ಜ್ಯೋತಿ ,ಡಿ.ಬೊಮ್ಮಾರವರಪ್ರಬಂಧ “ಕಿವಿ ಇದ್ದು ಕಿವುಡಾಗಿ.”

ಪ್ರಬಂಧಸಂಗಾತಿ

ಜ್ಯೋತಿ ,ಡಿ.ಬೊಮ್ಮಾರವರಪ್ರಬಂಧ

“ಕಿವಿ ಇದ್ದು ಕಿವುಡಾಗಿ.”

ಕೆಲವು ಹೇಳಿಕೆಗಳು ಕೇಳಲಷ್ಟೆ ಸುಲಭ .ಅನುಭವಕ್ಕೆ ಬಂದಾಗಲೆ ಅರಿವಾಗುವದು ಅದರ ಕಷ್ಟ. ಕಣ್ಣಿದ್ದು ಕುರುಡಾಗಿ , ಕಿವಿ ಇದ್ದು ಕಿವುಡಾಗಿ ಬದುಕಬೇಕು ಎಂಬ ವೇದಾಂತ ಕೆಳಿದ್ದೆವಷ್ಟೆ.  ಆದರೆ ಕಿವಿ ಕೆಳದಂತಾದಾಗ ಈ ವೇದಾಂತ ನೆನಪಿಗೆ ಬಂದರು ಅನುಭವಿಸುವದು ಕಷ್ಟ  ಎನಿಸಿತು .ಲೋಕದ ನಿಂದನೆಗಳಿಗೆ ನಿರ್ಲಿಪ್ತವಾಗಿ ಪ್ರತಿಕ್ರಿಯಿಸದೆ ಇರಬೇಕು ಎಂದು ಕಿವಿ ಇದ್ದು ಕಿವುಡಾಗಿರಬೇಕು ಎಂಬ ವಿವೇಕ ವಾಣಿ ಹೆಳಿರಬೇಕು. ಆದರೆ ಬೇರೆಯವರ ವಿಷಯದಲ್ಲಿ ಕಿವಿ ತೂರಿಸದಿದ್ದರೆ ನಮಗೆ ತಿಂದ ಅನ್ನ ಜೀರ್ಣ ಆಗುವದು ಕಷ್ಟ. ಕಿವಿ ಇರುವದೆ ಕೆಳಲಿಕ್ಕೆ (ತೂರಿಸಲಿಕ್ಕೆ ) ಎಂದು ಸಮರ್ಥಿಸಿಕೊಳ್ಳುತ್ತೆವೆ.
ಗುಸುಗುಸು ಪಿಸು ಮಾತುಗಳಿಗೆ ಕಿವಿ ತಂತಾನೆ ಅರಳುತ್ತವೆ. ಪರಿಮಳಕ್ಕೆ ಮೂಗು ಅರಳುವಂತೆ .ಅಲ್ಲ , ಈ ಕಿವಿಗಳಿಗೆ ಅದೆಷ್ಟು ಕುತೂಹಲ ಅಂತೀನಿ. ಕೇಳಿಸದಿದ್ದರೂ ಕೇಳಿಯೇ ತೀರಬೆಕೆಂಬ ಹಠ. ಹಾ , ಕೆಲವು ಮಾತುಗಳು ನಮ್ಮ ಕಿವಿಗೆ ಬೀಳಲಿ ಎಂದೇ ಆಡುತ್ತಾರೆ. ಕಾಲು ಕೆದರಿ ಜಗಳಕ್ಕೆ ಬರುವವರು.ಇಂತಹ ಸಂದರ್ಬದಲ್ಲಿ ಕಿವಿ ಇದ್ದು ಕಿವುಡರಂತೆ ಬದುಕುವದು ಕಷ್ಟವೇ ಸರಿ.

