ವಿದಾಯ

ಚಂದ್ರಕಾಂತ ಕುಸನೂರು

ಖ್ಯಾತ ಸಾಹಿತಿ, ಚಿತ್ರ ಕಲಾವಿದ ಮತ್ತು ಹೈಕು ಗಾರುಡಿಗ ಚಂದ್ರಕಾಂತ ಕುಸನೂರು..!

ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ನಿಧನರಾದರು.
ಅವರಿಗೆ 90 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯದಲ್ಲಿ ಅಸಂಗತ ನಾಟಕ ಮತ್ತು ಜಪಾನಿ ಮಾದರಿಯ ಹೈಕುಗಳನ್ನು ಪರಿಚಯಿಸಿದ್ದರು ಅವರು. ಹೈಕು ಮಾದರಿಯ ಕವಿತೆಗಳನ್ನು ಸಹ ಕನ್ನಡಕ್ಕೆ ಪರಿಚಯಿಸಿದ್ದರು…

ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಕಲಬುರಗಿ ಮೂಲದ ಅವರು ಕೆಲ ದಶಕಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ದರು.

ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗೂ ರಂಗಕರ್ಮಿಗಳು. ಅವರು 1931ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದವರು.
ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ ಅವರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕಲಬುರ್ಗಿಯಲ್ಲಿ “ರಂಗ ಮಾಧ್ಯಮ”ಎಂಬ ನಾಟಕ ಸಂಸ್ಥೆಯ ಸ್ಥಾಪಕರೂ ಅವರು.
ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದ್ದಾರೆ ಅವರು…

1975ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ಲಭಿಸಿದೆ. 1992ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿಯೂ ಲಭಿಸಿಗಿದೆ ಅವರಿಗೆ. 2006ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ಕೂಡ ದೊರೆತಿದೆ…

ಬಹುಮುಖಿ ಸಾಹಿತಿ ಅವರು–

ವಿದೂಷಕ’, ‘ಆನಿ ಬಂತಾನಿ’, ‘ದಿಂಡಿ’ಯಂಥ ಅಸಂಗತ ನಾಟಕಗಳಿಂದ; ‘ಯಾತನಾ ಶಿಬಿರ’, ‘ಚರ್ಚ್‌ಗೇಟ್‌’, ‘ಗೋಹರಜಾನ್‌’, ‘ಮಾಲತಿ ಮತ್ತು ನಾನು’ ಇತ್ಯಾದಿ ಕಾದಂಬರಿಗಳಿಂದ; ಸಣ್ಣ ಕತೆಗಳಿಂದ; ಅನುವಾದಗಳಿಂದ ಸಹೃದಯರಲ್ಲಿ ಸ್ಥಾನ ಪಡೆದಿರುವ ಚಂದ್ರಕಾಂತ ಕುಸನೂರ ಅವರು ಚಿತ್ರಕಲಾವಿದರೆಂಬುದೂ ಬಹುಜನರಿಗೆ ಗೊತ್ತಿರಲಿಕ್ಕಿಲ್ಲ…

ಅವರು ಯಾರೆದುರೂ ಹಾಗೆ ಹೇಳಿಕೊಳ್ಳುವ ಸ್ವಭಾವದವರಲ್ಲ ಎಂದ ಮೇಲೆ ಗೊತ್ತಾಗುವುದಾದರೂ ಹೇಗೆ? ಅವರ ನಿಕಟವರ್ತಿಗಳು, ಗೆಳೆಯರು ಮುಂದಾಗಿದ್ದರಿಂದ ಅವರು ಬರೆದ ಕೃತಿಗಳು ಪ್ರಕಟವಾದವು. ಕಲಾಕೃತಿಗಳು ಪ್ರದರ್ಶನಗೊಂಡವು..!

