ಉಸಿರು ಬಿಗಿ ಹಿಡಿದು ಕಾಯುತ್ತಿದ್ದೇನೆ ಪ್ರೊ. ಸಿದ್ದು ಸಾವಳಸಂಗ,ತಾಜಪುರ

ಕಾವ್ಯ ಸಂಗಾತಿ

ಉಸಿರು ಬಿಗಿ ಹಿಡಿದು ಕಾಯುತ್ತಿದ್ದೇನೆ

ಪ್ರೊ. ಸಿದ್ದು ಸಾವಳಸಂಗ,ತಾಜಪುರ

ನೀ ಬರುವ ನೀರೀಕ್ಷೆಯಲಿ
ನಿದ್ದೆಯಿಲ್ಲದೆ ಅದೆಷ್ಟೋ
ಇರುಳುಗಳನ್ನು ಕಳೆದೆ !
ಎಂದೂ ಕಂಡಿರದ ಅನೇಕ
ಚಿತ್ರ-ವಿಚಿತ್ರ ಕನಸುಗಳು
ಭೂತದಂತೆ ನನ್ನನ್ನು ಕಾಡಿದವು !
ರಾತ್ರಿಗಳು ನನಗೆ
ಬರೀ ಶಾಪಗಳಾಗಿ
ಪರಿಣಮಿಸಿದವು !
ಹಗಲಂತೂ ಹೇಳತೀರದು,
ಕ್ಷಣ-ಕ್ಷಣಕ್ಕೂ ನನ್ನನ್ನು
ಹುರಿದು ಕೊಲ್ಲುತ್ತಿತ್ತು !
ಉಸಿರು ಬಿಗಿ ಹಿಡಿದು
ನಿನ್ನದೇ ನೀರೀಕ್ಷೆಯಲಿ
ಚಾತಕ ಪಕ್ಷಿಯಂತೆ ಕಾದೆ !
ಊರ-ಕೇರಿಯ ಜನರ,ಬಂಧು-ಬಾಂಧವರ
ಎದೆ ಇರಿಯುವ ಚುಚ್ಚು ಮಾತುಗಳು
ನನಗೇನು ಅನ್ನಿಸಲಿಲ್ಲ !
ಹೋಗುವಾಗ ನೀನೊಂದು ಕಾರಣ
ಹೇಳಿ ಹೋಗಿದ್ದರೆ ಈ ಹೆಣ್ಣು ಜೀವ
ಮಾತನಾಡುವ ಬಾಯಿಗೆ ಬೀಗ ಜಡಿಯುತ್ತಿತ್ತು !
ಆದರೆ ನೀನೀಗ ಬರಬೇಕು
ಅದಕ್ಕೆಲ್ಲಾ ಉತ್ತರಿಸಬೇಕೆಂದು
ಬಾಗಿಲ ಬಳಿಯೇ ಕಾಯುತ್ತ ಕುಳಿತ್ತಿದ್ದೇನೆ !!


ಪ್ರೊ. ಸಿದ್ದು ಸಾವಳಸಂಗ,ತಾಜಪುರ

Leave a Reply

Back To Top