ಪ್ರೇಮಲಹರಿ
ಜಯಶ್ರೀ.ಜೆ. ಅಬ್ಬಿಗೇರಿ
ಕರುಣೆ ತೋರಿಸು ಬಡಪಾಯಿಗೆ
ಹೇ, ಚೆಲುವಿ….
ನೀ ಏನೇ ಹೇಳು ಹದಿಹರೆಯ ಅನ್ನೋದು ಒಂದು ನದಿ ತರಹ ಹರಿಯುತ್ತಲೇ ಇರುತ್ತದೆ. ಅದು ಪ್ರೀತಿ ಚಿಗುರುವ ಸಮಯ. ನಮಗೆ ಗೊತ್ತಿಲ್ಲದಂತೆ ಹೊಸ ಹೊಸ ಕನಸುಗಳು ರೆಕ್ಕೆ ಕಟ್ಟಿ ಹಾರುವ ಸಮಯ. ನಿನ್ನೊಂದಿಗೆ ಕಳೆದ ಆ ಸಮಯ ಮತ್ತೆಂದೂ ಬಾರದು ಅಂತ ಗೊತ್ತಿದ್ದರೂ ಸುಂದರ ನೆನಪುಗಳು ಮತ್ತೆ ಮತ್ತೆ ನನ್ನನ್ನು ಕೆಣಕುತ್ತಿರುತ್ತವೆ. ಆ ನೆನಪುಗಳು ನೀಡುವ ಇನ್ನಿಲ್ಲದ ಪುಳಕ ಪದೇ ಪದೇ ಆ ಸುಂದರ ಗಳಿಗೆಗಳ ತಿರುಗಿ ತಿರುಗಿ ನೋಡುವಂತೆ ಮಾಡುತ್ತವೆ.
ಪರಿಹಾರವಿಲ್ಲದ ಸಮಸ್ಯೆ ಯಾವುದೂ ಇಲ್ಲ ಅಂತ ಹೇಳುವುದನ್ನು ಕೇಳಿದ್ದೇನೆ. ಪ್ರೀತಿ ನಾಟಕವಲ್ಲ ಅದು ಜೀವನವನ್ನು ರೂಪಿಸುತ್ತದೆ. ಎಂಬುದನ್ನೂ ಕೇಳಿದ್ದೇನೆ. ಯಾರೂ ಬರಲಾರದ ಹೃದಯದ ಕೋಣೆಗೆ ಕಣ್ಣೆಂಬ ಪುಟ್ಟ ಕಿಟಕಿಯಿಂದ ನುಗ್ಗಿ ಬಂದೆ. ನನಗಿರಿವಿಲ್ಲದಂತೆ ಮೈಮನ ಸೋಕಿದೆ. ಮುಡಿದ ಕೆಂದಾವರೆಯಲ್ಲಿಯೇ ಮಿಂದೇಳಿಸಿದೆ. ಜಲಪಾತ ಸದೃಶ ದುಮ್ಮಿಕ್ಕುವ ಪ್ರೀತಿಗಂತೂ ಮೂಕವಿಸ್ಮಿತನಾಗಿದ್ದೆ. ಮೊದಲೇ ರಸಿಕ ನಾನು ಆದರೆ, ನಿನ್ನ ಪ್ರೀತಿಯ ಸನಿಹದಿಂದ ಹೆಣ್ಣೆಂದರೆ ಭೋಗವಲ್ಲ ಭಾಗ್ಯವೆಂದು ಮೊದಲು ಸಲ ಭಾವ ಮೂಡಿತ್ತು ಕಣೆ. ನಿನ್ನನ್ನು ಮೊದಲ ಸಲ ಕಂಡ ದೃಶ್ಯ ಹಿಡಿದಿಡಲು ಪದಗಳು ಸಾಲವು.