ಇನ್ನೂ ಪ್ರಕಟವಾಗದ ಹಸ್ತಪ್ರತಿಗಳು, ಕಲಾಕೃತಿಗಳು ಅವರ ಭಂಡಾರದಲ್ಲಿ ಇವೆ. ಜಾಗದ ಕೊರತೆಯಿಂದ ಎಷ್ಟೋ ಚಿತ್ರಗಳನ್ನು ಸುಟ್ಟು ಹಾಕಿದ್ದೂ ಇದೆ. ಕುಸನೂರರು ಹೇಳುವುದೇನೆಂದರೆ ‘ನಾನು ವೈಯಕ್ತಿಕ ಖುಷಿಗಾಗಿ ಬರೆಯುತ್ತೇನೆ. ಚಿತ್ರ ಬಿಡಿಸುತ್ತೇನೆ. ನನ್ನ ಪಾಲಿಗೆ ಭಾಷೆ, ಬಣ್ಣದ ಜೊತೆಗಿನ ಅಭಿವ್ಯಕ್ತಿಯೇ ಲಿಬರೇಶನ್‌. ಕಲೆಯ ಅನುಸಂಧಾನದಲ್ಲಿ ನಾನು ದೈಹಿಕ, ಮಾನಸಿಕ ಒತ್ತಡಗಳಿಂದ ಬಿಡುಗಡೆಯಾಗುತ್ತೇನೆ. ಆನಂದ ಅನುಭವಿಸುತ್ತೇನೆ. ತುಂಬ ಕಷ್ಟದ ಸಂದರ್ಭದಲ್ಲಿ, ಬದುಕಿನ ಅತಂತ್ರ ಸ್ಥಿತಿಯಲ್ಲಿ ಈ ಕಲೆಗಳು ನನ್ನ ಕೈಹಿಡಿದಿವೆ. ನನ್ನ ವ್ಯಕ್ತಿತ್ವ ರೂಪಿಸಿವೆ’ ಎಂದು ಸಾದರಪಡಿಸಿದ್ದರು ಚಂದ್ರಕಾಂತ ಕುಸನೂರವರು..!

ಈ ನಿಲುವಿನಿಂದಾಗಿಯೇ ಅವರು ತಾನು ಸಾಹಿತಿ, ಕಲಾವಿದನೆಂದು ಹೇಳಿಕೊಳ್ಳುವುದಕ್ಕೂ ಮುಜುಗರ ಪಡುದ್ದತ್ತಿರು. ಅವರು ಬರೆದ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಲಲಿತಕಲಾ ಅಕಾಡೆಮಿಗಳಿಂದ ಪುಸ್ತಕ ಬಹುಮಾನಗಳು ಬಂದಿವೆ. ಜೊತೆಗೆ ಮೂರೂ ಅಕಾಡೆಮಿಗಳ ಗೌರವ ಪ್ರಶಸ್ತಿಗಳೂ ಬಂದಿವೆ. ಈ ತರಹದ ಗೌರವಕ್ಕೆ ಪಾತ್ರರಾದ ಸಾಹಿತಿ, ಕಲಾವಿದ ಇವರೊಬ್ಬರೇ ಇರಬಹುದು..!

ಚಂದ್ರಕಾಂತ ಕುಸನೂರ ಎತ್ತರದ ನಿಲುವು. ಗಂಭೀರ ಮುಖ. ಸಮೀಪಕ್ಕೆ ಹೋಗಿ ಮಾತಾಡಿದರೆ ಗೊತ್ತಾಗುವುದು ಅವರ ಮೃದುವಾದ ಮಾತು, ಸ್ನೇಹಕ್ಕೆ ಹಂಬಲಿಸುವ ಮನಸ್ಸು.

