ಅವಳು
ನಾಗರೇಖಾ ಗಾಂವಕರ
ಅವಳು -1
ಬಿಂಬಕ್ಕೆ ಸರಿಯಾಗಿ ಪ್ರತಿಬಿಂಬ
ಮೂಡಿಸುವ ಕನ್ನಡಿಯ
ನಾಜೂಕಿನಿಂದಲೇ ಕಾಯ್ದಿರಿಸಿದ್ದಾಳೆ ಅವಳು
ಕನ್ನಡಿ ಹೇಳುತ್ತಲೇ ಇರುವ
ಬಿಂಬ ಪ್ರತಿಬಿಂಬದ ಸರಳ ಸೂತ್ರ
ಆಕೆಗೇನೂ ಅರ್ಥವಾಗುವುದಿಲ್ಲ.
ತಲ್ಲಣಗಳ ತಕ್ಕಡಿ ಹಿಡಿದೇ
ಎದುರು ಬದುರಾಗುವ
ಮುಖಗಳು ಬಿಂಬ ಪ್ರತಿಬಿಂಬವಾದರೂ
ಒಂದನ್ನೊಂದು ಬೆಂಬಲಿಸುವುದೇ ಇಲ್ಲ
ಬಿಂಬದ ಎಡಕೈ ಎತ್ತಿದರೆ
ಕನ್ನಡಿಯಲ್ಲಿ ಏರುವ ಬಲಗೈ
ಕನ್ನಡಿಯ ಬೆನ್ನಿಗಂಟಿದ ಪಾದರಸದ ಲೇಪನ
ಅಲ್ಲಲ್ಲಿ ಕಿತ್ತು ಹೋಗಿದೆ
ಈಗೀಗ ಬಿಂಬ ಪ್ರತಿಬಿಂಬ
ಮೂಡಿಸುವುದು ಕನ್ನಡಿಗೂ ಕಷ್ಟವಾಗಿದೆ.
ಆದರೂ ಆ ಕನ್ನಡಿಯಲ್ಲಿಯೇ ಮೂಡುವ
ಮುಖವನ್ನು ದಶರ್ಿಸಿಕೊಳ್ಳುತ್ತ
ಹಣೆಬೊಟ್ಟನ್ನು ನಿಧಾನಕ್ಕೆ
ಬೆರಳಿಂದ ಒತ್ತಿ ಲೇಪಿಸಿಕೊಳ್ಳುತ್ತ
ಮುಗುಳ್ನಗುತ್ತಾಳೆ ಅವಳು
ಅವಳು- 2
ಅವನ ಬಿಂಬವನ್ನು ಪ್ರತಿಬಿಂಬವನ್ನು
ಹಗಲೂ ಇರುಳು
ಕೊರೆದು, ಕೆತ್ತಿ ತಿವಿದು ಮೊನೆದು
ತನ್ನದನ್ನಾಗಿಸಿಕೊಂಡಿದ್ದಾಳೆ ಅವಳು
ಬರೀ ಗದ್ದಲದ ನಡುವೆ
ಕಳೆದುಹೋಗುತ್ತಿರುವ
ಅವನನ್ನು ಮಾನಸ ಲೋಕದಲ್ಲೇ
ಜಪಿಸಿ ಸಿದ್ದಿ ಮಾಡಿಕೊಂಡವಳ
ಮರೆತು ಹೋಗುವ
ಬಣ್ಣ ಬಣ್ಣದ ಸೆರಗ ಮರೆಯಲ್ಲಿ
ಮುದುಡಿ ಬಿದ್ದವನ ನಿರಾಕರಣಕ್ಕೆ
ಮುನಿಯುವುದಿಲ್ಲ ಅವಳು
ಸ್ಪರ್ಷಕ್ಕೆ ಸಿಗದ ಮುತ್ತುಗಳು
ಹವಳದ ದಂಡೆಗಳಂತೆ ಸಾಲಾಗಿ
ಹೆಣೆದು ಕೂತಿವೆ
ಮನದ ಮೂಲೆಯಲ್ಲಿ ನಿಯತ
ಭೋರ್ಗರೆವ ಕಡಲಿನ ಆರ್ಭಟಕ್ಕೆ
ಕಿವುಡಾದ ಅವನನ್ನು ಶಪಿಸುವುದಿಲ್ಲ ಅವಳು
ದಹಿಸಬೇಕು ಒಳಗಿನ ಉರಿ
ಉಕ್ಕಿ ಚೆಲ್ಲದಂತೆ
ಸ್ಪೋಟಗೊಳ್ಳದಂತೆ, ಹದವಾಗಿ
ಬೇಯಬೇಕು,ಕೆನೆಗಟ್ಟಬೇಕು ಪ್ರೀತಿ
ಎನ್ನುವವನ ಧಿಕ್ಕರಿಸುವುದಿಲ್ಲ ಅವಳು
ದೇಹವೊಂದು ಪದಾರ್ಥವಾಗದೇ
ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ
ಅವನನ್ನು ಆವಾಹಿಸಿಕೊಳ್ಳುತ್ತಾಳೆ
ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ
ಹೆರಳುಗಳ ನಡುವೆ ಬಂಧಿಸುತ್ತಾಳೆ
ಪರವಶಳಾಗುತ್ತಾಳೆ ಅವಳು
ಅವನಿಲ್ಲದೇ ಅವಳ ದೇವರು
ಇರುವುದಾದರೂ ಹೇಗೆ?
ಆ ದೇವನಿಗಾಗಿ ಕಾಯುತ್ತಾಳೆ ಅವಳು
ಕಾಯತ್ತಲೇ ಇರುತ್ತಾಳೆ ಅವಳು.
**********