸರು ಶಾಂತಯ್ಯ ಹಿರೇಮಠ. ಆದರೆ ಇವರು ಶಾಂತರಸ ಹೆಂಬೇರಾಳ ಎಂದೇ ಪ್ರಸಿದ್ಧಿ.

ಇವರು ಜನಿಸಿದ್ದು ರಾಯಚೂರು ಜಿಲ್ಲೆಯಲ್ಲಿ ಮತ್ತು ಇದು ಆಗ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಆದ ಕಾರಣ ಮಾತೃಭಾಷೆ ಕನ್ನಡದ ಶಿಕ್ಷಣದಿಂದ ವಂಚಿತರಾದ ಇವರು ಉರ್ದು ಮಾಧ್ಯಮದಲ್ಲಿ ಓದಬೇಕಾಗಿ ಬಂತು. ಹೆಸರಿಗೆ ಅಷ್ಟೇ ಶಾಂತರಸರಾದ ಇವರು ಪ್ರಾಥಮಿಕ ಶಿಕ್ಷಣದಲ್ಲಿಯೇ ಮುಸ್ಲಿಂ ಅಧ್ಯಾಪಕರ ಬೇಧ ಭಾವದಿಂದ ಸಿಡಿದೆದ್ದು ನಿಂತರು ಮತ್ತು ಅವರಲ್ಲಿ ಹೋರಾಟದ ಕೆಚ್ಚು ಹುಟ್ಟಿನಿಂದಲೇ ಬಂದಿತ್ತು. ಆದ ಕಾರಣ ಅವರು ಜೀವನ ಪೂರ್ತಿ ನಾನಾ ವಿಷಯಗಳಿಗಾಗಿ ಹೋರಾಡಿರುವ ಕಾರಣಕ್ಕೂ ಸಹ ಸ್ಮರಣೀಯರಾಗಿದ್ದಾರೆ.

ಹೀಗೆ ಉರ್ದು ಸಂಪರ್ಕದಿಂದ ಬಂದ ಅವರು ಕನ್ನಡದೊಂದಿಗೆ ಉರ್ದುವನ್ನು ಸಹ ಕರಗತ ಮಾಡಿಕೊಂಡರು. ಉರ್ದು ಸಾಹಿತ್ಯದ ಕುರಿತು ಸಾಕಷ್ಟು ಆಳವಾದ ಅಧ್ಯಯನ ಮಾಡಿರುವ ಇವರು ಗಜಲನ್ನು ಅತ್ಯಂತ ಪರಿಣಾಮಕಾರಿಯಾಗಿ ಕನ್ನಡಕ್ಕೆ ತಂದರು. ಋತುವರ್ಣನೆ ಸೇರಿದಂತೆ ಹಲವಾರು ಉರ್ದು ಕಾವ್ಯ, ಗಜಲಗಳನ್ನು ಸಹ ಕನ್ನಡಕ್ಕೆ ಕರೆ ತಂದರು. ಗಜಲ್ ಮಾತ್ರವಲ್ಲದೆ ಹಲವಾರು ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಇವರ ಮಗಳಾದ ಹೆಚ್ ಎಸ್ ಮುಕ್ತಾಯಕ್ಕ ಸಹ ಅವರ ಕಾರ್ಯಗಳಲ್ಲಿ ಸಹಾಯಕರಾಗಿದ್ದರು.

ಶಾಂತರಸ ಅವರು ಗಜಲಗೆ ಸಂಬಂಧಿಸಿದಂತೆ ಒಂದು ಅರ್ಥಪೂರ್ಣ ವಾಕ್ಯವನ್ನು ನೀಡಿದ್ದಾರೆ ಮತ್ತು ಅದು ಹೀಗಿದೆ “ಇರುವಿಕೆಯೇ ಇಲ್ಲದಿರುವಿಕೆ ಮತ್ತು ಇಲ್ಲದಿರುವಿಕೆಯೇ ಇರುವಿಕೆ”