ಕುಸನೂರರು ಹುಟ್ಟಿ ಬೆಳೆದದ್ದು ಕಲಬುರ್ಗಿಯಲ್ಲಿ. ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರು. ಒಂದು ಸಣ್ಣ ಹಳ್ಳಿಯಲ್ಲಿ ಇರುತ್ತಿದ್ದರು. ಇವರು ಕಲಬುರ್ಗಿಯ ಕಕ್ಕನ ಅಂದರೆ ಚಿಕ್ಕಪ್ಪನ ಮನೆಯಲ್ಲಿದ್ದು ಓದಿದರು.
ದೊಡ್ಡ ಕುಟುಂಬ, ದುಡಿಯುವವ ಒಬ್ಬನಾದರೆ, ಕೂತು ಉಣ್ಣುವವರು ಬಹಳ. ಕಷ್ಟದಲ್ಲಿಯೇ ಓದಿದವರು ಅವರು. ಆಗ ಆ ಊರಿನಲ್ಲಿ ಉರ್ದು ಮುಷಾಯರ್‌, ಹಿಂದಿ ಕವಿಗೋಷ್ಠಿಗಳು ಬಹಳ. ಆ ಪರಿಸರದ ಪ್ರೇರಣೆಯಿಂದ ಕುಸನೂರರು ಹಿಂದಿಯಲ್ಲಿ ಕವಿತೆ, ಕತೆ ಬರೆಯಲು ಪ್ರಾರಂಭಿಸಿದರು…

ಒಮ್ಮೆ ಧಾರವಾಡದಲ್ಲಿ ಜರುಗಿದ ಬಹುಭಾಷಾ ಕವಿಗೋಷ್ಠಿಗೆ ಹೋದರು. ಇವರ ಹಿಂದಿ ಕವಿತೆ ಕೇಳಿದ ವರಕವಿ ಬೇಂದ್ರೆಯವರು ‘ಕನ್ನಡದಲ್ಲಿ ಕವಿತಾ ಬರಿ’ ಎಂದು ಅಪ್ಪಣೆ ಮಾಡಿದರು. ಅಲ್ಲಿವರೆಗೆ ಕನ್ನಡ ಓದಲು, ಬರೆಯಲು ಬಾರದ ಕುಸನೂರರು ಕನ್ನಡ ಕಲಿತು, ಕವಿತೆ ಬರೆದರು. ಶಾಂತರಸರ ಸ್ನೇಹ, ಸಹಕಾರದಲ್ಲಿ ‘ನಂದಿ ಕೋಲ’ ಎಂಬ ಮೊದಲ ಕವನ ಸಂಕಲನ ಪ್ರಕಟವಾಯಿತು..!

ಹಿಂದಿ, ಉರ್ದು ಕವಿತೆಗೆ ಹೋಲಿಸಿದರೆ ಅವರಿಗೆ ಕನ್ನಡ ಅಭಿವ್ಯಕ್ತಿ ಕಷ್ಟವೆನಿಸುತ್ತಿತ್ತು. ಅದಕ್ಕಾಗಿಯೇ ಆರಂಭದಲ್ಲಿ ಕಡಿಮೆ ಕಾವ್ಯ ಪಂಕ್ತಿಯ ಜಪಾನಿನ ಹೈಕುವಿನಂಥ ರೂಪದಲ್ಲಿ ಪ್ರಯೋಗ ಮಾಡಿ ಕನ್ನಡಕ್ಕೆ ಹೈಕುಗಳನ್ನು ಪರಿಚಯಿಸಿದರು…

ಹಾಗೆಯೇ ಅಸಂಗತ ನಾಟಕಗಳ ರಚನೆ, ಪಾಶ್ಚಾತ್ಯ ಸಾಹಿತ್ಯದ ವಿಪುಲ ಓದಿನಿಂದಾಗಿ ಕುಸನೂರರ ಬರವಣಿಗೆ ಹೊಸ ಮೆರುಗು ಪಡೆಯಿತು. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಗಮನಾರ್ಹ ಎನಿಸಿತು…

