ನಾನು ಓದಿದ ಪುಸ್ತಕ

ವಿರಹಿ ದಂಡೆ

ಬಾನಿಗೂ ಭೂವಿಗೂ ಸಾಕ್ಷಿಯಾಗಲಿ ಕಡಲಂಚಿನಾ ವಿರಹಿ ದಂಡೆ….

 ಯುಗಯುಗಗಳು ಜಾರಿದರೂಪ್ರೀತಿಯಭಾಷೆಯೆಂದಿಗೂ ಬದಲಾಗದಿರುವುದು‌ ಸರ್ವಕಾಲಿಕ ಸತ್ಯ.

ಹಠಾತ್ ಸುರಿದ ಮಳೆಗೆ ದಂಡೆ ನಾಚಿದೆಎಂಬ ಕವಿ ನುಡಿಯಂತೆ                                            ಕಣ್ಣಂಚಿನಕುಡಿನೋಟಅರಿಯುವುದುಎದೆಯುಸಿರಬಡಿತಗಳು…..ಕಂಗಳಿಗೂ ಭಾರವಾದ ಮನ ಹೃದಯದಲ್ಲಿ ಮಿಡಿಯುವುದು..ಎಂಬಂತೆ.. ಬಹುತೇಕ ಮನಸುಗಳು ಮೀನಿನಂತೆ..! ಕಡಲಾಚೆ ದಂಡೆಯಲಿ ವಿಲವಿಲ ಒದ್ದಾಡಿ,ವಿರಹದಲಿ ಬೆಂದಂತೆ..!.. ಆತ್ಮೀಯ ಸಹೃದಯಿ ,ಇದ್ದುದನ್ನು ಇದ್ದ ಹಾಗೆ ವರದಿ ನೀಡಿ ಮನವನ್ನು ಹಗುರಮಾಡಿಕೊಳ್ಳುವ,ಅನ್ಯಾಯದ ವಿರುದ್ಧ ಒಂಟಿಯಾಗಿಯಾದರೂ ಹೋರಾಟಮಾಡುವ,ಮೃದುಸ್ವಭಾವದಮನೋಭಾವಹೊಂದಿರುವಕವಿಮಿತ್ರ,ಪತ್ರಕರ್ತ   ಶ್ರೀ ನಾಗರಾಜಹರಪನಹಳ್ಳಿಯವರ ಮುದ್ದಾದಕವನ ಸಂಕಲನ *ವಿರಹಿ ದಂಡೆ** ಕೈಸೇರಿದಾಗ ಕುತುಹಲ…

ಎಲೆಗಳು ಉದುರುವ ಸಮಯ

ಚಳಿಯ ದಾಟಿ

ಬಿಸಿಲಿಗೆ ಮೈ ಒಡ್ಡುವ ಕಾಲ…ದಲೊಂದು ಹೊಸ ಚೈತನ್ಯ..!!

ಪ್ರೇಮವೆಂದರೆ ಕಾಮವೆಂದು ಪೂರ್ಣವಿರಾಮವಿಟ್ಟರೆ ಮುಗಿಯಿತೇ?? ಪ್ರೇಮವೆಂದರೆ ಗಹಗಹಿಸಿ ಮುಸುಕುಹಾಕಿ ಕತ್ತಲೆಯಲಿ ನರಳಾಡಲು ಪ್ರೀತಿಯ ಪಟ್ಟ ಬೇಕೆ..??? ಅಲ್ಪನ ಮನಸು ಕೊಚ್ಚೆಯಲ್ಲಿ…! ವಿಕೃತನಾಗಿ ಅಲೆದಾಡುವ ಕಾಮುಕನಂತೆ..!! ಇವೆಲ್ಲ ಪ್ರೀತಿ, ಪ್ರೇಮದ ಕೊನೆಯ ಪುಟಗಳಾಗಿ ವಿರಮಿಸಿದರೆ ಸಾಕೆ??? ಎಂಬ ಪ್ರಶ್ನೆಗೆ??..

ವಿರಹದ ಹಗಲ ಸುಡಬೇಕಿದೆ

ತಣ್ಣಗೆ ದಂಡೆಯಲಿ ಕುಳಿತು

ಅಲ್ಲಿ ಪ್ರೇಮದ ಗಿಡ ನೆಡುತ್ತೇನೆ

ನೀ ನೀರು ಹಾಕುವುದಷ್ಟೆ ಬಾಕಿ……

 ಅಧ್ಬುತಚಿಂತನೆ…ಪ್ರೀತಿಗೊಂದು ಹೊಸ ಭಾಷೆ..

