ಕಾವ್ಯ ಸಂಗಾತಿ
ಡಾ.ಶಿವಕುಮಾರ ಮಾಲಿಪಾಟೀಲ
ನಾನು ನಂದಿ,ನನ್ನವಳು ಪುಣ್ಯಕೋಟಿ
ಕುರಿ ,ಮೇಕೆ,ಎಮ್ಮೆ, ಕೋಣಗಳಿಗಿಂತ
ಅತಿ ಹೆಚ್ಚು ಬಾರಕೋಲ ಏಟು ತಿನ್ನತಾ
ರಂಟೆ ,ಕುಂಟೆ ,ಬಿತ್ತಿ ಬೆಳೆಯಲು
ರೈತನ ಜೊತೆಯಲಿ ದುಡಿದೆನು
ಬೆಳೆದ ಬೆಳೆ ,ದವಸ ಧಾನ್ಯಗಳ
ಮೊಟೆಗಳನು ಹೊತ್ತು ಬಂಡಿಯ ಬಾರವನ್ನು ಎಳೆದೆನು..
ಹೆಣ್ಣು ,ಗಂಡು ಬೇಧವ ಮಾಡದೆ ಎಲ್ಲರನ್ನೂ ಬಂಡಿಯಲ್ಲಿ
ಪುಕ್ಕಟೆ ಕೂಡಿಸಿಕೊಂಡು
ಊರಿಂದೂರಿಗೆ ಮುಟ್ಟಿಸಿದೆನು
ಮಾಲಿಕನ ಸಂಭ್ರಮದಲಿ
ಹಬ್ಬ ಹರಿದಿನಗಳಲ್ಲಿ ಬಣ್ಣ ಹಚ್ಚಿಕೊಂಡು ಕುಣಿದೆನು,
ಕಾರ ಹುಣ್ಣುಮೆಯಲಿ ಓಡಿ ಓಡಿ ಹೋಗಿ ಕರಿ ಹರಿದೆನು
ನಮ್ಮೂರ ಜಾತ್ರೆಗಳಲ್ಲಿ ಮೆರೆದೆನು
ಬರಗಾಲದಲ್ಲಿ ರೈತನ ಸಪ್ಪೆ ಮುಖ ನೋಡಿ , ತಿನ್ನಲು ಮೇವು ಇರದೆ ಉಪವಾಸ ಕಳೆದೆನು.
ಅನ್ನದಾತನ ಕಷ್ಟ ಸುಖಕೆ
ಹೆಗಲಿಗೆ ಹೆಗಲು ಕೊಟ್ಟು ನಡೆದೆನು
ಊರ ಗೌಡ ಆದರೂ ನಮ್ಮ ಸೆಗಣಿ ಸಾರಿಸಿದ ಮನೆಯಲ್ಲಿ ಮಲಗಿದನು
ನಮ್ಮನ್ನು ತನ್ನ ಮಕ್ಕಳಂತೆ ಸಾಕಿ ಸಲುಹಿದನು..
ನನ್ನ ಜೋಡಿ ಎತ್ತು ಶಂಕ್ರ್ಯಾ ಸತ್ತಾಗ ನನ್ನ ಜೊತೆಗೆ ಗಳಗಳ ಅತ್ತನು
ಅವನ ನೆನಪಿಗಾಗಿ ಸ್ಮಾರಕ ಕಟ್ಟಿಸಿದನು
ನನ್ನವಳಿಗೆ ಗೋವು , ಪುಣ್ಯಕೋಟಿ
ಎಂದು ಗೃಹ ಪ್ರವೇಶ ,ಕಲ್ಯಾಣ ಕಾರ್ಯಗಳಿಗೆ ಕರೆದು ಸತ್ಕರಿಸಿದನು
ಹಾಲು ,ಮೊಸರು ,ತುಪ್ಪದ ಪಂಚಾಮೃತ ಮಾಡಿ ದೇವರಿಗೆ ಎಡೆ ಹಿಡಿದರು..
ಅವಳ ಹಾಲು , ಕರುಗಳು
ಕುಡಿಯದೆ ಮಾಲಿಕನ ಮಕ್ಕಳೆ ಕುಡಿದರು..