ಅದೊಂದು ಮಧು ಮಾಸದ ಸಂಜೆ. ರಸ್ತೆಯ ಕಡೆ ದೃಷ್ಟಿ ಹಾಯಿಸುತ್ತ ಬಿಸಿ ಬಿಸಿ ಚಹ ಹೀರುತ್ತಿದ್ದೆ. ನೋಡುತ್ತಿದ್ದಂತೆಯೇ ಮನೆಯೆದುರಿಗೆ ಆಟೋ ಬಂದು ನಿಂತಿತು. ಕುತೂಹಲದಿಂದ ಬಂದವರು ಯಾರು? ನಮ್ಮ ಮನೆಗೆ ಬಂದಿರಬಹುದೆ? ಎನ್ನುವ ಪ್ರಶ್ನೆಯೂ ತಲೆಯಲ್ಲಿ ಬಂತು. ಗಡಿಬಿಡಿಯಲ್ಲಿ ಇಳಿಯುತ್ತಿದ್ದವರಲ್ಲಿ ಗುಲಾಬಿ ರಂಗಿನ ಸೀರೆಯುಟ್ಟ, ಎಳೆ ಬಿಟ್ಟ ಉದ್ದದ ಹೆರಳಿಗೆ ಕೆಂಗುಲಾಬಿಯ ಜೊತೆ ಮಲ್ಲೆ ಮುಡಿದ ಚೆಂದದ ಚೆಲುವಿಯಾದ ನೀನು ಇನ್ನಿಲ್ಲದಂತೆ ಸೆಳೆದೆ.
ದೇವರು ಸೃಷ್ಟಿಸಿದ ಅಪ್ರತಿಮ ನಡೆದಾಡುವ ಶಿಲಾಬಾಲಿಕೆ. ಅಚ್ಚ ಮಲ್ಲಿಗೆಯಂತಹ ಅರಳಿದ ಮುಖ, ಕಣ್ಣೆವೆಗಳು ಮುಚ್ಚದೇ ನಿನ್ನನ್ನೇ ದಿಟ್ಟಿಸುತ್ತಿದ್ದವು. ಆಹಾ! ಇಂಥ ಸೌಂದರ್ಯ ರಾಶಿಯನ್ನು ಕಂಗಳು ಈ ಹಿಂದೆ ಕಂಡಿರಲೇ ಇಲ್ಲ. ಅದೆಂತಹ ಮೈಮಾಟ ಯಾವುದೋ ರಸಿಕನೊಬ್ಬ ದೇವರಿಗೆ ಕಾಡಿಸಿ ಪೀಡಿಸಿ ಮಾಡಿಸಿರಬೇಕೆಂದೆನಿಸಿತು. ದೇವರೂ ಸಹ ಪುರುಸೊತ್ತು ಮಾಡಿಕೊಂಡು ತುಸು ಹೊತ್ತು ತೆಗೆದುಕೊಂಡು ನಿನ್ನನ್ನು ಸೃಷ್ಟಿಸಿರಬೇಕು. ಎಂದೆನಿಸದೇ ಇರಲಿಲ್ಲ.
ಮಿಂಚಿ ಮಿರುಗುವ ನಿನ್ನ ರೂಪ ತಂಗಾಳಿಗೆ ಚಿನ್ನಾಟವಾಡುತ್ತಿದ್ದ ಮುಂಗುರುಳಗಳನ್ನು ನನ್ನ ಬೆರಳುಗಳಲ್ಲಿ ಸಿಕ್ಕಿಸಿ ನಿನ್ನ ಸಪೂರ ಗಲ್ಲವ ಮುದ್ದಿಸುವ ಹಗಲುಗನಸು ಕಾಣುತ್ತಿದ್ದೆ.