ಕುಸನೂರ ಅವರು ಉರ್ದು, ಹಿಂದಿ, ಕನ್ನಡ, ಮರಾಠಿ, ಇಂಗ್ಲಿಷ್‌ ಭಾಷೆಗಳನ್ನು ಚೆನ್ನಾಗಿ ಮಾತನಾಡುತ್ತಿದ್ದರು. ಓದುತ್ತಿದ್ದರು. ಬರೆಯುತ್ತಿದ್ದರು ಕೂಡ.
ಸಂಸ್ಕೃತದ ಅಭ್ಯಾಸವೂ ಇತ್ತು. ಬೆಳಗಾವಿಗೆ ಬಂದ ಮೇಲೆ ಮರಾಠಿ ಕಲಿತು, ಕವಿತೆ, ಕಥೆ ಬರೆದರು ಚಂಕಾಂತ ಕೂಸನುರರು.
ಅನಂತಮೂರ್ತಿಯವರ ‘ಸಂಸ್ಕಾರ’, ಆಲನಹಳ್ಳಿಯವರ ‘ಕಾಡು’ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ ಅವರು…

ಕನ್ನಡದಲ್ಲಂತೂ ಎಪ್ಪತ್ತಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಬಹುಭಾಷೆಗಳ ಜೊತೆಗಿನ ಈ ಹೊಕ್ಕು ಬಳಕೆ, ಆಟ ಒಡನಾಟವಿದ್ದಾಗಲೂ ನಿವೃತ್ತಿಯ ನಂತರ ಚಿತ್ರಕಲೆ ಅವರನ್ನು ಆವರಿಸಿಕೊಂಡಿತು. ವಿದ್ಯಾರ್ಥಿಯಾಗಿದ್ದಾಗಲೇ ಈ ಕಲೆ ಅವರನ್ನು ಆಕರ್ಷಿಸಿತು. ನೂತನ ವಿದ್ಯಾಲಯದಲ್ಲಿ ಓದುವಾಗ ಚಿತ್ರಕಲೆ ಕಡ್ಡಾಯ ವಿಷಯವಾಗಿತ್ತು.
ಅದನ್ನು ಶಂಕರರಾವ್‌ ಆಳಂದಕರ ಕಲಿಸುತ್ತಿದ್ದರು. ಅವರು ಸುಪ್ರಸಿದ್ಧ ಕಲಾವಿದ ಎಸ್‌.ಎಂ.ಪಂಡಿತರಿಗೆ ಗುರುಗಳಾಗಿದ್ದರು. ಅವರ ಬಣ್ಣ, ರೇಖೆಗಳ ಆಟ ಸುಂದರವಾಗಿತ್ತಂತೆ. ಅವರ ಚಿತ್ರ ನೋಡಿ ಇವರಿಗೂ ಬಿಡಿಸಬೇಕು ಎನಿಸುತ್ತಿತ್ತು. ಆದರೆ ಬಣ್ಣ, ಬ್ರಷ್‌ ಖರೀದಿಸುವ ಸ್ಥಿತಿ ಅವಗಿರಲಿಲ್ಲ..!

ಸಹಪಾಠಿ ಗುರುಪಾದಪ್ಪ ಧಂಗಾಪುರ (ಈಗ ಇವರು ಮುಂಬಯಿಯಲ್ಲಿ ಪ್ರಸಿದ್ಧ ಕಲಾವಿದರಾಗಿದ್ದಾರೆ) ನೆರವಾಗುತ್ತಿದ್ದರು. ಅಲ್ಲಿಂದ ಆ ಕಲೆಯ ಆಸಕ್ತಿ ಅವರಲ್ಲಿ ಗುಪ್ತಗಾಮಿನಿಯಾಗಿಯೇ ಉಳಿಯಿತು. ಅದು ಪ್ರಕಟವಾಗಿ ಧುಮ್ಮಿಕ್ಕುವಂತಾದದ್ದು ನಿವೃತ್ತಿಯ ನಂತರ. ಕುಸನೂರರ ಚಿಂತನೆ, ಸೃಜನಶೀಲತೆಗೆ ಒಗ್ಗಿದ್ದು ಅಮೂರ್ತ ಚಿತ್ರಕಲೆ. ಕೆಂಪು, ಹಸಿರು, ಹಳದಿ ಬಣ್ಣಗಳ ರಭಸ. ಅವುಗಳ ಸಂಯೋಜನೆಯಿಂದ ಅವರ ಕಲಾಕೃತಿಗಳು ಆಕರ್ಷಕವಾಗಿರುತ್ತವೆ, ಕಣ್ಣಿಗೆ ಸುಖ ನೀಡುತ್ತವೆ. ತಮ್ಮಷ್ಟಕ್ಕೇ ತೆಗೆದು ಮನೆಯಲ್ಲಿ ಪೇರಿಸಿಡುತ್ತಿದ್ದರು. ಒಂದು ಸಾರಿ ತರುಣ ಕಲಾವಿದರು ಅವರ ಮನೆಗೆ ಹೋಗಿ ನೋಡಿ ಬೆರಗಾದರು…