ಕಿವಿ ಕೇಳದವರು ಪುಣ್ಯವಂತರು , ಕಣ್ಣು ಕಾಣದವರು ಪಾಪಿಗಳು ಎಂಬ ಹೇಳಿಕೆಯು ಇದೆ.
ಈ ಪಾಪ ಪುಣ್ಯ ಗಳ ಗೊಡವೆಯಿಂದ ದೂರ ಇರುವ ನಾನು ಇದನ್ನು ನಂಬುವ ನಂಬದಿರುವ ಪ್ರಯತ್ನ ಮಾಡಿಲ್ಲ .ಕಣ್ಣು ಕಾಣದೆಯೂ , ಕಿವಿ ಕೇಳದೆಯು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದವರು ಇದ್ದಾರೆ .  ಬದುಕಲು ದೇಹದ ಅಂಗಾಂಗಗಳು ಮುಖ್ಯ , ಅದಕ್ಕಿಂತಲೂ ಛಲ , ಆತ್ಮವಿಶ್ವಾಸ ಅತಿ ಮುಖ್ಯ.

ಇಷ್ಟು ದಿನ ಅದರ ಪಾಡಿಗದು ಇದ್ದ ಕಿವಿ ನನಗೆ ಒಮ್ಮೆಲೆ ಅದರ ಇರುವಿಕೆ ತೊರಿಸಿತು .ಕಿವಿಯಲ್ಲಿ ನೀರು ಹೋಗಿ ಕಿವಿ ಗಡಚಿಕ್ಕಿದಂತಾಗಿ ಕಿವಿಯಲ್ಲಿ ಸೇರಿಕೊಂಡ ನೀರು ಹೀರಲು ಜಾನ್ಸನ್ ಬಡ್ ಕಿವಿಯಲ್ಲಿ ತೂರಿಸಿ ಸ್ವಚ್ಚ ಮಾಡತೊಡಗಿದೆ.ಇನ್ನೂ ಸ್ವಲ್ಪ ಒಳಗೆ ತೂರಿಸಿದಾಗ ಕಾಟನ್ ಮೆತ್ತಿದ ಕಡ್ಡಿ ಕರ್ಣಪಟಲಕ್ಕೆ ತಾಗಿ ನೋವಾಯಿತು. ಕಿವಿ ಇನ್ನೂ ಗಡಚಿಕ್ಕಿದಂತಾಗಿ ಎಷ್ಟು ಉಜ್ಜಿದರೂ ಕಿವಿಯೊಳಗಿರುವ ನೀರು ಅಲ್ಲಾಡಿದಂತೆ ಆಗುತಿತ್ತು.
ಸ್ವಯಂ ವೈದ್ಯಕೀಯ ಮಾಡಿಕೊಳ್ಳುವದರಲ್ಲಿ ಪರಣಿತಳಾದ (ತಪ್ಪಿದ್ದರೂ ) ನಾನು ಕಿವಿಯಲ್ಲಿ ವ್ಯಾಕ್ಸ ಗಟ್ಟಿಯಾಗಿರಬಹುದೆಂದು ಡಿವ್ಯಾಕ್ಸ ತರಿಸಿ ಹಾಕಿಕೊಂಡೆ. ಮೂರು ಹನಿ ಕಿವಿಯೊಳಗೆ ಹಾಕಿಕೊಂಡು ತಲೆ ಎಡಕ್ಕೆ ವಾಲಿಸಿ ಔಷಧಿ ಪೂರ್ಣವಾಗಿ ಕಿವಿಯೊಳಗೆ ಹೋಗುವಂತೆ ಎಷ್ಡೋ ಹೊತ್ತು ಹಾಗೆ ವಾಲಿಕೊಂಡೆ ಇದ್ದೆ ( ಔಷಧಿ ನೇರವಾಗಿ ಕಿವಿಯಳಗೆ ಹೋಗಿ ಅಡೆತಡೆ ನಿವಾರಿಸಿ ಮುಂಚಿಗಿಂತ ನಿಚ್ಚಳವಾಗಿ ಕಿವಿ ಕೇಳಲಿ ಎಂಬ ಉದ್ದೇಶ..! ) ಕಿವಿಯೊಳಗೆ ಹೋದ ಔಷಧಿ ಗಂಟಲಿಗೆ ಬಂದು ಕಹಿ ಅನುಭವ ಆದಾಗಲೇ ಎಡಕ್ಕೆ ವಾಲಿಸಿದ ಕತ್ತು ನೇರ ಮಾಡಿದ್ದು. ಔಷಧ ಹಾಕಿಕೊಂಡಾಗಿದೆ ಬೆಳಿಗ್ಗೆ ಎಳುವಾಗ ಎಲ್ಲಾ ಸರಿಯಾಗುತ್ತಧ ಎಂದು ನಿರಾಂತಕವಾಗಿ ಮಲಗಿದೆ.

