ಬರಿಗಾಲಿನ ಭಾರತ
ಶಿವಶಂಕರ ಸೀಗೆಹಟ್ಟಿ.
ಹಸಿವು ಇವರ ಹೊಟ್ಟೆಗಿದೆ
ಬಟ್ಟೆ ಜೋಳಿಗೆಗಳು ಇವರ ಹೆಗಲಿಗಿವೆ
ಅರಸಿ ಹೊರಟಿದ್ದಾರೆ ಊರ ಹಾದಿ
ದಾರಿ ಸಾಗುತ್ತಿಲ್ಲ ದಿನವೂ ಮೂರು ಮೈಲಿ
ಕಾಲಿಗೂ ಕಾಲಕ್ಕು
ಹೊಂದಾಣಿಕೆ ತಪ್ಪಿ ಹೋಗಿದೆ
ನಡೆಯುವವರ ಕಾಲುಗಳು
ಬಿಗಿಯುತ ರಕ್ತ ಸುರಿಸುತ್ತಿವೆ
ಅಲ್ಲಲ್ಲಿ ಕಂಡು ಕೇಳುವ
ಬೂಟುಗಾಲಿನ ಸದ್ದುಗಳು
ಗಾಬರಿ ಹುಟ್ಟಿಸುತ್ತಿವೆ
ಹಸಿವು ಕಾಣದವರು
ಆಹಾರದ ಉಸ್ತುವಾರಿಗಳಾಗಿದ್ದಾರೆ
ದೂರದೂರಿಗೆ
ಹೊಟ್ಟೆ ಹೊರೆಯಲು ಬಂದವರು
ಒಟ್ಟಿಗೆ ನಡೆಯುತ್ತಿದ್ದಾರೆ
ಹೊತ್ತು ಹೊತ್ತಿಗೂ ಇಲ್ಲಿ
ಹೊಟ್ಟೆ ಸಾಕದವರು
ಈಗ ನಿಟ್ಟುಸಿರು ಬಿಟ್ಟಿದ್ದಾರೆ
ನಡೆಯುವರಿಗೆ ಕಾಲು ಸೋತು
ದೇವರ ಕರೆಯುತ್ತಿದ್ದಾರೆ
ಹಿಟ್ಟು ಇರದೆ ಹೊರಟ ಜನ
ಹಟ್ಟಿ ಕಡೆಗೆ ಹೊರಟಿದ್ದಾರೆ
ಕಟ್ಟಿದ ಕಟ್ಟಡಗಳೆಲ್ಲ ಇವರನ್ನೆ ನೋಡುತಿವೆ
ಹಾಕಿದ ಟಾರು ಮಾಡಿದ ರೋಡುಗಳಲ್ಲ
ಇವರಿಗಾಗಿ ಕಾಯುತ್ತಿವೆ
ಬೀದಿ ಬದಿಯ ಜನರು ಕರಗಿ ಬಡಕಲಾಗಿದ್ದಾರೆ
ಬದುಕಿನ ಏರು ಪೇರುಗಳು ಇವರ ಲೆಕ್ಕಕ್ಕೆ ಸಿಗುತಿಲ್ಲ
ಹೊಟ್ಟೆ ತುಂಬಿದವರು
ಕೂಸಿಗೆ ಕುಲಾಯಿ ಹೊಲಿಸುವ ತಯಾರಿಯಲ್ಲಿದ್ದಾರೆ
ಸಾವು ನೋವುಗಳ ನಗಾರಿ
ತನ್ನನ್ನೆ ಬಡಿದುಕೊಳ್ಳುತ್ತಿದೆ
ಬದುಕಿರುವ ಮನುಷ್ಯರೀಗ ಭೂಮಿಗಿಳಿದ್ದಿದ್ದಾರೆ
ಎಲ್ಲಾ ಸಾಂತ್ವನದ ಕೂಗುಗಳು
ಮೂಕವಾಗಿವೆ
ಇದು ಬರಿಗಾಲಿನ ಭಾರತ
ಇಲ್ಲಿ ಬವಣೆಗಳು ಸದಾ ಶಾಶ್ವತ.
*********
ಅರ್ಥ ಗರ್ಭಿತ…ವಾಸ್ತವ ಕವನ….
Super it is Real facts