ಪ್ರದರ್ಶನವಿಲ್ಲದೇ ಹಾಗೇ ದೂಳು ತಿನ್ನುತ್ತ ಬಿದ್ದುಕೊಂಡಿದ್ದ ಅವುಗಳನ್ನು ಹೊರಕ್ಕೆ ಎಳೆದು ಅಲ್ಲಲ್ಲಿ ಪ್ರದರ್ಶನಕ್ಕೆ ಏರ್ಪಾಟು ಮಾಡಿದರು. ಬೆಂಗಳೂರು, ಮುಂಬಯಿ, ಕೋಲ್ಕತ್ತ, ದೆಹಲಿಗಳಲ್ಲಿ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಕೆಲವು ಮಾರಾಟವಾಗಿವೆ. ಬಂದ ದುಡ್ಡಿನಲ್ಲಿ ಮತ್ತೆ ಬಣ್ಣ, ಕ್ಯಾನ್ವಾಸ್‌ ಖರೀದಿಸಿ ಕಲಾಕೃತಿಗಳ ರಚನೆಯಲ್ಲಿಯೇ ಆನಂದ ಅನುಭವಿಸುವುದು ಕುಸನೂರರ ಸ್ವಭಾವ. ಅವರ ಪ್ರಕಾರ ಅನುಭವದ ಅಭಿವ್ಯಕ್ತಿ ಚಿತ್ರಕಲೆಯಲ್ಲಿ ಹೇಗೆ ಸಾಧ್ಯವೋ ಹಾಗೆ ಭಾಷೆಯಲ್ಲಿ ಸಾಧ್ಯವಿಲ್ಲ. ಒಂದೊಂದು ಭಾಷೆಗೂ ನಿರ್ದಿಷ್ಟ ವ್ಯಾಕರಣವಿದೆ. ಒಂದು ಶಿಸ್ತು ಇದೆ. ಸಾಹಿತಿಯಾದವನು ಅದರ ಮಿತಿಯಲ್ಲಿಯೇ ಬರೆಯಬೇಕು…

ಅದಕ್ಕಿರುವ ಓದುಗರ ಬಳಗವೂ ಸೀಮಿತವಾಗಿರುತ್ತದೆ. ಇದಕ್ಕೆ ಹೋಲಿಸಿದಾಗ ಚಿತ್ರಕಲೆ ಅಭಿವ್ಯಕ್ತಿಯ ಸಶಕ್ತ ಮಾಧ್ಯಮ ಎನಿಸುತ್ತದೆ. ಅದನ್ನು ನೋಡುವ ರಸಿಕರ ಬಳಗವೂ ದೊಡ್ಡದು ಇದೆ… ‘