 ಕವಿಯ ಮನಸ್ಸು ಕೇವಲ ಪ್ರೇಮವಷ್ಟೆ ಅಲ್ಲ,ಆ‌ ಪ್ರೀತಿಗೆ ಪರಿಸರವು ಪೂರಕವೆಂಬಂತೆ ಭಾವಿಸಿ ಸದಾ ಪಕೃತಿಯ ಜೀವಾಳವಾಗಿ ತನ್ನಂತರಂಗದ ಸಂಗಾತಿಯನ್ನು ಪ್ರತಿಕ್ಷಣದಲ್ಲೂ ಹೃದಯದಲ್ಲಿಟ್ಟುಕೊಳ್ಳಬೇಕೆನ್ನುವ ತವಕ.

ಕವಿ ನಿಜವಾಗೂ ಬದುಕನ್ನು ಬಹುವಾಗಿ ಪ್ರೀತಿಸುವ ವ್ಯಕ್ತಿ…..  ಕಡಲು ನೀರಾಳ..! ಅದಕ್ಕೆಂದು ಭಯವಿಲ್ಲ..!ಕರಗುವೆನೆಂಬ ಆತಂಕವಿಲ್ಲ..! ಜಗದ ಪ್ರಳಯಕ್ಕೂ,ಜಗದ ಉಳಿವಿಗೂ ಸಾಮರಸ್ಯದ ಕೊಂಡಿ…!   ಕವಿಯ ತುಡಿತ.

ಸಮುದ್ರ ನಿದ್ದೆ ಹೋಗಿದೆ ಗೆಳತಿ

ವಿರಹಿ ದಂಡೆಗೆ ಮೌನ

ಆಕಾಶಬಾಗಿ ಮುನಿಸಿ ಕುಳಿತಿದೆ

ಗಾಳಿ ಮಿಸುಗದೇ ನಿಂತಿದೆ

ನದಿಗೆ ಈಗ ಧ್ಯಾನದ ಸಮಯ

ಮಾತು ಮೂಕವಾಗಿ ಸೋತು ಕುಳಿತಿದೆ

ಭುಜಕೆಭುಜ ಬೆಸೆದ ಹೊತ್ತು…

ಮಂಚದ ತುಂಬಾ ಎಕಾಂಗಿ ಕನವರಿಕೆಗಳು…! .. ಕಾಯುವ ಸಂಯಮ ವಿರಹಿಗೆ ಅನಿವಾರ್ಯ…!ಪ್ರೀತಿಯ ತುಮುಲಗಳು,ಕನವರಿಕೆಗಳು ,ಕನಸುಗಳು,ಎಲ್ಲವೂ ಪ್ರೇಮಮಯವೇ…ಎಲೆಯದುರಿದ ಮರವೂ..ಪ್ರೇಮ ನಶೆಗೆ ಬಯಲಾದಂತೆ.ಕಂಗಳ ಕಾತರಿಕೆ ಉದರಾಗ್ನಿಗೆ ತುಪ್ಪ ಸುರಿದಂತೆ..! ಪ್ರಾಣಿ,ಪಕ್ಷಿ,ಗಿಡ ಬಳ್ಳಿ, ಚರಾಚರಗಳೆಲ್ಲ ಪ್ರೇಮಿಯ ಆಣತಿಯಂತೆ ನವಿಲು‌ನರ್ತಿಸಿದಂತೆ…!

ಬಾನು ಭೂಮಿ ಅದೆಷ್ಟು

ದೀರ್ಘವಾಗಿ ಚುಂಬಿಸುತ್ತೆ

ನಾಚಿಕೆಯೇ ಇಲ್ಲ,ಅದು ಬಟ್ಟಬಯಲಿನಲಿ

ನಟ್ಟ ನಡು ರಸ್ತೆಯಲಿ

ನವ ವಧುವರರಂತೆ…! 

ಪ್ರಕೃತಿಗೆ ಮಳೆಯಲ್ಲಿಯೇ ಮಿಲನೋತ್ಸವ..ಬಾನು ಭುವಿ ಒಂದಾದರೆ ಮಾತ್ರ ನಮ್ಮ ಒಡಲು ತುಂಬುವುದು…ಹಸಿರು ಉಸಿರಾಗಲೂ ಸಮಯ ಬೇಕು.  ಹಿಂದಿನಂತೆ ಮಳೆಗಾಲವಿಲ್ಲ..ಬರಗಾಲದ ಛಾಯೇ..! ಧರೆತಣಿಯಲು,ಪ್ರವಾಹ ಉಕ್ಕಿಹರಿದರೂ ಭೂಮಿಯ

 ವಿರಹದ ತಾಪ ಕಡಿಮೆಯಾಗಿಲ್ಲ…ಕಾರಣ               

ಕಾದ ಕಾವಲಿಯಂತಿದ್ದ

ವಿರಹದ ಬೇಸಿಗೆ  ಮಳೆ ಮೋಡ ಬಿಗಿದಪ್ಪಿದರೂ  ಕರಗದಾ ಮೋಹ….!

