ಕಾವ್ಯ ಸಂಗಾತಿ
ಲತಾ ಧರಣೇಶ್ ಕಡೂರು
ಗಜಲ್
ನಕ್ಕು ನಗಿಸುವ ನಾಟಕವಾಡಿ
ಮುಗ್ಧ ಪ್ರೇಮವಾ ನೋಯಿಸಿದೆ ಸಾಕಿ/
ನನ್ನ ಮನದ ದರ್ಪಣದಲಿ
ಮೂಡಿದ ಆಲೆಗಳ ಕೆಣಕಿಸಿದೆ ಸಾಕಿ/
ಪ್ರೀತಿಸುಗ್ಗಿಯ ಮನಕೆ ತಂದೆ
ಮತ್ತೆ ಕೋಗಿಲೆ ಕೂಗಿದೆ /
ಬಾಹು ಬಂಧನ ಪ್ರೇಮಕೆ
ಜೀವ-ಭಾವವ ಮೆಚ್ಚಿಸಿದೆ ಸಾಕಿ /
ಜಾತಿಗೀತಿ ಮೀರಿ ಬೆಳೆದ
ಸ್ನೇಹ ಪ್ರೀತಿ ನಮ್ಮದು/
ಮೋಸ ಪ್ರೇಮದ ವ್ಯಸನಕೆ
ಕಂಗಳು ಕಣ್ಣೀರು ಸುರಿಸಿದೆ ಸಾಕಿ/
ಸಾಕಿಸಲಹಿ ರಕ್ಕೆ ಬರಿಸಿದ
ಹೆತ್ತಜೀವಗಳ ತೊರೆದು ಬಂದೆ/
ಬಯಸಿ ಬೆರೆತ ಬೆಸುಗೆಯಲಿ
ಎರಕಹೊಯ್ದ ಮುತ್ತು ಸ್ವರ್ಗ ತರಿಸಿದೆ ಸಾಕಿ/
ಹರೆಯದ ಆಸೆಗೆ ಹಾತೊರೆದು
ಹೆತ್ತವರ ಆಸೆಗೆ ಮಸಿಬಳಿದೆ/
ಮನದ ಖುಷಿಗೆ ಚೇತರಿಕೆ ಇನ್ನೆಲ್ಲಿಯದು?
ಕಳೆದಬದುಕೆ ಸುಖ ಎನ್ನಿಸಿದೆ ಸಾಕಿ/
——————————–
ಲತಾ ಧರಣೇಶ್ ಕಡೂರು