ಬೆಳಿಗ್ಗೆ ಏಳುತ್ತಲೆ ಎನೋ ಇರುಸು ಮುರುಸು , ಎಡಗಿವಿಯಲ್ಲಿ ಸಮುದ್ರದ ನೀರಿನ ಮೊರೆತದಂತ ಶಬ್ದ. ಕಿವಿ ಎಷ್ಟು ಉಜ್ಜಿದರು , ಕಾಟನ್ ಬಡ್ ಹಾಕಿ ಕಿವಿಯೊಳಗೆ ಕ್ಲೀನ್ ಮಾಡಿಕೊಂಡರು ಮೊರೆತ ನಿಲ್ಲುವ ಮಾತೆ ಇಲ್ಲ. ಅದಲ್ಲದೆ ಎಡಕಿವಿಗೆ ಶಬ್ದ ಬಲಕಿವಿಗಿಂತ ಮೆಲ್ಲನೆ ಕೆಳತೊಡಗಿತು. ರೇಡಿಯೊದಲ್ಲಿ ಪ್ರಸಾರವಾಗುತ್ತಿರುವ ಬೆಳಗಿನ ವಾರ್ತೆ ರೇಡಿಯೋ ಎತ್ತಿ ಎಡಕಿವಿಗೊಮ್ಮೆ ಬಲಕಿವಿಗೊಮ್ಮೆ ಹಿಡಿದು ಶಬ್ದದ ವ್ಯತ್ಯಾಸ ಅರಿಯುವಷ್ಟರಲ್ಲಿ ವಾರ್ತೆ ಮುಗಿದು ಚಿತ್ರಗೀತೆಗಳು ಪ್ರಸಾರವಾದವು. ಗೀತೆಗಳು ಬಲಕಿವಿಗೆ ಜೋರಾಗಿ ಎಡಕಿವಿಗೆ ಸ್ವಲ್ಪ ಮೆಲ್ಲಗೆ ಕೇಳತೊಡಗಿದವು.ನನ್ನ ಎಡ ಕಿವಿ ಕಿವುಡಾಯಿತು ಎಂದು ದಿಗಿಲು ಬಿದ್ದೆ.
ಆ ಸಂದರ್ಬದಲ್ಲಿ ಕಿವಿ ಕೆಳದವರು ಪುಣ್ಯವಂತರು ಎಂಬ ವೇದಾಂತ ಜ್ಞಾಪಕಕ್ಕೆ ಬಂದು , ಛೆ  ಕಿವುಡಾಗುವಷ್ಟು ಪುಣ್ಯ ಮಾಡಬಾರದಿತ್ತು ಅಂತ ಅನಿಸದೆ ಇರಲಿಲ್ಲ.

