ಒಳದನಿ


ಶಹನಾಜ್ ಬಿ. ಸಿರಿವ್ಯಾಲ
ಒಳದನಿ
ಅಂದು
ನೀನು ನೆಟ್ಟಿದ್ದ
ಜಾತ್ಯತೀತತೆಯ ವೃಕ್ಷ
ಇಂದು
ರಾಜಕೀಯ ವಿಷ ಗಾಳಿಗೆ ಸಿಲುಕಿ
ನಿತ್ಯವೂ ನರಳುತ್ತಿದೆ.
ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ
ದಮನಿತರ ಕಣ್ಣುಗಳಲ್ಲಿ
ನೋವು ಮಡುಗಟ್ಟಿದೆ.
ಅದ್ಯಾಕೋ
ನಿನ್ನ ಬುದ್ಧನಿಂದಲೂ
ಈ ಸಮಾಜವನ್ನು
ತಿದ್ದಲಾಗಲಿಲ್ಲ.

ವೇಮುಲನ ಮುಖ
ಪ್ರತಿ ಬಾರಿ
ನೆನೆದಾಗಲೂ ,
ಎಲ್ಲೋ
ಬಾಪುವಿನ ನಾಡಲ್ಲಿ
ಕೃಶ ದೇಹಗಳಿಂದ
ರಕ್ತ ಒಸರಿದಾಗಲೂ ,
ಮತ್ತೆಲ್ಲೋ
ಅವಳ ತಿಂದುಂಡ
ದೇಹಕ್ಕೆ
ಬಲವಂತದ ಬೆಂಕಿ
ಹಚ್ಚಿದಾಗಲೂ ,
ನಿನ್ನ ಆಳೆತ್ತರದ
ಸದ್ಗ್ರಂಥವ ಹಿಡಿದ
ದಾರಿ ತೋರುತ್ತಿರುವ
ಪ್ರತಿಮೆ
ಧುತ್ತೆಂದು
ಸ್ಮೃತಿಪಟಲದಲ್ಲಿ ಮಿಂಚಿ ಮಾಯವಾಗುತ್ತದೆ.
ನೀ
ಮತ್ತೆ
ಹುಟ್ಟಿ ಬಾ
ಎಂದು ಹೇಳಲಾರೆ.
ನಿನ್ನ ಚಿಂತನೆಗಳು
ನಿನ್ನವರನ್ನ ಮಾತ್ರ ಆವರಿಸಿಲ್ಲ
ಈ ಧರಣಿಯ
ಎಲ್ಲ ಶೋಷಿತರ
ನೋವಿಗೆ ಮುಲಾಮಾಗಿವೆ.
ನವ ಸಮಾಜ
ಸಮ ಸಮಾಜ
ಕಟ್ಟುವ ಕನಸಿಗೆ
ರಂಗು ಹಚ್ಚಿವೆ .
ಇದ್ಯಾಕೆ
‘ಈ’ ಜನ
ಹೀಗೆ
ಎಂದು ಪ್ರತಿ ಬಾರಿ ಕುಸಿದಾಗಲೂ
ಶಕ್ತಿ ಕೊಡುವ ಮಹಾ ಚೇತನವೇ
ನಿನಗೊಂದು ನನ್ನ ಸಲಾಮು.
*************