ಸುಜಾತಾ ರವೀಶ್-ಹೀಗೊಂದು ಯೋಚನೆ

ಕಾವ್ಯ ಸಂಗಾತಿ

ಸುಜಾತಾ ರವೀಶ್

ಹೀಗೊಂದು ಯೋಚನೆ

ಆಸೆಗಳ ಹೂತು ಹಾಕಿದಾಗಲೆಲ್ಲ
ಬೀಜವಾಗಿ ಅಂಕುರಿಸಿದೆ
ಭಾವಗಳ ಗಾಳಿಗೆ ಎಸೆದಾಗಲೆಲ್ಲ
ಹಕ್ಕಿಯಂತೆ ಹಾರಾಡುತಲಿದ್ದೆ
ಹೃದಯವನು ದಹಿಸಿಬಿಟ್ಟಾಗಲೆಲ್ಲ ಬೂದಿಯಲ್ಲಿ ವಿಭೂತಿ ಮಾಡಿದೆ ಪ್ರಯತ್ನಗಳು ನೀರುಪಾಲಾದಾಗ
ಮತ್ತೆ ಈಜಿ ತಂದು ದಡ ಸೇರಿಸಿದೆ

ಹೇಳಿ ಇನ್ನೇನು ಮಾಡಬೇಕಿತ್ತು?
ಬಾಳಿನಲಿ ಆಶಾವಾದ ಬೇಕಲ್ಲವೇ?
ಭರವಸೆ ನಿರೀಕ್ಷೆಗಳು ಇರಬೇಡವೇ?
ನಾನೂ ಇನ್ನೂ ಜೀವಿಸಬೇಡವೇ?

ಅಂದುಕೊಂಡಿರುವೆ ಇನ್ನು ಮುಂದಾದರೂ

ತೇಯಿಸಿಕೊಳ್ಳುತ್ತಾ ಇಲ್ಲವಾಗುವ
ಗಂಧದ ಕೊರಡು ನಾನಾಗಿರಲಾರೆ ಉರಿಯುತ ಕರಗುವ ಮೊಂಬತ್ತಿಯಾಗಲಾರೆ
ತುಳಿದ ಪಾದವ ಹಿಸುಕಿದ ಕರಗಳ ಮೌನವಾಗಿ ಪರಿಮಳಿಸುವ ಸುಮವಾಗಲಾರೆ

ಜಲಿಸುವ ಜ್ವಾಲೆಯಾಗುವುದಿಲ್ಲ
ದಮನಿಸುವ ಶಕ್ತಿಯಾಗುವುದಿಲ್ಲ
ನಾನು ನಾನಾಗಿರಲದಷ್ಟೇ ಬಿಟ್ಟರೆ ಸಾಕು!


ಸುಜಾತಾ ರವೀಶ್


Leave a Reply

Back To Top