ಈಗ ಗಮನವೆಲ್ಲ ಪೂರ್ಣ ಕಿವಿ ಆಕ್ರಮಿಸಿಕೊಂಡುಬಿಟ್ಟಿತು. ಮುಂಜಾನೆಯಿಂದ ಏನೂ ಮಾಡದೆ ಜಾನ್ಸನ್ ಬಡ್ ಕಿವಿಯಲ್ಲಿ ತಿರುಗಿಸುತ್ತ ಕುಳಿತದ್ದು ನೋಡಿದ ಗಂಡ ಮಕ್ಕಳು ನನ್ನೊಂದಿಗೆ ನನ್ನ ಕಿವಿ ಪುರಾಣದಲ್ಲಿ ಭಾಗಿಯಾದರು , ಒಬ್ಬೊಬ್ಬರದು ಒಂದೊಂದು ಸಲಹೆ , ಎನೂ ಸಲಹೆ ಕೊಡದೆ ಸುಮ್ಮನೆ ಕುಂತ ಗಂಡನ ಕುರಿತು ಅನುಮಾನ ಬರತೊಡಗಿತು , ನನ್ನ ಕಿವಿ ಕೇಳದಿರುವದು ಅವರಿಗೆ ಸಂತೋಷ ಉಂಟು ಮಾಡಿರಬಹುದಾ ಎಂದು.. ಆಗ ಕಿವುಡಾಗಲೇ ಬಾರದು ಎಂದು ನಿರ್ಧರಿಸಿದೆ.

ಅಷ್ಟರಲ್ಲಾಗಲೇ ನನ್ನ ಕಿವಿ ಕೇಳದಿರುವದು ಅಕ್ಕಪಕ್ಕ ವ್ಯಾಪಿಸಿಬಿಟ್ಟಿತು.ಬಿಸಿಬಿಸಿ ಎಣ್ಣೆ ಕಿವಿಯೊಳಗೆ ಹಾಕಿಕೊಳ್ಳಬೇಕೆಂದು ಒಬ್ಬರು ಸಲಹೆ ಕೊಟ್ಟರೆ , ಜಿಂದಾ ತಿಲಾಸ್ಮತ್ ಹತ್ತಿಯಲ್ಲಿ ಅದ್ದಿ ಕಿವಿಯೊಳಗೆ ಇಟ್ಟುಕೊಳ್ಳಬೇಕೆಂದು ಮತ್ತೊಬ್ಬರು ಆದೇಶಿಸಿದರು. ಲವಂಗದ ಎಣ್ಣೆ ಎರಡು ಹನಿ ಹಾಕಿಕೊಳ್ಳಬೇಕಂತೆ , ಬೆಳ್ಳುಳ್ಳಿ ಎಣ್ಣೆಯಲ್ಲಿ ಕಾಸಿ ಅದರ ರಸ ಕಿವಿಯಲ್ಲಿ ಹಾಕಿಕೊಳ್ಳಬೇಕಂತೆ. ಬಟ್ಟೆಯನ್ನು ಕಾದ ಹೆಂಚಿನ ಮೇಲಿರಿಸಿ ಅದರ ಶಾಖ ಕಿವಿಗೆ ಕೊಟ್ಟರೆ ಗಡಚಿಕ್ಕಿದ ಕಿವಿ ಬಿಡುವದಂತೆ  . ಒಬ್ಬರಂತೂ ನನ್ನ ಎಡಕಿವಿಗೆ ಬಾಯಿ ಹಚ್ಚಿ ಜೋರಾಗೀ ಕುರ್್್್..ಎಂದು ಶಬ್ದ ಮಾಡಿ ಕೇಳಿಸತಿದೇಯಾ ಎಂದು ಕೇಳಿದಾಗ ಕಿವಿಯೊಂದಿಗೆ ನಾನು ಸುಸ್ತಾದೆ. ಹೀಗೆ ಒಬ್ಬರಾದ ಮೇಲೆ ಒಬ್ಬರು ನನ್ನ ಕಿವಿ ರಿಪೇರಿ ಗೆ ತೊಡಗಿದರು .
ಇಂತಿಂಥ ಮಹಾರಥರಿದ್ದ ಮೇಲೆ ಕಿವಿ ತಜ್ಞ ವೈದ್ಯರುಗಳು ಏನು ಮಾಡಬೇಕು ಪಾಪ.ಸುಮ್ನೆ ತಮ್ಮ ತಮ್ಮ ಕಿವಿಯೊಳಗೆ ಬಟ್ಟಾಡಿಸ್ತ ಕುಳಿತುಕೊಳ್ಳಬೇಕು ಅಷ್ಟೆ.

