ಕಾವ್ಯ ಸಂಗಾತಿ
ಮತ್ತೇಕೆ ದೂರುವೆ..?
ಇಂದಿರಾ ಮೋಟೆಬೆನ್ನೂರ
ಜೊತೆಗೆ ನಡೆವ ಪ್ರತಿ
ಹೆಜ್ಜೆಗಳ ಆಯ್ಕೆ ನಿನ್ನದೇ..
ನಡೆವ ಹೆಜ್ಜೆಗಳ ನಡುವೆ
ತೊರೆದು ನಡೆಯುವ
ಒಂಟಿ ಮಾಡುವ
ಜೀವ ನಿನ್ನದೇ…
ನುಡಿವ ಪ್ರತಿ ಮಾತಿನ
ಆಯ್ಕೆ ನಿನ್ನದೇ..
ನುಡಿದ ಮಾತುಗಳ
ಮುಖ ತಿರುವಿ ನಡೆವ
ಶೋಕ ನೀಡುವ
ಮೂಕ ಮನಸು
ನಿನ್ನದೇ..
ನಡೆವ ದಾರಿಯ
ಆಯ್ಕೆ ನಿನ್ನದೇ..
ನಡು ದಾರಿಯಲಿ
ಹಿಡಿದ ಕೈ ಕೊಡವಿ
ನಿರಾಕರಣೆ ಮಾಡಿ
ನಡೆವ ಭಾವ ನಿನ್ನದೇ..
ನೂರು ಗಾವುದ
ದೂರ ಪಯಣದ
ಜೊತೆ ಯಾನದ
ಕೊಟ್ಟ ಭಾಷೆ ಮುರಿದು
ಕವಲು ದಾರಿಗೆ
ತಳ್ಳುವ ಕಲ್ಲುಹೃದಯ
ನಿನ್ನದೇ…
ಆಯ್ಕೆ ಪ್ರಕ್ರಿಯೆ
ನಿರ್ಣಯ ಗಮ್ಯ
ಕನಸು ನನಸು
ಭಾವ ಜೀವ
ನೋವು ಹೂವು
ಕೊಡುಗೆ ಎಲ್ಲವೂ
ನಿನ್ನದೇ..
ಉದಾಸೀನ ಉನ್ಮಾದ
ತಿರಸ್ಕಾರ ಪುರಸ್ಕಾರ
ನಗು ಅಳು ಭಾವ ಬಿತ್ತನೆ
ನೆನಪ ಬುತ್ತಿ ಮೌನ ಗಾನ
ಇಟ್ಟ ಆಣೆ ಮರೆತ
ಎಲ್ಲ ಕಾಣಿಕೆ ಕೊಡುಗೆ
ನಿನ್ನದೇ..
ಕರೆದು ಹರಸಿ ಅರಿತು ಬೆರೆತ
ಸ್ನೇಹ ಜೀವಿಯ
ನೀನೇ ದೂರ ತಳ್ಳಿ
ತೊರೆದು ಹೋದರೆಂದು
ಜೊತೆ ಇರುವ ಭಾವ ಜೀವಿಯ
ದೂರ ದೂಡುತ
ಮತ್ತೇಕೆ ದೂರುವೇ…?
ಇಂದಿರಾ ಮೋಟೆಬೆನ್ನೂರ.