ಹರೆಯದ ಬಯಕೆಗಳು ನೂರಾರು..ಕವಿಗೆ ಆಗಾಗ ಬುದ್ದನ ನೆನಪಾದಂತಿದೆ..

ನೀ ನಿದ್ರಿಸಿ ನನ್ನ ಕನಸು ಕಾಣುವಾಗ

ಕಾರಣ ಹೇಳದೇ ಹೋಗಲಾರೆ

ಮೋಕ್ಷ ಬೆನ್ನು ಹತ್ತಲಾರೆ

ಬುಧ್ದನಾಗಲಾರೆ

ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ..!!

ಇದ್ದು ಜಯಿಸಬೇಕು ಎಂಬ ಧೀಮಂತ ಮನಸ್ಸಿನವರು, ಕವಿ ಪಕ್ಕಾ ನಂಬಿಗಸ್ಥ.  ಪ್ರೇಮಿ…! ಪ್ರೀತಿಗೆ ಬೆನ್ನುತೋರಿಸದೆ ಹೃದಯದಲ್ಲಿಟ್ಟು ಪೊರೆದವ.

ಕವಿಗೆ ತನ್ನವರನ್ನು ಬಿಟ್ಟಿರುವಾಗೆಲ್ಲ..ಕಡಲ ದಂಡೆ ವಿರಹವನ್ನು ತಣಿಸುವ ತಾಣವಾಗಿದೆ…. ವಿಶಾಲ ಕಡಲನ್ನು ಸೇರುವ ನದಿಗಳು ಗುಡ್ಡಗಳನ್ನು ,ಕಾಡುಗಳನ್ನು, ಇಳಿಜಾರುಗಳನ್ನು  ಲೆಕ್ಕಿಸದೇ ಹಾತೊರೆವ ಜಾತಕ ಪಕ್ಷಿಯಂತೆ ಎಡರು ತೊಡರುಗಳ ದಾಟಿ ನಿರ್ಭಯವಾಗಿ ಸಾಗರವ ಮುತ್ತಿಡಲು ಹವಣಿಸುವಂತೆ….ತನ್ನ ಕೊನೆಯ ಪಯಣ ನಿನ್ನಲ್ಲೆಯೆನ್ನುವಂತೆ ಧಾವಿಸುವ ಧಾವಂತಕೆ ಕವಿ ಪ್ರೀತಿಯ ಹಸಿರು ನಿಶಾನೆ ತೋರಿಸಿದ್ದಂತೂ ಸತ್ಯ…!

ಒಟ್ಟಾರೆ ಕವಿ ಶ್ರೀ ನಾಗರಾಜ ಹರಪನಹಳ್ಳಿಯವರ ಸುಕೋಮಲ ಪ್ರೇಮ ಗೀತೆಗಳು ವಿರಹದ ನೋವನ್ನು ಅನುಭವಿಸುತ್ತಾ ವಿರಹದ ನೂರುಭಾವಗಳು ತಾವು ಕಂಡಂತೆ ಬಿತ್ತರಿಸುತ್ತಾ ಸಾಗುವಾಗ ಪ್ರೇಮ ಕವಿ ನಿಸಾರ ಅಹಮ್ಮದ ನೆನಪಾಗದಿರಲಿಲ್ಲ ನನಗೆ… ಉತ್ತಮ ಹನಿಗವನಗಳು ಅಲ್ಲಿ ಬಟ್ಟಲು ಹೂವಿನಂತೆ ಅರಳಿ ನಕ್ಕಿದ್ದಂತೂ ನಿಜ..!ಕವಿಯ ಮನಸು ಪಕ್ಕಾ ಮಾಗಿದೆ.

ಒಲವಾಗಲು

ಹೆಚ್ಚೇನು ಬೇಕಿಲ್ಲ

ಸೊಗಸಾದ ಒಂದು ಪ್ರೇಮದ

ಹಾಡು ಸಾಕು….!!!

ಶ್ರೀ ನಾಗರಾಜರವರ *ವಿರಹಿದಂಡೆ *ಅರಿತವನಿಗೆ  ಖಂಡಿತ ನಿಸರ್ಗದ ಅಧ್ಬುತ ಪ್ರೇಮದ ಕೊಡುಗೆಯ ದರ್ಶನವಾಗುವುದಂತೂ ದಿಟ..!ಅವರವರ ಭಾವಕ್ಕೆ..ನನ್ನರಿವಿಗೆ ತೋಚಿದ್ದು…ಇನ್ನೂ ಹೆಚ್ಚೆಚ್ಚು ಪ್ರೇಮ ಗೀತೆಗಳು ದುಂಬಿಯಂತೆ ಝೆಂಕರಿಸಲೆಂದು ಶುಭಹಾರೈಸುವೆ….

*****************

ಶಿವಲೀಲಾ ಹುಣಸಗಿ

Leave a Reply

Back To Top