ಎಲ್ಲರೂ ಸಲಹೆ ಕೊಟ್ಟು ಹೋದ ಮೇಲೆ ಇಲ್ಲಿವರೆಗೂ ಬರಿ ಸಮುದ್ರದ ಮೊರೆತದಂತೆ ಇರುವ ಶಬ್ದ ನಿಶ್ಯಬ್ದ ದಲ್ಲಿ  ಬೇರೆ ಬೇರೆ  ಶಬ್ದವಾಗಿ ಕೇಳಿಸತೊಡಗಿತು.
ಒಮ್ಮೆ ಜಿರುಂಡೆಯಂತೆ ಜೀರ್್್ ಎಂದು , ಮತ್ತೊಮ್ಮೆ ಜೇನ್ನೊಣಗಳು ಗಳ ಗುಯ್್್ ಗುಡುವಂತೆ , ಮಗದೊಮ್ಮೆ ಜಲಪಾತದಿಂದ ನೀರು ಸುರಿದ ಶಬ್ದದಂತೆ , ಒಮ್ಮೊಮ್ಮೆ ಕಿವಿಯೊಳಗೆಲ್ಲ ಇರುಗಳು ಓಡಾಡಿದಂತೆ ಅನೇಕಾನೇಕ ಶಬ್ದಗಳಿಗೆ ನನ್ನ ಎಡಕಿವಿ ಸಾಕ್ಷಿಯಾಯಿತು. ವೈದ್ಯರಲ್ಲಿ ಹೋಗುವದೋ ಇಲ್ಲ ಇಷ್ಡೊತ್ತು ಆಪ್ತರು ಕೊಟ್ಟ ಸಲಹೆ ಪಾಲಿಸುವದೋ ಎಂಬ ಗೊಂದಲದಲ್ಲಿ ಒಂದು ದಿನ ಕಳೆಯಿತು.

ಹೇಗೋ ಕಿವಿ ಕಿವುಡಾಗಿದೆ.ಈಗಲ್ಲದಿದ್ದರೂ ಇನ್ನೂ ಹತ್ತುಹದಿನೈದು ವರ್ಷಕ್ಕಂತೂ ಕಿವುಡಾಗೇ ಆಗುತ್ತಧೆ.ಕಿವಿ ಇದ್ದ ಮೇಲೆ ಕಿವುಡತನಕ್ಕಂಜಿದರೆ ಹೇಗೆ ಎಂದು ನನ್ನ ನಾ ಸಮಾಧಾನಿಸಿಕೊಂಡೆ.
ಮಾತುಗಳು ಕೇಳದಿದ್ದರೇನಾಯಿತು..ಮಾತುಗಳಿಂದಾಗುವ ಲಾಭವಾದರೂ ಏನು..ಚನ್ನಾಗಿಯೇ ಅಯಿತು.ಎಡಗಿವಿಗೆ ಗಂಟೆಗಟ್ಟಲೆ ಪೋನ್ ಹಿಡಿದುಕೊಂಡು ಹರಟುವದು ತಪ್ಪಿತು ಅನಿಸಿತು . ಹಿಂದೆಯೇ ಗಂಟೆಗಟ್ಟಲೆ ಪೋನ್ ನಲ್ಲಿ ಮಾತಾಡಿದ್ದರಿಂದಲೇ ಕಿವಿ ಕಿವುಡಾಗಿರಬಹುದಾ ಎಂಬ ಅನುಮಾನವೂ ಕಾಡಿತು. ಎಂಬತ್ತು ವರ್ಷದ ನಮ್ಮ ಅತ್ತೆ ಎರಡೆರಡು ಗಂಟೆ ತಮ್ಮ ಹೆಣ್ಷಮಕ್ಕಳೊಂದಿಗೆ ಮಾತಾಡಿದರೂ ಅವರ ಕಿವಿ ಇನ್ನೂ ಚುರುಕಾಗೆ ಇವೆ. ಅಷ್ಟು ವಯಸ್ಸಾದ ಅವರ ಕಿವಿ ಇನ್ನೂ ಚುರುಕಾಗಿರುವಾಗ ನನ್ನ ಕಿವಿ ಕಿವುಡಾದದ್ದು ದುಃಖ ಉಂಟುಮಾಡದೆ ಇರಲಿಲ್ಲ.