‘ಚಿತ್ರಕಲೆಯಲ್ಲಿ ನಾನು ಹೆಚ್ಚು ಸ್ವಾತಂತ್ರ್ಯ ಅನುಭವಿಸುತ್ತೇನೆ. ಸಂತೋಷವನ್ನು ಕೂಡ’ ಎಂದು ಕುಸನೂರ ಚಿತ್ರಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಕಲಾಕೃತಿಗಳು, ಬಣ್ಣದ ಹೊಂದಾಣಿಕೆ, ಅವುಗಳ ಪರಿಣಾಮ, ಕಲಾವಿದರ ವ್ಯಕ್ತಿತ್ವದ ಬಗ್ಗೆ ಪ್ರೇಕ್ಷಕರ ರಸಗ್ರಹಣ ಕುರಿತು ಕುಸನೂರರು ಸೊಗಸಾಗಿ ಮಾತನಾಡುತ್ತಿದ್ದರು. ಆ ಕುರಿತು ಆಳವಾಗಿ ಅಧ್ಯಯನ ಮಾಡಿದ್ದರು ಅವರು…

ಇವರು ಬರೆದ ‘ಕಲೆ: ಅನುಭವ, ಅನುಭಾವ’ ಕೃತಿಗೆ ಲಲಿತ ಕಲಾ ಅಕಾಡೆಮಿಯ ಪುಸ್ತಕ ಬಹುಮಾನವೂ ದೊರೆತಿದೆ. ಇವರ ‘ಕಲಾನುಭವ’ ಎಂಬ ಕೃತಿಯನ್ನು ಅಕಾಡೆಮಿಯೇ ಪ್ರಕಟಿಸಿತು..!

ಚಂದ್ರಕಾಂತ ಕುಸನೂರರಿಗೆ ಅಂತಿಮ ನಮನ

ಬೆಳಗಾವಿಯ ರಾಣಿ ಚನ್ನಮ್ಮ ನಗರದ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದ ನಾಡಿನ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಬೆಳಗಿನ ಜಾವ 2ಗಂಟೆ ಸುಮಾರಿಗೆ ಶಾಹಪುರ ಸ್ಮಶಾನ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಗ್ನಿಸ್ಪರ್ಶ ಮಾಡಿ ನೆರವೇರಿಸಲಾಯಿತು. ಕಿರಿಯ ಮಗ ಗುರುರಾಜ ಕುಸನೂರ ಅಗ್ನಿಸ್ಪರ್ಶ ಮಾಡಿದರು. ಕೊವಿಡ್-,19 ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು.
ಕುಟುಂಬ ವರ್ಗದವರು, ಸಾಹಿತಿಗಳು, ಒಡನಾಡಿಗಳು, ಚಿತ್ರಕಲಾವಿದ ಬಾಳು ಸದಲಗೆ, ಸಾಹಿತಿಗಳಾದ ಶಿರೀಶ ಜೋಶಿ, ಬಿ.ಕೆ. ಕುಲಕರ್ಣಿ, ಬ್ಯಾಂಕ್ ನ ನಿವೃತ್ತ ಅಧಿಕಾರಿ ರಘುನಾಥ ಮುತಾಲಿಕ, ಮಾಜಿ ನಗರ ಸೇವಕಿ ಶೀಲಾ ದೇಶಪಾಂಡೆ ಮತ್ತು ನಾಗರಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದರು. ಚಂದ್ರಕಾಂತ ಕುಸನೂರ ಅವರ ನಿಧನಕ್ಕೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ…

*********

ಕೆ.ಶಿವು.ಲಕ್ಕಣ್ಣವರ


One thought on “ವಿದಾಯ

  1. ಸರ್
    ಕುಸನೂರ ಸರ್ ಕಲಬುರಗಿ ಮೂಲದವರಾದ್ದರಿಂದ
    ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
    ಬಹುಮುಖ ಪ್ರತಿಭೆಯ ಕುಸನೂರರು ಕನ್ನಡದ ಲ್ಲಿ ಅಸಂಗತ ನಾಟಕ ಪರಂಪರೆ ಸೃಷ್ಟಿಸಿದ ಆದ್ಯರಲ್ಲಿ ಒಬ್ಬರು.
    ಇಂದು ಅವರಿಲ್ಲದ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ.
    ಡಿ‌ಎಮ್. ನದಾಫ್. ಅಫಜಲಪುರ

Leave a Reply

Back To Top