ಭಾವ ರಂಗವಲ್ಲಿ
ಶಾಲಿನಿ ಆರ್.
ಬೆರಳೊಳಿಡಿದ ಮರುಳಿಗೆ ಹುಡಿ
ಒಡಮೂಡಿ ಅಂಗಳದಲಿ ನಲವಿಸುತಿದೆ,
ಮನದ ಭಾವವೆಲ್ಲ ಮುದದಿ ಮೂಡಿ
ಅರಳಿ ಮೆಲ್ಲಗೆ ರಂಗವಲ್ಲಿ ಇಲ್ಲಿ,
ಎಳೆದ ಪ್ರತಿ ಗೆರೆ ಗೆರೆಯಲು
ಅವನದೆ ಪ್ರೇಮದಮಲು
ಅಂಕುಡೊಂಕಿನ ವೈಯಾರದಲು
ಗೆರೆ ಬಿಂಕ ತೋರಿ ಅಣಕಿಸಲು
ಅರಳಿತ್ತು ಮೋಡಿಗಾರ ರಂಗವಲ್ಲಿ ಇಲ್ಲಿ,
ಗೆರೆಯಿಂದ ಗೆರೆಯ ಬಳಸಿ
ಒಲವನೆಲ್ಲ ಸುತ್ತಿ ಬಳಸಿ
ಮನವದು ಸೃತಿಸಿ ಶೃತಿಸಿ
ಸ್ಪುರಿಸಿತಾಗ ನಗೆಯ ರಂಗವಲ್ಲಿ ಇಲ್ಲಿ,
ನೀಲನಲಿ ನೀಲವಾಗಿ ತೇಲುತಿದೆ ಮನ
ಪರಿಮಳಿಪ ಗಂಧವಾಗಿ ತೀಡುತಿದೆ ಭಾವ
ಇಟ್ಟ ಪ್ರತಿ ಗೆರೆಗಳು ಸರಸದಿ ಬೆಸೆವ ಪರಿಗೆ
ಲಜ್ಜೆವರಿತು ನಾಚುತಿದೆ ರಂಗವಲ್ಲಿ ಇಲ್ಲಿ,
ಕ್ಷಣದ ಕಣ್ಣ ನೋಟಕೆ ಸರಸರನೆ ಹರಿದು
ಮನದ ಎಲ್ಲ ಭಾವಕೆ ಬಂಧಿಯಾಗಿ
ಬೇಡಿದಷ್ಟು ನಿಂದು ಗಾಢವಾಗಿ ಮೂಡುತಿದೆ
ರಾಗದೊಲವ ರಂಗವಲ್ಲಿ ಇಲ್ಲಿ,
ಆತ್ಮಕೊಲಿದವನ ನೇಹಕೆ
ಬೆರಳ ಸ್ಪರ್ಶ ಮಾಟಕೆ
ಕವನವಾಗಿ ಪದದೊಳಗೆ ಒಂದಾಗಿ
ಮೂಡಿದೆ ಭಾವಲಹರಿ ರಂಗವಲ್ಲಿ ಇಲ್ಲಿ,
ಮನ ಮನಗಳ ದ್ವಂದ್ವಗಳನಳಿಸಿ
ಸುಸಂಬಂಧಗಳ ಉಳಿಸಿ ಮರೆಸಿ
ಬೆಸೆವ ಸಾಂಸ್ಕೃತಿಕ ಪರಿಕಾರದ ಪ್ರತೀಕ
ಶುಭಕೋರುವ ಸಿರಿ ರಂಗವಲ್ಲಿ ಇಲ್ಲಿ…
******