ನಾನು ಓದಿದ ಪುಸ್ತಕ

ನಕ್ಷತ್ರ ಸೂಕ್ತ 

ಡಾಕ್ಟರ್ ಅನಸೂಯಾದೇವಿ 

ನಕ್ಷತ್ರ ಸೂಕ್ತ 
ಲೇಖಕಿ ಡಾಕ್ಟರ್ ಅನಸೂಯಾದೇವಿ 
ಪ್ರಕಾಶಕರು ಶ್ರೀ ಅನ್ನಪೂರ್ಣ ಪ್ರಕಾಶನ ಅಗ್ರಹಾರ ದಾಸರಹಳ್ಳಿ ಬೆಂಗಳೂರು ೫೦೦೦೭೯ 
ಮೊದಲ ಮುದ್ರಣ ೨೦೧೪
ಬೆಲೆ ರೂ.೧೫೦/

ಮೂರು ಪ್ರಬುದ್ಧ ಮುಖ್ಯಪಾತ್ರಗಳ ಸುತ್ತ ತಿರುಗುವ ಕಥೆ .ಅಡಿ ಟಿಪ್ಪಣಿ ಹೇಳುತ್ತದೆ “ನನಗೊಂದು ಮಗು ಬೇಕು” ನಾಯಕಿ ಮಾರ್ದವಿ ಸಂಗೀತಗಾರಳು ವಿದ್ಯಾವಂತೆ ಹಾಗೂ ಸೌಮ್ಯ ಸ್ವಭಾವದ ರೂಪಸಿ .ಅವಳ ಪ್ರತಿ ಮಧುಕರ ಕಾಲೇಜು ಉಪನ್ಯಾಸಕನಾಗಿದ್ದವನು  ಹಾಗೂ ದೇವಾಲಯದ ಅರ್ಚಕ ಸಂಸ್ಕೃತ ವಿದ್ವಾಂಸ ಹಾಗೂ ಪಿ.ಎಚ್.ಡಿ. ಬರೆಯುತ್ತಿರುವ ಭಾಸ್ಕರ ಸೋಮಯಾಜಿ. ಅವರ ಕಥೆಗೆ ಹಿರಿಯರ ಕಾಲದ ಶಾಪದ ವೃತ್ತಾಂತ ಆಸ್ತಿಗಾಗಿ ಅಣ್ಣತಮ್ಮಂದಿರ ದ್ವೇಷ ಕಲಹಗಳ ಹಿನ್ನೆಲೆ ತೆಗೆದುಕೊಂಡು ವಿವರಿಸುತ್ತಾ ಹೋಗುವ ಕಥೆಯ ಎಳೆ. ಇತ್ತೀಚಿನ ದಿನಗಳಲ್ಲಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ ಕಾದಂಬರಿ ಇದು.  ಬಾಲವಿಧವೆ ರಾಧಜ್ಜಿಯ ಹಕ್ಕಿಗಳೊಡನಿನ ಸಂಭಾಷಣೆ, ಅಣ್ಣನ ಮೋಸಕ್ಕೆ ಬಲಿಯಾದ ಶಾಂತಾರಾಮಜ್ಜ, ಅನ್ಯಾಯಕ್ಕೆ ಈಡಾಗಿ ವಿಷ ಕುಡಿದು ವಂಶಕ್ಕೆ ಶಾಪ ಕೊಟ್ಟ ಶಾಂತಾರಾಮನ ಪತ್ನಿ ಜಯಲಕ್ಷ್ಮಿ ಈ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಪ್ರತಿಯೊಂದು ಮನೆತನದಲ್ಲಿ ಹುಡುಕಿದರೆ ಇಂತಹ ಕಥೆಗಳು ಸಿಗಬಹುದೇನೋ. ಆದರೆ ತಮ್ಮ ಪಾಪದ ಫಲ ಇಂದಿನ ತಮ್ಮ ಅವಸ್ಥೆ ಎಂದರಿಯುವವರು ಮಾತ್ರ ಇರುವುದಿಲ್ಲ.  

