ಪದ್ಯ ಸೌತೇಕಾಯಿ
ಅಶ್ವಥ್
ಪದ್ಯ ಸೌತೇಕಾಯಿ
ರಾಮನವಮಿಗೆಂದೇ ಪೋಷಿಸಿ ಪಾಲಿಸಿ
ಬೆಳೆಯಿಸಿದ ಸೌತೇಬಳ್ಳಿ ನೀರುಣಿಸಿ
ಹೂವರಳಿ, ಈಚು ಕಾಯಾಗಿ ಹೊರಳಿ
ಮರಿ ಮುನ್ನೂರೆಣಿಸುವ ಉದ್ದ ಬಳ್ಳಿ
ರುಚಿಯಲ್ಲೆಣೆಯಿಲ್ಲ ಹೋಲಿಕೆಯೆಲ್ಲಾ ಸಣ್ಣ
ಹೇಳತೀರದ ಹೊಳಪು, ಕೆನೆಯಂಥಾ ಬಣ್ಣ
ಬಾಯಿ ತಾಕಿದರಾಗ ಗರಿಗರಿಯಾದ ಸದ್ದು
ನಾಲಗೆಯು ಬಾಚಿ ಮಾಡುವುದು ಮುದ್ದು
ತಣ್ಣನೆಯ ಆ ಅನುಭವ ತರಿಸುವುದು
ಮುಗುಳ್ನಗೆ ಹೊತ್ತ ಮುಖವನ್ನೊಂದು
ಎಂಥಾ ಬದಲಾವಣೆ , ಮನ ಧಿಮ್ಮಗೆ
ಸಾಧ್ಯವುಂಟೇ ಒಂದು ಸೌತೇಕಾಯಿಗೆ
ನುಂಗಿಯಾದ ಮೇಲೆ ರುಚಿಯೆಲ್ಲ ಮಾಯ
ಆದರೂ ಮುಗಿದೇ ಹೋಯಿತೆನ್ನುವ ಗಾಯ
ಬಾಯಿರುಚಿಗೆ ಕಚ್ಚಿದ ಈ ಕಾಯಿಪಲ್ಯ
ಇದಕೂ ಬೇಕೇ ಒಂದು ದಿಟವಾದ ಪದ್ಯ?
ಎಲ್ಲ ಸರಿಯಿದ್ದರೆ ಆಗಬೇಕಿತ್ತು ಇಂದು
ಹೆಸರುಬೇಳೆ ಜೊತೆಗೆ ಕೊತ್ತಂಬರಿ ತಂದು
ಹಣ್ಣು ಹೊಳೆಸಿದ ಬಣ್ಣ ಕನಕಾಂಬರಿ
ಪಾನಕದ ಜೊತೆಗೆ ಕೊಡುವ ಕೋಸಂಬರಿ!
ಸೀತಾಪತಿ ಹೆಸರಲಿ ಎಂಥಾ ಯೋಜನೆಯಿತ್ತು
ಕಿತಾಪತಿಯ ಜೊತೆ ಅಮಲು ಏರಿಸಲಿತ್ತು
ರಾಮನವಮಿಗೆಂದೆಣಿಸಿದ್ದ ಕೋಸಂಬರಿ
ಬುಸುಗುಡುತಲಾಯ್ತು ದುಷ್ಟ ಕಾದಂಬರಿ!
***********