ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಬಳಲುತ್ತಿದೆ ಭೂಮಿ
ಅವನು ಅವನಿಗೆ ನೀಡಿದೇಟು
ಹಸಿರಿನ ಬುಡಕ್ಕೆ ಕೊಡಲಿಯೇಟು…
ಉಸಿರಿನ ವೇಗಕ್ಕೆ ಛಡಿಯೇಟು..
ಅವನಿಂದ ಅಳುತಿಹಳು ಅವನಿಯಿಂದು….
ಸರಣಿ ಅತ್ಯಾಚಾರಕೆ
ನಲುಗಿದ ಧರಣಿ….
ಮಾವು ಬೇವಲಿ ಹೂ ಬಿಡದೆ
ಹೂಡಿಹಳು ಧರಣಿ….ಇಂದು
ರಾಸಾಯನಿಕ ವಿಷ ಮಳೆಯ
ಉಣಿಸಿ ಇಳೆಯ ಮೊಗದ
ಕಳೆಯ ಕಳೆದ ದಾನವ…
ಸ್ವಾರ್ಥಿ ಮಾನವನಿಂದು….
ಹಚ್ಚ ಹಸಿರ ಸೀರೆ ಸೆಳೆದು
ಬತ್ತಲಾಗಿಸಿದ….ಮನುಜ
ಭುವಿಯ ಬೆಡಗ ಅಳಿಸಿ
ಕತ್ತಲಾಗಿಸಿದ….ಮನುಜನಿಂದು
ಗುಬ್ಬಿ ಗೂಡಿಲ್ಲ…ಚಿಗುರು ಸ್ನೇಹವಿಲ್ಲ
ಹಕ್ಕಿ ಹಾಡಿಲ್ಲ..ಭೂ ರಂಗ ರಣರಂಗ..
ಮೊಲ್ಲೆನಗುವಿಲ್ಲ.. ಸ್ಮಶಾನ ನಾಡೆಲ್ಲ
ಮೌನ ರಾಗದ ಅಂತರಂಗವಿಂದು…
ನೇರ ನನ್ನೆದೆಯ ಆಳಕೆ
ಕೊರೆದ ರಂಧ್ರ….ಕಣ್ಣೀರ ಸಿಂಧು…
ತಾಪ ನೋಡದೆ ಮೋಡದಿ
ಮರೆಯಾದ ಮುಗಿಲ ಚಂದ್ರನಿಂದು..
ತಿರೆಯ ಅಂತರಾಳ ಬಗೆದು
ಅಂತರ್ಜಲ ಬರಿದು
ಮಾಡಿದ ಭೂಮಿ ತಾಯಿಯ…..
ಲೂಟಿ ಮಾಡಿದ….ದುರುಳನಿಂದು
ಜುಳುಜುಳು ರಾಗಕೆ
ಅಪಸ್ವರ ಸೇರಿಸಿ…
ವಸುಧೆಯ ಪೊದರ ಪಕ್ಷಿಯ
ಕಲರವ ಅಳಿಸಿ ನರಳಿಸಿದ ಧಾರಿಣಿಯನಿಂದು..
.
ತೂಗುವ ತೆನೆ ಹಾಲಗಾಳಲಿ
ಅಮೃತದ ಸವಿಬಿಂದು…
ಬೆಳೆಯ ಒಡಲಲ್ಲಿ ವಿಷಾನಿಲಗಳ
ಕಹಿ ಬಿಂದು…ಧರೆಯಲಿಂದು…..
ವಸುಂಧರೆಯ ಒಡಲಿದು
ಸುಡು ಸುಡು ದಾವಾಗ್ನಿ ಅಗ್ನಿ ಕುಂಡವು…
ಮೇದಿನಿಯ ಮೈ ಮನವು
ನೋವಿನ ಜ್ವಾಲಾಗ್ನಿಯಲಿ ಮಿಂದು…..
ಬಳಲುತಿದೆ ಭೂಮಿಯಿಂದು…
ಕನಲುತಿಹಳು…ನೆಲದವ್ವ..ತಾನೊಂದು…
ಕೆಮ್ಮೊಗದಿ ಕೆನ್ನೀರ ಧಾರೆಯಿಂದು…
ಒರೆಸಿ ಸಂತೈಸುವ ತೆಕ್ಕೆಗಾಗಿ ಕಾದಿಹಳಿಂದು…
ಸೊಗಸಾಗಿದೆ
ಧನ್ಯವಾದ ಸರ್
Very nice nijavagalu nivu kaveteyannu valisikondavaru B M Mujawar Athani B
ಸೊಗಸಾಗಿದೆ
ಸಾಮಾಜಿಕ ಕಳಕಳಿಯ , ಪ್ರಕೃತಿ ಪ್ರೇಮದ ಮನೆ ಮಿಡಿಯುವ ಕವನ
ಧನ್ಯವಾದ ಗಳು….