ಪೂರ್ಣ ಕಥೆಯನ್ನು ವಿವರಿಸಿ ನಿಮ್ಮ ಕುತೂಹಲಕ್ಕೆ ಭಂಗ ತರುವುದಿಲ್ಲ ನಾನು.  ಓದಿಯೇ ತೀರಬೇಕು ಅದರ ಆಸ್ವಾದ ಅರಿಯಲು. ಮುನ್ನುಡಿಯಲ್ಲಿ ಡಾಕ್ಟರ್ ಟಿ ಎ ಬಾಲಕೃಷ್ಣ ಅಡಿಗರು ಹೇಳಿರುವಂತೆ ” ಭಾವ ಬೆಳಕು ಭಾವಲೋಕ, ಭಾವವಲಯ, ಭಾವಸಂಗಾತಿ ಭಾವ ತೇವತೆ ಭಾವ ಜಟಿಲತೆ ಈ ಎಲ್ಲಾ ಪದಗಳನ್ನು ಲೇಖಕಿಯು ಬಳಸುವಲ್ಲಿ ಅವರು ಸೃಷ್ಟಿಸಿರುವ ಭಾವಜಗತ್ತನ್ನು ಅರ್ಥೈಸಿಕೊಳ್ಳುವಲ್ಲಿ ಈ ಕಾದಂಬರಿಯ ಓದುಗನಿಗೂ ಕೂಡ ವಿಶೇಷ ಭಾವ ಸಂಸ್ಕಾರವಿದ್ದರೆ ಒಳಿತು “. ನಿಜ ತಮ್ಮ  ಭಾವ ತೀವ್ರತೆ ಇರುವ ಬರವಣಿಗೆಯಿಂದ ಲೇಖಕಿ ನೇರ ಓದುಗನ ಹೃದಯದಾಳಕ್ಕೆ ಲಗ್ಗೆಯಿಡುತ್ತಾರೆ . ಬಳಸಿರುವ ಭಾಷೆಯ ಮೇಲಿನ ಹಿಡಿತ ಜೊತೆಯಾಗಿರುವ ಸಂಗೀತ ಸಾಹಿತ್ಯ ಉದ್ದರಣೆಗಳು ಕಥೆಯ ಓಘಕ್ಕೆ ಇಂಬು ಕೊಡುತ್ತ ಹೋಗುತ್ತದೆ. ಪ್ರಾಚೀನ ಹಾಗೂ ಅರ್ವಾಚೀನ ಸಂಗತಿಗಳ ನಡುವಣ ಸಾಮರಸ್ಯ ,ಉದಾಹರಣೆಗೆ ನಿಯೋಗ ಪದ್ಧತಿ ಮತ್ತ ಐವಿಎಫ್, ವೇದ ಕಾಲದ ಸೂಕ್ತಗಳು ಹಾಗೂ ಮೊಹೆಂಜದಾರೋ ಮುದ್ರೆಗಳ ನಡುವಣ ಸಾಮ್ಯತೆ ಹಾಗೂ ಅಧ್ಯಯನ ಎಲ್ಲವೂ ಕಥೆಗೆ ಪೂರಕವಾಗುತ್ತಾ ಸಾಗುತ್ತದೆ . ಲೇಖಕಿ ಸ್ವತಃ ಗಾಯಕಿಯೂ ಹೌದು. ಆದ್ದರಿಂದ ನಾಯಕಿಯ ಗಾಯನ ಆಗಿನ ಅವಳ ಮನಃಸ್ಥಿತಿಗಳನ್ನು ಕಣ್ಣಿಗೆ ಕಟ್ಟುವಂತೆ ಮನಕ್ಕೆ ನಾಟುವಂತೆ ಚಿತ್ರಿಸಿದ್ದಾರೆ. 