ಹೆಗಲಿಗೆ ವ್ಯಾನಿಟಿ ಬ್ಯಾಗ್ ನೇತು ಹಾಕಿಕೊಂಡು ಕೈಯಲ್ಲಿ ಕಸೂತಿ ಹಾಕಿದ ತುಂಬಿದ ಚೀಲ ಹಿಡಿದುಕೊಂಡು ಇಳಿದು ಅಟೋದವನಿಗೆ ಫೋನ್ ಪೇ ಮೂಲಕ ಹಣ ಪಾವತಿಸಿ, ಹಾಗೇ ನಿಂತಿದ್ದನ್ನು ನೋಡಿದರೆ ಯಾರೋ ಹೊಸಬರು ಅನ್ನಿಸಿತು. ನಮ್ಮ ಮನೆಗೆ ಬಂದವರಂತೂ ಇರಲಿಕ್ಕಿಲ್ಲ ಹಾಗೆ ಒಂದು ವೇಳೆ ಬಂದಿದ್ದರೆ ಈ ಚೆಲುವಿಯ ಚೆಲುವನ್ನು ಆಸ್ವಾದಿಸಲು ದೊಡ್ಡ ಅವಕಾಶ ಸಿಕ್ಕ ಹಾಗೆಯೇ ಅಲ್ಲವೇ? ಎಂದು ಮನಸ್ಸು ಮಂಡಿಗೆ ತಿನ್ನತೊಡಗಿತ್ತು.
ನೀನು ಕೈಯಲ್ಲಿ ಹಿಡಿದುಕೊಂಡಿದ್ದ ಕಾಗದದ ತುಂಡನ್ನು ನೋಡುತ್ತಿದ್ದ ರೀತಿ ಗಮನಿಸಿದರೆ, ವಿಳಾಸವನ್ನು ಹುಡುಕುತ್ತಿರಬೇಕು ಎನಿಸಿತು. ಇನ್ನೇನು ನಿನ್ನತ್ತ ಹೊರಟೇ ಬಿಡುವವನಿದ್ದೆ. ಅಷ್ಟರಲ್ಲಿ ನೀನೇ ರಸ್ತೆ ದಾಟಿಕೊಂಡು ಹಾಕಿರದ ಮನೆಯ ಗೇಟನ್ನು ತೆರೆದುಕೊಂಡು ಬಂದೆ. ಕೈಯಲ್ಲಿದ್ದ ಕಾಗದ ನನ್ನೆಡೆಗೆ ಚಾಚುತ್ತ, ‘ ಈ ವಿಳಾಸ ಎಲ್ಲಿ ಬರುತ್ತದೆ ಸ್ವಲ್ಪ ನೋಡಿ ಹೇಳಿ. ಆ ಅಟೋದವನಿಗೆ ಕೇಳಿದರೆ ಇಲ್ಲೇ ಇದೆ ನೀವೇ ಕೇಳಿ ಎಂದು ಹೇಳಿ ಹೋಗಿಯೇ ಬಿಟ್ಟ.’ ರೋಗಿ ಬಯಸಿದ್ದೂ ಹಾಲು ಅನ್ನ. ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತಾಯಿತು. ನನ್ನ ಆಫೀಸಿನಲ್ಲಿ ಖಾಲಿ ಇದ್ದ ಹುದ್ದೆಗೆ ಹೊಸದಾಗಿ ನೇಮಕಗೊಂಡು ನನ್ನ ಮನೆ ಎದುರಿನ ಮನೆಗೆ ಬಾಡಿಗೆಗೆ ಬಂದಿದ್ದೆ. ಉಳಿದೆಲ್ಲ ಸಾಮಾನು ಸರಂಜಾಮುಗಳು ಗೂಡ್ಸ್ ಕ್ಯಾರಿಯರ್ ಮೂಲಕ ಬರುತ್ತವೆ ಎಂದು ತಿಳಿದು ಮನಸ್ಸು ಮುಗಿಲಿಗೆ ಹಾರಿತು. ದಿನವೂ ಮನೆ ಎದುರಲ್ಲಿ ಕಛೇರಿಯಲ್ಲಿ ಸುಂದರಿಯ ಮುಖ ಕಾಣುವ ಭಾಗ್ಯ ನನ್ನದಾಗಿತ್ತು.
