ಕಾವ್ಯ ಸಂಗಾತಿ
ಮಂಜುಳಾ ಜಿ ಎಸ್ ಪ್ರಸಾದ್
ಅಂತರಾಳ
ಎಲ್ಲರ ದೃಷ್ಟಿಯಲಿ ನನ್ನ ಮನಸೊಂದು ವಿಶಾಲ ಸಾಗರ,
ಅದರ ಅಂತರಾಳದಿ ಸಹಸ್ರ ಭಾವನೆಗಳ ಸಂಚಾರ,
ಆದರೂ ಆ ಅಂತರಾಳದ ಬಗ್ಗೆ ನೀ ತಿಳಿದಿಲ್ಲ ಎಲ್ಲ ವಿಚಾರ,
ಅದು ಪ್ಯಾಥೋಮೀಟರಿಗೂ ನಿಲುಕದ ವಿಸ್ಮಯಗಳ ಆಗರ!
ಮನದಾಳ ಹುಡುಕಲು ಸೋತ ನೀ ನನ್ನ ಭೂತಾಯಿಯಾಗಿಸಿದೆ,
ನನ್ನಿಂದ ಹೊಸ ಸೃಷ್ಟಿಗೆ, ಮಾತೃತ್ವಕ್ಕೆ ನಾಂದಿಯೆಂದೆ,
ಆಗಲೂ ನನ್ನ ಅಂತರಾಳದ ಕೋಲಾಹಲ ತಿಳಿಯದೆ ಹೋದೆ,
ಮತ್ತೆ-ಮತ್ತೆ ಸೋಲುತಿರುವೆ ಅರಿಯಲು-ಅಳೆಯಲು ಸಾಧನವಿಲ್ಲದೆ,
ಕಡಲ ಅಂತರಾಳವಾದರೂ ನಿಲುಕಬಹುದೇನೋ ನಿನ್ನ ಶೋಧನೆಗೆ,
ಭುವಿಯ ಅಂತರಾಳವಾದರೂ ಗ್ರಹಿಸಬಹುದೇನೋ ನಿನ್ನ ಊಹೆಗೆ,
ಆದರೆ ನಿಜದಿ ನಾ ಹೆಣ್ಣು! ನನ್ನ ಅಂತರಾಳ ಎಟುಕಬಹುದೇ ನಿನ್ನ ಕಲ್ಪನೆಗೆ,
ಚಂಚಲದ ಅತಿರೇಕದ ಭಾವನೆಗಳ ಆಳ:ನನ್ನಂತರಾಳ ಹಿಡಿತಕ್ಕೆ ಸಿಗಬಹುದೇ ನಿನಗೆ??
ಮಂಜುಳಾ ಜಿ ಎಸ್ ಪ್ರಸಾದ್