ಹೆಣ್ಣಿನ ಜನ್ಮದ ಸಾಫಲ್ಯ ತಾಯ್ತನ .ಪ್ರತಿ ಹೆಣ್ಮನವೂ “ನನಗೊಂದು ಮಗು ಬೇಕು” ಎಂದು ಹಂಬಲಿಸುತ್ತಲೇ ಇರುತ್ತದೆ.  ಆ ತುಡಿತ ಮಿಡಿತದ ಹಪಾಹಪಿ ಹಾಗೂ ಅದನ್ನು ಪೂರೈಸಿಕೊಳ್ಳುವ ವಿಧಾನ ಇದು ಕಥಾವಸ್ತು. ಆದರೆ ಅದನ್ನು ಹಿಡಿದಿಟ್ಟಿರುವ ಲೇಖಕಿಯ ಅನನ್ಯತೆಗೆ ಶರಣು ಅನ್ನಲೇಬೇಕು. ಚರ್ವಿತ ಚರ್ವಣವಾಗದೆ ಹೀಗೆ ಆಗಬಹುದು ಎಂದು ಊಹಿಸಲಾಗದ, ಹೀಗೂ ಆಗಬಹುದು ಎಂದು ನಿರೂಪಿಸಿರುವ ಶೈಲಿ ತುಂಬಾ ಮನಕ್ಕೆ ಮುಟ್ಟಿತು ಆಪ್ಯಾಯವಾಯಿತು ಆಪ್ತವಾಯಿತು .

ಕಾದಂಬರಿಯ ಈ ಸಾಲುಗಳು  ಸ್ತ್ರೀ ಸಮಾನತೆ ಸ್ವಾತಂತ್ರ್ಯ 
ಪರವಾದವರಿಗೆ ಸಮಾಧಾನವನ್ನೂ ನೀಡಬಹುದು. 
“ಬೀಜವೊಂದನ್ನೇ ವಂಶ ಮೂಲವೆಂದು ಗುರುತಿಸುವುದೇಕೆ?  ಕ್ಷೇತ್ರವನ್ನೇಕೆ ವಂಶ ಪಾರಂಪರಿಕೆಯಾಗಿ ಪರಿಗಣಿಸಬಾರದು? ಕ್ಷೇತ್ರವಿಲ್ಲದೆ ಬೀಜವೊಂದರಿಂದಲೇ ವಂಶ ಬೆಳೆಯುತ್ತದೆಯೇ ?”

ಮಾರ್ದವಿ ಬೆಟ್ಟಕ್ಕೆ ತೆರಳುವ ಸಂದರ್ಭದಲ್ಲಿ ಕೋತಿಗಳು ಎದುರಾಗುವ ಸಂದರ್ಭವನ್ನು ತುಂಬಾ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.  ಹಾಗೆಯೇ ಮಾರ್ದವಿಗೆ ಬೀಳುವ ಕನಸಿನ ವಿವರವೂ ಸಹ . ಮಧ್ಯೆ ಬರುವ ಭಾವ ಗೀತೆಗಳ ಸಾಲುಗಳು ರಾಗಗಳ ವರ್ಣನೆ ಅಬ್ಬಾ ಒಂದು ಸಂಪೂರ್ಣ ಭಾವಮಯ ಭಾವುಕ ಜೀವಿಗಳ ಭಾವ ಬಣ್ಣನೆ! .

ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಸಂಬಂಧಗಳು,ಹೆಚ್ಚುತ್ತಿರುವ ವಿಷಮ ಸಂಸಾರಗಳು ವಿವಾಹೇತರ ಸಂಬಂಧಗಳ ಮಧ್ಯದಲ್ಲಿ ಇಂತಹ ಕಾದಂಬರಿಗಳು ಹೆಚ್ಚು ಮೌಲಿಕವಾಗುತ್ತದೆ. ಸಮಾಜಕ್ಕೆ ಮಹತ್ವದ ಸಂದೇಶವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ ಸಫಲವೂ ಆಗುತ್ತವೆ .

*********

ಸುಜಾತಾ ರವೀಶ್

Leave a Reply

Back To Top