ಕಿವಿ ಇದ್ದ ಮೇಲೆ ಕಿವುಡತನ್ಕ್ಕಂಜಿದಡೆಂತಯ್ಯ ಎಂದು ಅಂದುಕೊಳ್ಳುತ್ತ. ಒಂದಲ್ಲದಿದ್ದರೇನಾಯಿತು ..ಇನ್ನೊಂದು ಇದೆ. ಎಂದು ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟು ಎಡಕಿವಿಯೊಳಗಿನ ಮೊರೆತ ಬಲಕಿವಿಯನ್ನೆ ಮರೆಸುವಂತೆ ಮಾಡುತಿತ್ತು.ದೈನಂದಿನ ಕೆಲಸ ಕಾರ್ಯಗಳ ನಡುವೆ ಎಲ್ಲ ಬರಿ ಕಿವಿಮಯವೇ..
ಕುಕ್ಕರ್ ಶಬ್ದ. ಗ್ರೈಂಡರ್ ಶಬ್ದ , ನಲ್ಲಿ ನೀರಿನ ಶಬ್ದ , ಒಗ್ಗರಣೆ ಶಬ್ದ .ಹೊರಗಿನ ಆಟೋ , ಬೈಕ್ ಗಳ ಶಬ್ದ , ಈ ಎಲ್ಲಾ ಶಬ್ದಗಳುನ್ನು ಏಕಾಗ್ರತೆ ಯಿಂದ ಅಸ್ವಾದಿಸಿ ಯಾವ ಕಿವಿಗೆ ಹೆಚ್ಚು ಯಾವ ಕಿವಿಗೆ ಕಮ್ಮಿ ಕೇಳುತ್ತಿದೆ ಎಂದು ತರ್ಕಮಾಡುತ್ತಲೆ ಮತ್ತೆ ಹೊಸ ಹೊಸ ಶಬ್ದಗಳ ಅನ್ವೇಷಣೆ ಯಲ್ಲಿ ತೊಡಗುತ್ತ , ಅರೆ , ದೈನಂದಿನ ಶಬ್ದಗಳಿಗೆಲ್ಲ ಇಷ್ಟು  ದಿನ ಕಿವುಡಾಗೆ ಇದ್ದೆನಲ್ಲ ಎಂದು ಅನಿಸದೆ ಇರಲಿಲ್ಲ. ಶಬ್ದಗಳು ಕಿವಿಗೆ ಶಬ್ದ ಮಾತ್ರ. ಶಬ್ದದೊಳಗಣ ಸಂಗೀತ ಅಸ್ವಾದಿಸಲು ತಾಳ್ಮೆ ಬೇಕು.ಕಿವಿ ಸರಿಯಾಗಿ ಕೇಳುತ್ತಿರುವಾಗ ಶಬ್ದ ಗಳೆಲ್ಲಾ ಯಾಂತ್ರಿಕ ಎನಿಸುತಿದ್ದವು.

