ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚರಿತ್ರೆ ಚಿರನಿದ್ರೆ

brown castle

ದೇವು ಮಾಕೊಂಡ

ಜಗದ ಬಲೆ
ಬಲೆಯೊಳಗಿನ ಮುಸುಕು
ಸಿಕ್ಕಿಸಿಕೊಂಡ ಬದುಕ ಕೊಂಡಿ
ಕಳಚಲು ಯತ್ನಿಸುವ ವೈರಾಗಿ

ರಾತ್ರಿ ಹೆದರುತ್ತದೆ ಹೊರಬರಲು
ಹಗಲ ಬಯಲು ನರ್ತನಕ್ಕೆ
ಅನುಗಮನ ನಿಗಮನದರಿವು
ಏಕಮುಖಗೊಂಡಿದೆ ಗೊಂದಲ ಜಗದಿ

ದಿನ ದಿನ ನಂಬಿಕೆಗಳೆ ಬೋಣಿಗೆ ಮಾಡುವಾಗ
ಬೋದಿಗೆ ಶಾಸನ
ಮೌನ ಮಾತಾಗಿದೆ
ಮಹಾಸತಿ ಕಲ್ಲುಗಳು ಮನಸು ತೇವ ಮಾಡಿ ನಕ್ಕು
ಮತ್ತೆ ಮತ್ತೆ ಶರಣಾಗುತ್ತಿವೆ
ಅಂಧಗೋಪುರಕ್ಕೆದರಿ
ನೀರವರಾತ್ರಿ ದಮನಿತ ದೀಪಗಳುರಿಸುವಾಗ
ವಿಲೋಮಗಾಳಿ ಜನಜನಿತ
ಅವಮಾನಿತ !

ತನ್ನೊಳಗಿನ ತನ್ನದರಿವು ಹುಡುಕುವ
ಆಗುಂತಕನೊಬ್ಬ
ನಿನ್ನೆ ಸತ್ತ ಹೆಣದ ಮುಂದೆ ನಿಂತ ಬೈರಾಗಿ
ಕಣ್ಣೀರು ಹಾಕಲು ಹೇಸುತ್ತಿದ್ದ
ನಾಳೆಯ ನಗಾರಿಗಳ ದನಿ ನಂಬಿ

ಜಡಜಗದ ಬಲೆಗೆ ಬಿದ್ದ ಜೀನಗಂಬ
ಮೂಕಗೊಂಡಿದೆ ಕಾವ್ಯಶಾಸನ ಲ್ಯಾವಿಕಟ್ಟಿ

ಕೆರೆ ಕಟ್ಟಿಸಿ ಬಾವಿ ತೋಡಿಸಿ
ಹಂಸರೆಕ್ಕೆ ಮುರಿದು ಒಳಗೆ ಒಗೆದು
ಮೇಲೊಂದು ಶಾಸನ ಕೆತ್ತಿ ಫಲಕವಿಟ್ಟು
ಅಕ್ಷರಗಳು ನೇತಾಡುತ್ತಿವೆ ತೇವಗೋಡೆಯಲಿ
‘ಸತ್ಯಂ ಶಿವಂ ಸುಂದರಂ’
‘ಅಹಿಂಸಾ ಪರಮೋ ಧರ್ಮಂ’
ಶಾಂತಿ ಅಗೋಚರ
ಚರಿತ್ರೆ ಚಿರನಿದ್ರೆ

**********

About The Author

1 thought on “ಕಾವ್ಯಯಾನ”

  1. ಅದೆಂಥ ಅದ್ಬುತ ಕವಿತೆ ಸರ್.ಒಂದು ಸಾರಿ ಓದಿದರೆ ಸಾಲದು..ಸಾಲು ಪ್ರತಿಸಾಲು ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.ಹೆಣಿಕೆ ಅಮೋಘ ಸರ್.ಅಭಿನಂದನೆಗಳು ಸಂಗಾತಿಗೂ,ನಿಮಗೂ..

Leave a Reply

You cannot copy content of this page

Scroll to Top