ಜಂಬಣ್ಣ ಅಮರಚಿಂತ

ಶಾಂತರಸರು ಹಾಕಿದ ಭದ್ರ ಬುನಾದಿಯ ಮೇಲೆ ಗಜಲ್ ಬರವಣಿಗೆಗಳಿಗೆ ಹೊಸ ಮಜಲನ್ನು ಸೃಷ್ಟಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರಲ್ಲಿ ಜಂಬಣ್ಣ ಅಮರಚಿಂತರು ಪ್ರಮುಖರಾಗಿದ್ದಾರೆ. ತೀಕ್ಷ್ಣವಾದ ಭಾಷಾ ಪ್ರಯೋಗಗಳು ಹಾಗೂ ಅಭಿವ್ಯಕ್ತಿಯ ಭಾವಗಳಿಗೆ ಹೆಸರಾದ ಇವರು ದಮನಿತರ ಧ್ವನಿಯಾಗಿ ಮೂಡಿ ಬಂದಿದ್ದರು. ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಡಿದ ಇವರು ಅದನ್ನು ತಮ್ಮ ಕಾವ್ಯಗಳಲ್ಲಿ ಸೊಗಸಾಗಿ ಹೊರ ತಂದಿದ್ದಾರೆ. ನಲ್ಲೆಯೊಂದಿಗಿನ ಸಂವಾದವಾದ ಗಜಲನ್ನು ಜನ ಸಾಮಾನ್ಯರ ಸಂವಾದವನ್ನಾಗಿಸಿ ವಿಭಿನ್ನ ನೆಲೆಯನ್ನು ಒದಗಿಸಿದರು. ಇವರ ಝೆನ್ ಆಧಾರಿತ ಗಜಲಗಳು ಅತಿ ಯಶಸ್ಸು ಕಂಡವು.

“ರಕ್ತಸಿಕ್ತ ಖಡ್ಗ ನಿಮ್ಮ ಓಣಿಯಲ್ಲಿ, ಹಂತಕರು ಯಾರೆಂದು ಮತ್ತೆ ಕೇಳುವಿರಿ

 ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ, ಬೆಳೆ ಯಾಕೆ ಬರಲಿಲ್ಲವೆಂದು ಮತ್ತೆ ಕೇಳುವಿರಿ”

ಜಂಬಣ್ಣ ಅಮರಚಿಂತ ಅವರ ಬರಹದ ಪ್ರಖರತೆ ಎಷ್ಟು ತೀಕ್ಷ್ಣ ಮತ್ತು ಸೂಕ್ಷ್ಮವಾಗಿತ್ತು ಎನ್ನುವುದಕ್ಕೆ ಮೇಲಿನ ಒಂದು ಗಜಲನ ಮತ್ಲಾದ ಉದಾಹರಣೆಯ ಸಾಕು, ಅವರ ಸಾಹಿತ್ಯ ಎಷ್ಟು ಅಗಾಧವಾಗಿತ್ತು ಎನ್ನುವುದನ್ನು ತೋರಿಸುತ್ತದೆ

ಕನ್ನಡದಲ್ಲಿ ಗಜಲ್ ಆರಂಭವಾಗಿ ಈಗಾಗಲೇ ಐವತ್ತು ವರ್ಷ ಕಳೆದರೂ ಸಹ ಅದು ಇನ್ನೂ ಮಾಧ್ಯಮಿಕ ಹಂತದಲ್ಲಿಯೇ ಇದೆ. ಶಾಂತರಸರಿಂದ ಹಿಡಿದು ಡಾ|ರಾಜಶೇಖರ್ ನೀರಮಾನ್ವಿ, ಡಾ| ಅಮರೇಶ ನುಗಡೋಣಿ, ಕಾಶಿನಾಥ್ ಅಂಬಲಗಿ, ಚಿದಾನಂದ ಸಾಲಿ, ಡಾ| ಗೋವಿಂದ ಹೆಗಡೆ, ಪ್ರಭಾವತಿ ದೇಸಾಯಿ, ಹೇಮಲತಾ ವಸ್ತ್ರದ ಅಂತಹ ಮೊದಲಾದ ಉತ್ತಮ ಗಜಲಕಾರರನ್ನು ಕಾಣುತ್ತಿರುವ ಗಜಲ್ ಸಾಹಿತ್ಯ ಇನ್ನೂ ಪರಿಶುದ್ಧವಾದ ತೀವ್ರತೆಯ ಬರಹಗಳು ಹೆಚ್ಚು ಹೆಚ್ಚು ಮೂಡಿ ಬರಬೇಕಿದೆ. ಇದೇ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಗಜಲ್ ಎನ್ನುವ ಹೆಸರಲ್ಲಿ ಬರುವ ಕೆಲವು ಕಲಬೆರಕೆಯ ಬರಹಗಳು ಮೂಲೆ ಸೇರಬೇಕಿದೆ

*********

ಬಸವರಾಜ ಕಾಸೆ

Leave a Reply

Back To Top