ಸೊರಗುತ್ತಿದೆ ಮೂಗು ಕವಿತೆ-ಸುವಿಧಾ ಹಡಿನಬಾಳ

ಕಾವ್ಯ ಸಂಗಾತಿ

ಸೊರಗುತ್ತಿದೆ ಮೂಗು

ಸುವಿಧಾ ಹಡಿನಬಾಳ

ಮೂಗುತಿಯ ಭಾರದಿಂದ
ಸೊರಗುತ್ತಿದೆ ಮೂಗು
ಯೋಜನೆಗಳ ಭಾರದಿಂದ
ನಲುಗುತ್ತಿದೆ ಗುಣಮಟ್ಟ

ಯೋಜನೆ ರೂಪಿಸುವವರು
ಹಾರುತ್ತಿರುವರು ಬಾನಂಗಳದಲ್ಲಿ
ವಾಸ್ತವ ರೆಕ್ಕೆ ಬಡಿಯಲಾಗದು
ತಳಮಟ್ಟದ ಜಂಜಾಟದಲ್ಲಿ

ಏಸಿ ರೂಮಿನಲ್ಲೇನು
ಧಗೆಯ ಹೊಗೆ ? ಆದರಿಲ್ಲಿ
ಮೇಲೇಳಲಾಗದ
ವಿಡಂಬನ ನಗೆ

ಬೇಕಿಲ್ಲ ಯಾರಿಗೂ
ಕೆಲಸದ ಗುಣಮಟ್ಟ
ತಟ್ಟಿ ಬಡಿದು ಬೆದರಿಸುವ
ಪರಿಗೆ ಬಂದಿದೆ ಸಂಕಷ್ಟ

ಇಂದೀಗ ಶಿಕ್ಷಕ ಶಿಕ್ಷಕನಲ್ಲ
ಬಹುವಿಧದ ಪರಿಚಾರಕ
ಹತ್ತಾರು ಯೋಜನೆ ಸುತ್ತೋಲೆ
ತಲೆ ತಿರುಗುತ್ತದೆ ಗಿರಿಗಿಟ್ಟಲೆ

ಸರ್ಕಾರಿ ಯೋಜನೆಗಳೇನೊ
ಮೇಲ್ನೋಟಕ್ಕೆ ಅತ್ಯುತ್ತಮ
ವಾಸ್ತವದ ಅರಿವಿರದ ಬರೀ ಲೆಕ್ಕ
ಕಾಗದ ಪತ್ರಗಳಲಿ ಎಲ್ಲಾ ಪಕ್ಕಾ!

ಇಲ್ಲಿ ಬಾಣೆಲೆಯಲ್ಲೇ ಹೆಗ್ಗಣ
ಸತ್ತುಬಿದ್ದಿದೆ ಎತ್ತುವವರಿಲ್ಲ
ಬದಲಿಗೆ ಹೊಸ ಹೊಸ ಯೋಜನೆಗಳ
ಭೂರೀ ಭೋಜನದ ತಯಾರಿ!

ಯಾರಿಗೆ ಬೇಕಿದೆ ಗುಣಮಟ್ಟ?
ಎಲ್ಲರಿಗೂ ಗೊತ್ತು ಇವೆಲ್ಲ
ಕಾಗದ ಪತ್ರಗಳಲಿ ಹುಲಿ
ತಮ್ಮ ‌ತಲೆಗೆ ಪಗಡೆ ಕಟ್ಟಲಷೈ


ಸುವಿಧಾ ಹಡಿನಬಾಳ

One thought on “ಸೊರಗುತ್ತಿದೆ ಮೂಗು ಕವಿತೆ-ಸುವಿಧಾ ಹಡಿನಬಾಳ

Leave a Reply

Back To Top