ರೊಟ್ಟಿ ಬೆಣ್ಣೆ , ಹೋಳಿಗೆ ತುಪ್ಪ
ರುಚಿಯನು ಸವಿದರು
ಒಂದು ದಿನ ನನ್ನ ಕುಂಟ ಕರುವನ್ನು
ಸಾಕದೆ ಮಾಲಿಕ ಕಟುಕನ ಕೈಗೆ ಕೊಟ್ಟನು
ಅದನು ತಿಳಿದ ಮಾಲಿಕನ ಮಕ್ಕಳು
ರಾತ್ರಿ ಎಲ್ಲಾ ಅತ್ತರು
ಮರುದಿನ
ಮಾಲಿಕ , ಕಟುಕನ ಮನೆ ಹುಡುಕಿ
ಕುಂಟ ಕರುವನು ತಂದು ಮಕ್ಕಳಿಗೆ
ಕೊಟ್ಟು ತಾನು ಖುಷಿ ಪಟ್ಟನು
ಈಗ ಅವರು ಓದಿ ವಿದ್ಯಾವಂತರಾದರು…
ಸಮಾಜದಲಿ
ದೊಡ್ಡ ಮನುಷ್ಯರಾದರು
ಶ್ರೀಮಂತರಾದರು…
ರೊಕ್ಕ ಕೊಟ್ಟು ನಾಯಿ
ತಂದು ಮನೆಯೊಳಗೆ ಸಾಕಿದರು
ಹಾಲು ಕೊಡದ ಸಾಕುನಾಯಿಯನ್ನು ನನ್ನ ಮುಂದೆ ಮುದ್ದಿಸಿದರು
ಚಿಂತಕರು
ಋಗ್ವೇದದಲ್ಲಿ ಅವರು ತಿಂದರು
ಕಲಿಯುಗದಲ್ಲಿ ನಾವು ತಿನ್ನುತ್ತೆವೆಂದು ವಾದ ಮಾಡಿದರು.
ನಮ್ಮ ಋಣವನು ಮರೆತು
ಎಮ್ಮೆ , ಕತೆಯಂತೆ ಅದು ಒಂದು ಪ್ರಾಣಿ ಅಷ್ಟೇ ಎಂದು ಹೇಳಿ
ನೋವು ತರಿಸಿದರು
ಪೂರ್ವಜರು ನಮ್ಮ ಹೊಟ್ಟೆಯಲ್ಲಿ
ಅರ್ಧ ಸೇರು ಬಂಗಾರವಿದೆ ಎಂದು
ಸಾಕಿದರು
ಇಂದಿನ ಜನರು
ನಮ್ಮಿಂದ ಲಾಭಯಿಲ್ಲವೆಂದು
ಬೀದಿಗೆ ಬಿಟ್ಟರು..
ಕಸಾಯಿ ಖಾನೆಗೆ ಅಟ್ಟಿದರು
ಅಂದು ಹಾಲು ,ಮೊಸರು,ಗಿಣ್ಣ, ತುಪ್ಪ ತಿಂದ ಕೆಲವರು ಇಂದು
ನನ್ನ ಮಾಂಸವನ್ನು ಚಪ್ಪರಿಸಲು ತಯಾರಾದರು…
ಅವರು , ಇವರು ಸೇರಿ
ಮಾಂಸವನ್ನು ವಿದೇಶಗಳಿಗೆ ರಫ್ತು
ಮಾಡಿದರು.
ನಮ್ಮನ್ನು ಕಲ್ಲಿನಲ್ಲಿ ಕೆತ್ತಿ
ನಂದಿ ಎಂದು ಶತ ಶತಮಾನದಿಂದ ಪೂಜಿಸಿ ಮರ್ಯಾದೆ ಕೊಟ್ಟರು..
ಇಂದು ಸಹ ಹೊಸ ಸಂಸತ್ತಿನಲ್ಲಿ
ಸೆಂಗೋಲ್ ಆಗಿ ಗೌರವ ನೀಡಿದರೂ…
ಹಲವು ಕಾನೂನು ತಂದರೂ
ನಾವು ಇನ್ನೂ ಅತಂತ್ರರು
ನಮ್ಮ ಸಲುವಾಗಿ ರಾಜಕೀಯ ಮಾಡುವುದು ಬೇಡ…
ನಮ್ಮ ಸಲುವಾಗಿ ನೀವು ಹೊಡೆದಾಡಿ ಸಾಯುವುದು ಬೇಡ
ನಾನು ನಂದಿ , ನನ್ನವಳು ಪುಣ್ಯಕೋಟಿ
ಕರೆದರೆ ನಿಮ್ಮ ಮನೆಗೆ ಬರುವೆವು
ಹಾಲು ಬೇಕು ,ಮಾಂಸ ಬೇಕು?
ಆಯ್ಕೆ ನಿಮ್ಮದು…
ನಾನು ಮೂಕ ಬಸವಣ್ಣಾ , ನನ್ನವಳು ಕಾಮದೇನು
ಕೊಲ್ಲುವ ಧರ್ಮಗಳ ಮುಂದೆ
ಕಾಯುವ ದೇವರೆ ನಮಗೆ
ಕೈ ಕೊಟ್ಟಿದ್ದಾನೆ…
ಅವನಿಗೆ ನಿಮ್ಮನ್ನು ಕ್ಷಮಿಸಿ ಎಂದು
ಹೇಳಿ…
ಕೊಂದು ತಿಂದವರಿಗೂ ಸ್ವರ್ಗ ಕರುಣಿಸು ಎಂದು ಕೇಳಿ ….
ನಾವು ಕಣ್ಣು ಮುಚ್ಚುತ್ತಿದ್ದೇವೆ.
ಡಾ.ಶಿವಕುಮಾರ ಮಾಲಿಪಾಟೀಲ