ಗಝಲ್
ಸಹದೇವ ಯರಗೊಪ್ಪ ಗದಗ
ಎದೆಯ ಸಂದೂಕಿಗೆ ಅರಿವಳಿಕೆ ಮದ್ದು ಸುರಿದು ಹೋದಳು|
ಉಸಿರಿನಿಂದ ಉಸಿರು ಕದ್ದು ಸಾವು ಬರೆದು ಹೋದಳು||
ಚಾಟಿ ಇಲ್ಲದೆ ಬುಗುರಿಯಂತೆ ತಿರುಗೋಣ ಎಂದವಳು|
ಪ್ರೇಮಿಗಳ ಗೋರಿಗೆ ಬಣ್ಣ ಬಳಿದು ಹೋದಳು||
ಇರುಳ ದಾರಿ ತುಂಬ ಕಣ್ಣ ದೀಪ ಬೆಳಗುವೆ ಎಂದವಳು|
ಕನಸುಗಳ ಗೋಣು ಮುರಿದು ನೆತ್ತರು ಕುಡಿದು ಹೋದಳು||
ಭಾವನೆಗಳ ನಾವೆಯ ನಾವಿಕ ಎಂದವಳು|
ಪ್ರತಿ ಹೆಜ್ಜೆ ಹೆಜ್ಜೆಗೆ ಕಲ್ಪನೆಗಳ ಕೊಂದು ಹೋದಳು||
‘ಸಾಚಿ’ ಅಧರಕೆ ಜೀವ ಸತ್ವ ತುಂಬೋಣ ಎಂದವಳು|
ಹೃದಯದ ಕವಾಟಿಗೆ ಬೆಲ್ಲದ ಚೂರಿಯಿಂದ ಇರಿದು ಹೋದಳು||
**********************************