ಅಂಬೇಡ್ಕರ ೧೯೮೧

ಮೂಲ: ನಾಮದೇವ ಡಸಾಲ್

ಕನ್ನಡಕ್ಕೆ: ಕಮಲಾಕರ ಕಡವೆ

ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ
ನಿನ್ನ ತಯಾರಿಯಲ್ಲಿ ನಾವಿರಬೇಕು
ಎಲ್ಲಿಲ್ಲ ನೀನು?
ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ
ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ
ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ
ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ
ನಿನ್ನ ಶೇಷ, ನಿನ್ನ ಅವಶೇಷ
ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ
ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ
ಭಯೋತ್ಪಾದನೆ
ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು?
ಜ್ಞಾನದ ಎಲೆಯೊಂದಿಗೆ ಧೃಢವಾಗುತ್ತ ದಿಗಂತವೇ ಆಗುವವ ನೀನು
ಕ್ಷುದ್ರ ಕಣ್ಣಿನ ಲಫಂಗರು ಯಾಕೆ ನಿನ್ನನ್ನು ಕ್ಷಿತಿಜಕ್ಕೆ ಮಾತ್ರ ಬಂಧಿಯಾಗಿಸಿಡಬೇಕು?
ತಮ್ಮ ಕುಂಡಿಯ ಮೇಲಿನ ಮಚ್ಚೆ ಎಣಿಸಲು ಬಾರದ ಇವರಿಗೆ
ಬರೀ ಸಾಮಾನ ಪಿಟೀಲು ತುಣ ತುಣಿಸುವುದು
ಮತ್ತು ಕುಂಡೆಯ ಡೋಲು ಬಾರಿಸುವುದು ಯಾಕೆ ಬೇಕು?
ಬೆರೆಯುವ ಹೆಸರಲ್ಲಿ ಇವರು ಮೈಮೇಲೆ ಹೊದ್ದುಕೊಂಡಿರುವ ಸಂಪತ್ತಿನ ಶಾಲು
ಕೊನೆಗೂ ರಾಧಾಬಾಯಿ, ಭೀಮಾಬಾಯಿಯರ ಕರುಣಾಷ್ಟಕ
ಕೊನೆಗೂ ಯೆಲ್ಲಮ್ಮನ ತಿರುಪೆ ಪಾತ್ರೆ, ಈ ಚಾಣಾಕ್ಷ ಉರಿಶಿಶ್ನ
ಇವರುಗಳ ಪಂಚಾಯತಿ ಹಮಾಲ
ಇವರುಗಳ ಗುಡಾಣತುಂಬುವ ಟ್ರಸ್ಟ್
ಇವೇ ಇವರುಗಳ ಎಂಟು ಹೊತ್ತಿನ ಸುಗ್ರಾಸ ಊಟದ ಶಿಬಿರ
ನಂತರ ರಾತ್ರಿ ಸ್ವಪ್ನಕ್ಕೆ ಕಾಡಿಗೆ ಹಚ್ಚಿಕೊಂಡು ಸುಗ್ರಾಸ ಸಂಭೋಗ
ಪುನಃ ಹೊಸ ದಿನಕ್ಕಾಗಿ ಶುಭ್ರ ಖಾದಿ ಹೊದ್ದು ಸುಪರ್ ಸ್ಟ್ರಕ್ಚರ್ ಹಾಗೆ
ನಲ್ಲ ನಲ್ಲೆ
ಸ್ವಂತದ್ದೇ ಶಿಲುಬೆ
ಸ್ವಂತ ಹೆಗಲುಗಳ ಮೇಲೆ ಹೊತ್ತೊಯ್ಯಲು ಹಲ್ಕಟರಾದ ಇವರು
ಇಲ್ಲಿ ಅಜ್ಞಾನ ಫಲ ಕೊಡಲಿ, ಅರಳಲಿ
ದಲಿತರಿಗೆ ಮಾತ್ರ ಏನೂ ತಿಳಿಯದಿರಲಿ
ಈ ಪ್ರವಾದಿಗಳ ನೆತ್ತಿಯ ಮೇಲೆ ಬೆಣ್ಣೆ ಕರಗುತ್ತಲಿರಲಿ
ಇತ್ತೀಚೆ ಇವರ ಸಮಾಜವಾದಿ ಪಿಂಡಗಳನ್ನೂ ಕಾಗೆ ತಿನ್ನ ತೊಡಗಿವೆ
ಈ ಕಾಗೆಗಳು ಇಡೀ ಶಹರವನ್ನೇ ಹೊಲಸು ಮಾಡಿ ಬಿಟ್ಟಿದ್ದಾವೆ
ಓ ಮಬ್ಬು ಆಕಾಶವೇ
ಆ ನಮ್ಮ ಹಿತೈಷಿ ಮುಂಗಾರು ನಮ್ಮನ್ನ ಒದ್ದೆಯಾಗಿಸುತ್ತ ಬರುತ್ತಿದೆಯಲ್ಲ !
ಈ ಎಂಬತ್ತೊಂದರ ವರ್ಷದ ಮಹಾದ್ವಾರವು ಅವನಿಗಾಗಿ ಪೂರ್ತಿ ತೆರೆಯಲಿ
ಅವನಿಗಾಗಿ ಈ ಹೃದಯ, ಅವನಿಗಾಗಿ ಈ ರಕ್ತ
ಅವನಿಗಾಗಿ ಈ ಪ್ರೇಮ
ಸ್ವಪ್ನಗಳ ಪರದೆ ಹರಿದು ಸಿಂಹಗರ್ಜನೆಯಲ್ಲಿ ಪಾಲ್ಗೊಳ್ಳಲು
ಸಜ್ಜಾಗಿದ್ದೇವೆ ನಾವೀಗ ಯಾರಪ್ಪನ ಭಯ ನಮಗೆ?
*******