ಚೆಂದಗೆ ಸಿಂಗರಿಸಿಕೊಂಡ ಮೊನಲಿಸಾಳಂತಹ ನಗುಮೊಗವನ್ನು ಕಂಡು ಹೃದಯ ಹಿಗ್ಗುತ್ತಿತ್ತು. ನಿನ್ನ ಒಂದು ಮಾತಿಗಾಗಿ ಮನಸ್ಸು ಎದುರು ನೋಡುತ್ತಿತ್ತು. ನೀ ಮುಡಿದ ಮಲ್ಲಿಗೆಯ ಪಕಳೆ ನೆಲಕ್ಕೆ ಬಿದ್ದಾಗ ಮಮತೆಯಿಂದ ಎತ್ತಿ ಎದೆಗೊತ್ತಿಕೊಳ್ಳುತ್ತಿದ್ದೆ. ನಾ ಮಲ್ಲಿಗೆಯಾಗಿದ್ದರೆ ಇವಳ ದಟ್ಟ ಕೂದಲುಗಳನ್ನು ಮುದ್ದಾಡುವ ಅವಕಾಶ ಸಿಗುತ್ತಿತ್ತು ಎಂದು ಅಂದುಕೊಳ್ಳುತ್ತ ರೋಮಾಂಚನಗೊಂಡು, ಒಂದು ದಿನ ಲಂಚ್ ಬ್ರೇಕ್‌ನಲ್ಲಿ ಯಾರೂ ಇಲ್ಲದ ಸಮಯ ನೋಡಿ ತುಂಬಿದ ಒಲವಿನಲ್ಲಿ ಕಿರುಬೆರಳು ಹಿಡಿದು ಸವರಿದೆ. ಅಷ್ಟಕ್ಕೆ ಮೊದಲೇ ಕೆಂಪಗಿದ್ದ ಕೆನ್ನೆಗಳು ಮತ್ತಷ್ಟು ಕೆಂಪಾದವು. ಹೇ! ಇದೇನಿದು ನಿನ್ನ ತುಂಟಾಟ ಇಲ್ಲಿ ಎಂದು ಬಾಯಲ್ಲಿ ಹೇಳುತ್ತಿದ್ದರೂ ನಾಚಿದ ಮೈ ಮನಗಳು ನನ್ನ ಸಖ್ಯವನ್ನು ಮುಂದುವರೆಸಲು ಬಯಸುತ್ತಿದ್ದವು.
ಮೊದಲ ಸಲ ನಾನು ಲಂಚ ಪಡೆದದ್ದು ನಿನಗೆ ತಿಳಿದಾಗ ‘ನಾವೆಲ್ಲ ಪರಿಸ್ಥಿತಿಯ ಕೈಗೊಂಬೆಗಳು. ಹುಟ್ಟಿದಾಗಿನಿಂದ ಬಡತನದಲ್ಲಿ ಬೆಳೆದ ನಿನಗೆ ಹಣದ ಹೊಳೆ ಹರಿಯುತ್ತಿರುವುದನ್ನು ಕಂಡು ಹೀಗೆ ಮಾಡಿರುವೆ.’ ಎಂದು ನನ್ನ ಗಲ್ಲ ಹಿಡಿದು ಸಾಂತ್ವನ ಹೇಳಿದ್ದೆ. ನೆಮ್ಮದಿಯಿಂದ ಬಾಳಬೇಕಾದರೆ ಬದುಕು ಸತ್ಯ ಸದಾಚಾರವುಳ್ಳದ್ದಾಗಿರಬೇಕು. ಲಂಚ ವಂಚನೆಗಳಿಂದ ಹಣ ಪ್ರತಿಷ್ಠೆಗಳಿಂದ ಅಧಿಕಾರದ ಬಲದಿಂದ ಕೆಲ ಕಾಲ ಲೌಖಿಕ ಸುಖ ದೊರೆಯಬಹುದು ಆದರೆ ಅದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಾರದು. ಎಂದು ನೀನು ಅದೆಷ್ಟು ತಿಳಿಹೇಳಿದರೂ ಕೇಳದೆ ವಾಮಮಾರ್ಗವ ಹಿಡಿದು ಭ್ರಷ್ಟಾಚಾರವೆಂಬ ಕೂಪದಲ್ಲಿ ಬಿದ್ದೆ.’ ನಾಯಿಯ ಹಾಲದು ನಾಯಿಯ ಕುನ್ನಿಂಗಲ್ಲದೆ ಪಂಚಾಮೃತಕ್ಕೆ ಸಲ್ಲುವುದೇ?’ ಎಂದು ಶರಣರು ಹೇಳಿದ್ದಾರೆ. ಅವರ ಮಾತಿನಂತೆ ಲಂಚ ವಂಚನೆಯ ಹಣ ಯೋಗ್ಯ ಕಾರ್ಯಕ್ಕೆ ಸಲ್ಲದು. ದುಡಿಯದೇ ಬಂದ ಹಣದ ಮೌಲ್ಯ ಹಾಳು ಮಾಡುವವರಿಗೆ ಅರ್ಥವಾಗಲಾರದು. ಎನ್ನುವ ಸಂಗತಿಗಳೆಲ್ಲ ನನಗೆ ಮನವರಿಕೆಯಾಗಿದೆ.
ಆದರೆ ಈಗ ಪ್ರಾಮಾಣಿಕ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳುವ ಪಣ ತೊಟ್ಟಿದ್ದೇನೆ. ಎದುರಾದ ಮಿಕಗಳ ಹಿಡಿದು ಹಣ ಮಾಡಿಕೊಂಡವರೆಲ್ಲ ಏನಾಗಿದ್ದಾರೆ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಹಣವೆಂಬ ಮಾಯದ ಕನ್ನಡಿಯು ಅದ್ಹೇಗೆ ನಮ್ಮನ್ನು ಮೋಸದ ಜಾಲಕ್ಕೆ ತಳ್ಳುತ್ತದೆ. ಬೇವು ಬಿತ್ತಿ ಬೆಲ್ಲ ಪಡೆಯಲಾಗದು ಎನ್ನುವುದು ಈಗ ಮನದಟ್ಟಾಗಿದೆ. ಬಹುತೇಕರು ನನ್ನನ್ನು ತಿಂದುಂಡು ಎಸೆವ ಎಲೆಯಂತೆ ಉಪಯೋಗಿಸಿದರು ಎಂಬುದು ತಿಳಿದು ದುಃಖದ ಮಡುವಿನಲ್ಲಿ ಸಿಲುಕಿದ್ದೆ. ನನ್ನ ಹಣದಾಸೆ ದುರಾಸೆಯನ್ನು ಬದಲಿಸಿಕೊಂಡಿದ್ದೇನೆ. ಈಗ ನೀನು ಬಯಸಿದಂತೆ ಪ್ರಾಮಾಣಿಕ ದಕ್ಷ ಸೇವೆ ಸಲ್ಲಿಸುವ ನೌಕರನಾಗಿದ್ದೇನೆ. ಸದ್ಬುದ್ಧಿಯ ಬೀಜ ಬಿತ್ತಿ ಸಮೃದ್ಧ ಬೆಳೆ ಬೆಳೆಯುವ ಬುದ್ಧಿವಂತಿಕೆ ನಿನ್ನದು. ನಿನ್ನಿಂದಲೇ ನಾನಿಂದು ಬದಲಾಗಿರುವೆ. ಸತ್ಯಪಥದಲ್ಲಿ ನಡೆಯುವುದು ಸಂತೃಪ್ತಿ ಬದುಕಿಗೆ ಮಾರ್ಗ ಎಂಬುದು ತಿಳಿದಾಗಿದೆ.
