ಕಾವ್ಯ ಸಂಗಾತಿ
ವಿಜಯಪ್ರಕಾಶ್ ಸುಳ್ಯ
ಗಜಲ್
ಅಗಾಧವಾಗಿರುವ ಹೃದಯವನ್ನು ಹೇಗೆ ಕೊಂಡಾಡಲಿ
ನಿಗೂಢವಾಗಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಮಡಿದು ಬಿದ್ದಿವೆ ಕನಸುಗಳು ಅದರ ಮಡಿಲೊಳಗೆ
ದೃತಿಗೆಡದಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಬಿಡುವಿಲ್ಲದೆ ಬಡಿಯುತಿದೆ ಒಲವಿನಿಂದಲಿ ಅನುದಿನ
ಮಿಡಿಯುತಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಕಂಡ ಮನಸ್ಸಿಗೆಲ್ಲಾ ಮುಂಗಡ ಕೊಡುವುದದು ಜಾಗ
ಕನವರಿಸುತಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಪರರ ‘ವಿಜಯ’ದ ಕ್ಷಣದಲ್ಲೂ ಕುಣಿದು ನಲಿದಾಡುತಿದೆ
ಸಂಭ್ರಮಿಸುತಿರುವ ಹೃದಯವನ್ನು ಹೇಗೆ ಕೊಂಡಾಡಲಿ
ವಿಜಯಪ್ರಕಾಶ್ ಸುಳ್ಯ