ರತ್ನರಾಯಮಲ್ಲ ಗಜಲ್

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಗಜಲ್

ಹೃದಯ ಬಡಿತದ ಅನುಭವ ಆಗುತಿಲ್ಲ ಆಲಂಗಿಸಿ ನೋಡು ನೀನೊಮ್ಮೆ
ನಾಲಿಗೆಗೆ ರುಚಿಯ ಸ್ವಾದ ಗೊತ್ತಾಗುತಿಲ್ಲ ಚುಂಬಿಸಿ ನೋಡು ನೀನೊಮ್ಮೆ

ಸುಮಪೂರಿತ ಪ್ರೇಮಗೀತೆಯೊಂದನು ಬರೆದಿರುವೆ ಮನದರಸಿ ನಿನಗಾಗಿ
ಅಪಶೃತಿಯು ಕಾಡುತಿದೆ ಹಾಡಲು ಬರುತಿಲ್ಲ ಆಲಿಸಿ ನೋಡು ನೀನೊಮ್ಮೆ

ಕಾಯಕ್ಕಾಗಿ ಕಾಯಕ ಮಾಡುತ ಅಲೆದಾಡುತಿರುವೆನು ಅಲೆಮಾರಿಯಾಗಿ
ಕಾಲವು ಚೆಲ್ಲಾಪಿಲ್ಲಿಯಾಗಿದೆ ಕೂಡುತಿಲ್ಲ ಜೋಡಿಸಿ ನೋಡು ನೀನೊಮ್ಮೆ

ದೀಪ ಆರಿಸಿದೊಡನೆ ಭಾವದೀಪ್ತಿಯು ಬಿಡದೆ ಕೆಣಕುತಿದೆ ಮೈ ಮನವನು
ಮಲಗಿದರೆ ನಿದಿರೆ ಹತ್ತಿರವೂ ಸುಳಿಯುತಿಲ್ಲ ಸಂಧಿಸಿ ನೋಡು ನೀನೊಮ್ಮೆ

ನಾಕದ ಹಂಬಲ ಹಗಲಿರುಳು ದಾಸನಿಗೆ ಕೈ ಹಿಡಿದು ಕರೆದೊಯ್ಯ ಬಾರದೆ
ನಿನ್ನ ಮಲ್ಲಿಗೆಯ ಮೊಗ್ಗುಗಳು ಅರಳುತಿಲ್ಲ ನೀರುಣಿಸಿ ನೋಡು ನೀನೊಮ್ಮೆ


ರತ್ನರಾಯಮಲ್ಲ


Leave a Reply

Back To Top