ಈಗ ಅವೇ ಶಬ್ದಗಳು ಎಕಾಗ್ರತೆ ಮೂಡಿಸುತ್ತಿವೆ.ಒಂದೊಂದು ಶಬ್ದ ಒಂದೊಂದು ಸಂದರ್ಭದ ಸೂಚನೆ ಎನಿಸುತ್ತಧೆ. ಮೌನವಾಗಿರುವ ನನಗೆ ಈಗ ಯಾರ ಮಾತಾದರೂ ಕಿವಿಗೆ ಬಿಳಲಿ ಅನಿಸತೊಡಗಿತು. ದೂರದಲ್ಲಿ ಮಾತಾಡುವವರು ಏನು ಮಾತಾಡುತ್ತಿರಬಹುದು ಎಂಬ ಕುತೂಹಲ ಮೂಡುತಿತ್ತು. ನನಗೇಕೆ ಮಾತುಗಳ ಗೊಡವೆ ಎಂದು ದೂರು ಓಡುವವಳಿಗೆ ಮಾತು ಕಿವಿಯೊಳಗೆ ತೂರಿ ಬರಲಿ ಎಂಬ ಬಯಕೆಯಾಗತೊಡಗಿತು.
ಆದರೆ ಅನವಶ್ಯಕ ಮಾತುಗಳಿಗೆ ಕಿವಿ ಕಿವುಡಾಗಿರುವದೆ ಒಳಿತು ಎನಿಸದೆ ಇರಲಿಲ್ಲ. ಸ್ತುತಿ ನಿಂದೆಗಳು ಕಿವಿಯೊಳಗೆ ತೂರದಿದ್ದರೆ ಅದಕ್ಕಿಂತ ನೆಮ್ಮದಿ ಬೇರಿಲ್ಲ. ಲೋಕದ ಶಬ್ದಕ್ಕೆ ಕಿವುಡಾದಷ್ಟು ನಮ್ಮ ಅಂತರಂಗಕ್ಕೆ ಹೆಚ್ಚು ಹೆಚ್ಚು ಹತ್ತಿರ ವಾಗುತ್ತೆವೆ. ಲೋಕದ ಸಂಗದಲ್ಲಿದ್ದು ನೋವನ್ನನುಭವಿಸುವದಕ್ಕಿಂತ ಅಂತರಂಗದ ಸಂಗಾತಿಯೊಡನೆ ಆಪ್ತವಾಗಿರುವದೆ ಲೇಸೆನಿಸುತ್ತದೆ.

