ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜುಲ್ ಕಾಫಿ಼ಯಾ ಗಜ಼ಲ್

Woman Lying on Flowers

ಎ.ಹೇಮಗಂಗಾ

ನೀ ಒಪ್ಪಿಗೆಯ ನಗೆ ಬೀರುವವರೆಗೂ ಮನದ ಕಳವಳಕೆ ಕೊನೆಯಿಲ್ಲ
ನೀ ಅಪ್ಪುಗೆಯ ಬಿಸಿ ನೀಡುವವರೆಗೂ ಹೃದಯದ ತಳಮಳಕೆ ಕೊನೆಯಿಲ್ಲ

ಹೊತ್ತಲ್ಲದ ಹೊತ್ತಿನಲ್ಲಿ ಮಳೆ ಸುರಿದು ಇಂದ್ರಚಾಪ ಮೂಡಿತೇಕೆ ?
ನೀ ಬರಡು ಬಾಳಿಗೆ ಹಸಿರಾಗುವವರೆಗೂ ಅಂತರಂಗದ ಹೊಯ್ದಾಟಕೆ ಕೊನೆಯಿಲ್ಲ

ಗೋರಿ ಸೇರಿದ ಕನಸುಗಳು ಬಿಡದೇ ಬೇತಾಳನಂತೆ ಹೆಗಲೇರಿವೆ
ನೀ ಹೊಸ ಬಯಕೆಗಳ ಬಿತ್ತುವವರೆಗೂ ಅಂತರಾಳದ ನರಳಾಟಕೆ ಕೊನೆಯಿಲ್ಲ

ಅಗಲಿಕೆಯ ನೋವೇ ದಾವಾನಲವಾಗಿ ಉಸಿರು ಬಿಸುಸುಯ್ಯುತಿದೆ
ನೀ ಸಿಹಿಚುಂಬನದಿ ಕಸುವು ತುಂಬುವವರೆಗೂ ಜೀವದ ತಲ್ಲಣಕೆ ಕೊನೆಯಿಲ್ಲ

ಪ್ರೀತಿತೊರೆಯ ಬತ್ತಿಸದೇ ಕಾಪಿಡುವೆಯೆಂಬ ಭರವಸೆ ಈಗೆಲ್ಲಿ ?
ನೀ ಮೊಗೆಮೊಗೆದು ಉಣಿಸುವವರೆಗೂ ತೀರದ ದಾಹಕೆ ಕೊನೆಯಿಲ್ಲ

ನಂಜಾದ ನೆನಪುಗಳು ಮಸಣದ ಹಾದಿಯತ್ತ ಕೊಂಡೊಯ್ಯುತಿವೆ
ನೀ ನನ್ನವನಾಗುವವರೆಗೂ ಆಂತರ್ಯದ ತುಡಿತಕೆ ಕೊನೆಯಿಲ್ಲ

*******

About The Author

Leave a Reply

You cannot copy content of this page

Scroll to Top