ಎಲ್ಲವನ್ನೂ ಪಡೆಯುವ ಹುಚ್ಚು ಸಾಹಸದಲ್ಲಿ ಏನೇನೋ ತಿಳಿದುಕೊಂಡೆ ಆದರೆ ಪ್ರೀತಿಯ ಕಾಯಿಲೆಗೆ ಯಾವ ಮುಲಾಮು ಹಚ್ಚುವುದು ತಿಳಿಯದಾಗಿದೆ ಇದೆಲ್ಲ ನಡೆದು ಒಂದು ವರ್ಷವೇ ಕಳೆಯಿತು. ಬೇಕಂತಲೇ ಕೆಲಸ ಕಾರ್ಯದಲ್ಲಿ ನನ್ನ ಪ್ರೀತಿಯನ್ನು ಬದಿಗೆ ಸರಿಸುತ್ತಿರುವೆ. ನಿನ್ನೀ ನಿರ್ಲಿಪ್ತತೆ ನನ್ನಲ್ಲಿ ಎಷ್ಟು ಆಶ್ಚರ್ಯವನ್ನುಂಟು ಮಾಡಿತೋ ಅಷ್ಟೇ ಆಶ್ಚರ್ಯವನ್ನು ಉಳಿದ ಸಹೋದ್ಯೋಗಿಗಳಿಗೂ ಮಾಡಿದೆ.
ಕವಿಯ ಕಲ್ಪನೆಗೂ ನಿಲುಕದ ಚೆಲುವ ಕಳೆದುಕೊಳ್ಳಲು ನಾ ಸಿದ್ದನಿಲ್ಲ ಚೆಲುವೆ. ನೀನಿಲ್ಲದೇ ನಾನು ನೀರಿನಿಂದ ತೆಗೆದ ಮೀನಿನಂತಾಗಿದ್ದೇನೆ. ಪ್ರೇಮ ಕಳೆದುಕೊಂಡ ನೋವಿಗೆ ಮಾತು ಬಾರದ ಪುಟ್ಟ ಮಗುವಿನಂತೆ ರೋಧಿಸುತಿರುವೆ. ಸಮಯಕ್ಕೆ ಎಲ್ಲವನ್ನೂ ಬದಲಾಯಿಸುವ ಶಕ್ತಿ ಇದೆಯೆನ್ನುವುದನ್ನು ನಂಬಿ ಇಷ್ಟು ದಿನ ಕಾದಿದ್ದೇ ಬಂತು. ಎಲ್ಲ ಅರಿತವಳು ನೀನು. ಇನ್ನು ಸತಾಯಿಸುವುದು ತರವಲ್ಲ. ಬೆಳದಿಂಗಳ ತಂಪಿನಲಿ ಮಲ್ಲಿಗೆಯ ಕಂಪಿನಲಿ ಕಾಯುತಿರುವೆ. ತುಸು ಕರುಣೆ ತೋರಿಸು ಬಡಪಾಯಿಗೆ. ಅರ್ಧಕ್ಕೆ ನಿಂತಿರುವ ಪ್ರಣಯದ ಪಾಠವ ಕೆನ್ನೆಗೆ ಕಚಗುಳಿಯಿಟ್ಟು ದಿನ ರಾತ್ರಿ ಹೇಳಿಕೊಡುವೆ. ಜಗವನೆ ಮರೆಯಿಸಿಬಿಡುವೆ. ಸ್ವರ್ಗ ನಾಚಿಸುವ ಸುಖವ ತೋರುವೆ.
ನಿನ್ನ ಬರುವನ್ನೇ ಕಾಯುತ್ತಿರುವ ಇಂತಿ ನಿನ್ನ ಚೆಲುವ
.—————————————————————————————-
ಜಯಶ್ರೀ.ಜೆ. ಅಬ್ಬಿಗೇರಿ
.