ಎರಡನೆ ದಿನವೂ ಅದೇ ಪರಿಸ್ಥಿತಿ. ವೈದ್ಯರಲ್ಲಿ ಹೋಗಲೆಬೇಕಾಗುವದು ಎಂದು ನಿರ್ದರಿಸಿದೆ. ದೂರದಲ್ಲಿ ಕುಳಿತು ಚಾ ಎಂದ ಪತಿಯ ಮಾತು ಎಲ್ಲೋ ಆಳದಿಂದ ಕೆಳಿದಂತಾಗಿ ಸುಮ್ಮನೆ ಇದ್ದೆ.   ಮದುವೆಯಾದಾಗಿನಿಂದ ನನ್ನ ಮಾತಿಗೆ ಒಂದೇ ಸರಿ ಉತ್ತರಿಸದೆ ಜಾಣ ಕಿವುಡು ಪ್ರದರ್ಶಿಸುತಿದ್ದ ಅವರಿಗೆ ಈಗ ಉತ್ತರ ಕೊಡುವ ಸಮಯ ಬಂದಿತ್ತು.ನಿರುತ್ತರದಿಂದ.  ಎಷ್ಡೊತ್ತಾದರೂ ಚಾ ಬರದೆ ತಾನೆ ಎದ್ದು ಬಂದು ಎಷ್ಟೊತ್ತು ಚಾ ಮಾಡಲು ಅಂದರು. ನನಗೆ ಕೇಳಲೆ ಇಲ್ಲವಲ್ಲ ಅಂದಾಗ ಆತಂಕವಾಗಿರಬೇಕು ಪಾಪ , ಪ್ರತಿಯೊಂದು ನನ್ನ ಬಳಿ ಬಂದು ಹೇಳಬೇಕಾಗುವದಲ್ಲ ಎಂಬ ಬೇಜಾರು ಇರಬೇಕು.
ಮಕ್ಕಳು ಕೂಡ ದೂರದಿಂದ ಕರೆಯುತ್ತ ತಮಗೆ ಬೇಕಾದಕ್ಕೆಲ್ಲ ನನಗೆ ಮನೆತುಂಬಾ ಓಡಾಡಿಸುವದು ನನ್ನ ಕಿವುಡತನದಿಂದ ಕಡಿಮೆಯಾಗಿದೆ. ಈಗ ಅವರಿಗೆ ಬೇಕಾಗಿರುವದು ನನ್ನ ಹತ್ತಿರ ಬಂದು ಕೇಳುತ್ತಾರೆ.  ತಿಂಡಿ ಊಟಕ್ಕೆ ಹತ್ತು ಸಲ ಕರೆದರು ಬರದೆ ಕುಳಿತಲ್ಲೆ ಸರಬರಾಜು ಮಾಡಿಸಿಕೊಳ್ಳುವದು ತಪ್ಪಿದೆ.ಎಷ್ಟೇ ಕೂಗಿದರೂ ಓ ಗೊಡುವದನ್ನು ಬಿಟ್ಟುಬಿಟ್ಡಿದ್ದೆನೆ. ಅವರವರ ಜವಾಬ್ದಾರಿ ಅವರಿಗೆ ಅರ್ಥ ಮಾಡಿಸಲು ನನ್ನ ಕಿವಿ ಮಹತ್ತರವಾದ ಪಾತ್ರ ವಹಿಸಿತು. ವೈದ್ಯರಲ್ಲಿ ಹೋಗಲು ಮನೆಯವರ ಒತ್ತಡ ಹೆಚ್ಚಿದಷ್ಟು ನಾನು ನಿಧಾನಿಸಿದೆ. ಪೋನ್ ನಲ್ಲಿ ಮಾತಾಡುವದು ಗಣನೀಯವಾಗಿ ಕಡಿಮೆಮಾಡಿದ್ದೆನೆ. ಬೇಕಾಗಿರುವದಕ್ಕೆ ಮಾತ್ರ ಪ್ರತಿಕ್ರಿಯಿಸಿ  ಬೇಡವಾದದ್ದನ್ನು ನಿರ್ಲಕ್ಷಿಸುವ ಜಾಣ್ಮೆ ಕಲಿಸಿದ ಕಿವಿಗೆ ನಾನು ಆಭಾರಿಯಾಗಿದ್ದೆನೆ.

ವೈದ್ಯರಲ್ಲಿ ಹೋಗದೆ ಎರಡು ಮೂರು ದಿನದಲ್ಲಿ ನನ್ನ ಕಿವಿ ಮೊದಲಿನಂತೆ ಬಾಹ್ಯ ಲೋಕಕ್ಕೆ ತೆರೆದುಕೊಂಡಿತು.ಆದರೆ ಇದು ನಾನು ಯಾರಿಗೂ ಹೇಳಿಲ್ಲ.ಎಕೆಂದರೆ ಕಿವುಡಾಗಿರುವದರಲ್ಲೆ ಸುಖ ಇದೆ ಎಂಬ ಅರಿವಾಗಿದೆ.

———————————–

ಜ್ಯೋತಿ ,ಡಿ.ಬೊಮ್ಮಾ.

One thought on “ಜ್ಯೋತಿ ,ಡಿ.ಬೊಮ್ಮಾರವರಪ್ರಬಂಧ “ಕಿವಿ ಇದ್ದು ಕಿವುಡಾಗಿ.”

  1. ಕರ್ಣ ಕಠೋರ ಸತ್ಯ ! ವಿಡಂಬನೆ ಚೆನ್ನಾಗಿದೆ.
    ಹಹಾ ಹಿ ಹೀ…ಹೂ…

Leave a Reply

Back To Top