ಹಸಿವು ಮತ್ತು ಬಾಯಾರಿಕೆ

ಮೂಲ: ಖಲೀಲ್ ಗಿಬ್ರಾನ್
ಕನ್ನಡಕ್ಕೆ:ಡಾ.ಬೆಳ್ಳೂರು ವೆಂಕಟಪ್ಪ

ಧರ್ಮಛತ್ರದ ಕಾವಲುಗಾರನಾಗಿದ್ದ ವೃದ್ದನೊಬ್ಬ ಕೇಳಿದ:
ಹಸಿವು ಮತ್ತು ಬಾಯಾರಿಕೆ ಬಗ್ಗೆ ತಿಳಿಸಿ:
ಪ್ರವಾದಿ ನಗುತ್ತಾ ಹೀಗೆ ಹೇಳಿದ:
ಬೆಳಕನ್ನು ಹೀರಿ ಬೆಳೆವ ಮರಗಿಡಗಳ ರೀತಿ
ತಂಗಾಳಿಯ ಜತೆ
ಸುಗಂಧ ಬಿರಿವ ಭೂಮಿಯ ಮೇಲೆ
ನಿಮಗೆ ಬದುಕುವುದಕ್ಕೆ ಸಾಧ್ಯವೇ?
ಆದರೆ
ಕೊಂದು ತಿನ್ನುತ್ತೀರಿ
ಪ್ರಾಣಿಗಳ ಹಾಲನ್ನು ಕದ್ದು ಕುಡಿಯುತ್ತೀರಿ
ಹಸಿವು ಮತ್ತು ಬಾಯಾರಿಕೆ
ನೀಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿರುವ
ಈ ಪ್ರಕೃತಿ ನಿಯಮ ಪೂಜನೀಯವಾಗಿದೆ
ನಿಮ್ಮ ವಾಸದ ಮನೆಗಳನ್ನು ಕಟ್ಟಲು
ಆ ಮುಗ್ಧ ಕಾಡಿನ ಮರಗಳನ್ನು ಬಲಿ ಕೊಡುತ್ತೀರಿ
ಇನ್ನೂ ಮುಗ್ಧತೆಯ ಪ್ರತಿಕವಾಗಿರುವ ನಿಮಗೆ
ಪರಿಶುದ್ಧ ಗುಣದ ಕಾಡು ಎಲ್ಲವನ್ನೂ ತ್ಯಾಗ ಮಾಡಿದೆ.
ಆಡು ಕುರಿ ಕೋಳಿ ಇತರೆ
ಯಾವುದಾದರೂ ಜೀವಿಗಳನ್ನು ಕೊಲ್ಲುವಾಗ
ನೀವು ನಿಮ್ಮ ಹೃದಯಕ್ಕೆ ಹೀಗೆ ಹೇಳಿ
“ಯಾವ ನಿಯಮ ನಿಮ್ಮನ್ನು ಕೊಲ್ಲುವಂತೆ ಮಾಡಿದೆಯೊ
ಅದೇ ನಿಯಮ ನನ್ನನ್ನೂ ಕೊಂದು
ನನ್ನ ದೇಹದ ಮಾಂಸವನ್ನು ಬೇರೆ ಜೀವಿಗಳು ಸೇವಿಸುತ್ತವೆ”
“ಕೊಂದು ತಿನ್ನಲು ಯಾವ ಪ್ರಕೃತಿ
ನಿಮ್ಮನ್ನು ನನ್ನ ಕೈಲಿರಿಸಿದೆಯೊ
ಅದೇ ಪ್ರಕೃತಿ ನನ್ನನ್ನು ಇನ್ನೊಂದು
ಕಾಣದ ಕೈಯಲ್ಲಿ ಇರಿಸಿದೆ”
“ನನ್ನ ರಕ್ತ ಮತ್ರು ನಿಮ್ಮ ರಕ್ತ ಬೇರೇನೂ ಅಲ್ಲ
ಸ್ವರ್ಗದ ಮರಗಳ ಬೇರುಗಳಿಗೆ ಜೀವರಸ ಮಾತ್ರ”
ಹಾಗೆಯೇ
ಸೀಬೆಯ ಹಣ್ಣನ್ನು ಕಚ್ಚಿ ತಿನ್ನುವಾಗ ನಿಮ್ಮ ಹೃದಯಕ್ಕೆ ಕೇಳಿಸುವಂತೆ ಹೀಗೆ ಹೇಳಿ:
“ನಿಮ್ಮ ಬೀಜಗಳು ನನ್ನ ಹೊಟ್ಟೆಯಲ್ಲಿ ಸೇರಿದ್ದು
ಅವು ಮುಂದೆ ನಳನಳಿಸುವ ಹೂವಾಗಿ
ನನ್ನ ಹೃದಯದಲ್ಲಿ ಅರಳುತ್ತವೆ “
“ನಿನ್ನ ಸುಗಂಧ ನನ್ನ ಉಸಿರಾಗಲಿ
ಎಲ್ಲ ಋತುಗಳಲ್ಲಿ ಕೂಡಿ ಬಾಳೋಣ”
ಅದೇ ತರ
ಶರತ್ಕಾಲದ ದ್ರಾಕ್ಷಿತೋಟದಿಂದ ಕಿತ್ತು ತಂದ
ಹಣ್ಣುಗಳನ್ನು ತುಳಿದು ವೈನ್ ತಯಾರಿಸುವಾಗ ಕೂಗಿ ಹೇಳಿ ನಿಮ್ಮ ಹೃದಯಕ್ಕೆ:
“ನಾನೂ ಕೂಡ ಒಂದು ದ್ರಾಕ್ಷಿತೋಟ
ನನ್ನ ಎಲ್ಲ ರಕ್ತ ಮಾಂಸ
ದ್ರಾಕ್ಷಿ ಹಣ್ಣುಗಳ ರೀತಿ ತುಳಿಯಲ್ಪಟ್ಟು ದ್ರಾಕ್ಷಾರಸವಾಗುತ್ತವೆ”
“ನಾನು ಹೊಸ ವೈನ್ ಅಗಿ
ಅನಂತ ಕಾಲದ ಪಾತ್ರೆಗಳಲ್ಲಿ ಬಂಧಿಯಾಗುತ್ತೇನೆ”
“ಚಳಿಗಾಲಕ್ಕೆ ನೀವು ಕುಡಿವ
ಆ ವೈನಿನ ಪ್ರತಿ ಕಪ್ಪಿನಲ್ಲೂ ಸೇರಿ
ನಿಮ್ಮ ಹೃದಯದ ಹಾಡಾಗುತ್ತೇನೆ”
“ಆ ಹಾಡಿನಲ್ಲಿ
ಶರತ್ಕಾಲದ ದ್ರಾಕ್ಷಿ ತೋಟ ಮತ್ತು ವೈನ್
ಮತ್ತೆ ನೆನೆಪಾಗಲಿ”
***********