ವಿಶೇಷ ಬರಹ
ಜಯಶ್ರೀದೇಶಪಾಂಡೆ
ಮಧ್ಯರಾತ್ರಿ ಸೂರ್ಯನ ಕಂಡೆ!
ಹೌದು, ಇಲ್ಲಿ ರಾತ್ರಿಯಿಡೀ ಸೂರ್ಯ ಝಗಮಗಿಸುತ್ತಾನೆ. ಒಂದು ರೀತಿಯಲ್ಲಿ ಇದು ನಂಬಿ ಅಥವಾ ಬಿಡಿ ಎನ್ನಬಹುದಾದ ಸಂಗತಿಯೇ! ಹೆಚ್ಚು ಕಡಿಮೆ ನಮ್ಮ ಕರ್ನಾಟಕದ ಒಂದೂವರೆ ಪಟ್ಟು ವಿಸ್ತೀರ್ಣ ಅಂದರೆ 337.00 ಸಾವಿರ ಚದರ ಕಿಲೋಮೀಟರುಗಳು ಇರಬಹುದಾದ ಈ ನಾಡಿಗೆ ಸೃಷ್ಟಿದತ್ತ ವರದಾನವಾಗಿರುವುದೆಂದರೆ ಇಲ್ಲಿನ ಒಂದು ಲಕ್ಷ ಎಂಬತ್ತೇಳು ಸಾವಿರಕ್ಕೂ ಅಧಿಕ ಸರೋವರಗಳು!
ನೀರು ನೀರು ಎಲ್ಲೆಲ್ಲೂ ನೀರು ಎಂದು ನಮ್ಮ ನಿಮ್ಮಂಥವರು ಖಂಡಿತ ಬೆರಗುವಡೆಯಬಹುದಾದ ಈ ಸಮೃದ್ಧ ಜಲರಾಶಿಗೆ ಮುಖ್ಯವಾದ ಕಾರಣವೆಂದರೆ ಈ ಭೂಭಾಗವು ಉತ್ತರಧೃವಕ್ಕೆ ಸಾಕಷ್ಟು ಸಮೀಪದಲ್ಲಿರುವುದು.ಗೋಧೂಳಿ ಮುಸ್ಸಂಜೆಯ ಮಂದಕಾಂತಿಯ ಪ್ರಭೆಯನ್ನು ದಿನವಿಡೀ ದಣಿದ ನಮ್ಮ ದೇಹ ಮನಸ್ಸುಗಳಿಗಿತ್ತು ನಕ್ಕು ಒಂದು ಬೈ ಹೇಳಿ, ದಿಗಂತದ ಅಂಚಿನಲ್ಲಿ ಮರೆಯಾಗುವ ಸೂರ್ಯ ನಮಗೆ ಮರಳಿ ಮುಖದೋರುವ ಸಮಯ ಬಹುಶ: ಮಾರನೆಯ ಬೆಳಗಿನ ಆರು ಅಥವಾ ಅದರ ಹಿಂಚೆ ಮುಂಚೆ. ಅದುವರೆಗೆ ನಿಶೆ, ರಾತ್ರಿ ಮತ್ತು ನಿದ್ದೆ ಇವು ನಮ್ಮ ಸಂಗಾತಿಗಳು. ಆದರೆ ಪ್ರಪಂಚದಲ್ಲಿ ಸಂಜೆಯಾದೊಡನೆ ಮುಳುಗಿ ಹೋಗಲು ಒಲ್ಲೆನೆನ್ನುವ ಸೂರ್ಯನಿರುವ ಜಾಗಗಳೂ ಉಂಟು. ರಾತ್ರಿಯ ಹನ್ನೆರಡು ಗಂಟೆ ಮೀರಿ ಹೋದರೂ, ತನ್ನ ಅನುದಿನದ ಅಸ್ತಂಗತನಾಗುವ ಕಾರ್ಯಕ್ರಮವನ್ನು ಅನಿರ್ದಿಷ್ಟವಾಗಿ ಮುಂದೂಡಿ, ಝಗಮಗಿಸಿ ಕಾಣುಗರ ಕಣ್ಮನಗಳಿಗೆ ಹಿಗ್ಗಿನ ಬುಗ್ಗೆಗಳೇಳಿಸಿ, ಬೆರಗಿನ ನೋಟ, ಕೌತುಕ, ವಿಸ್ಮಯಗಳ ಮೋಡಿಯಿತ್ತು ಕುಳಿತ ಸ್ಥಳದಿಂದ ಕದಲಲಾಗದಂತೆ ಕಟ್ಟಿ ಹಾಕುವ ಭಾಸ್ಕರನ ಉರಿಚೆಂಡಿನ ಉಪಸ್ಥಿತಿ ಉತ್ತರ ಭೂ ಗೋಳಾರ್ಧದ ಹಲವೆಡೆ ಉಂಟು. ಹೌದು, ಅವನು ಹೀಗೆ ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ,ರಶಿಯ,ನಾರ್ವೆ, ಕೆನಡಾ, ಸ್ವೀಡನ್, ಫಿನ್ಲೆಂಡ್, ಮತ್ತು ಐಸ್ಲೆಂಡ್ ಈ ದೇಶಗಳಲ್ಲಿ . ಇಂಥ ‘ಮಧ್ಯರಾತ್ರಿಯ ಸೂರ್ಯ’ ನನ್ನ ಕಣ್ಣಿಗೆ ಬಿದ್ದದ್ದು ಫಿನ್ಲೆಂಡ್ ನಲ್ಲಿ. ಈ ನಿಸರ್ಗವೈಚಿತ್ರ್ಯದ ಭೌಗೋಲಿಕ ಕಾರಣಗಳನ್ನು ಹೀಗೆ ದಾಖಲಿಸಬಹುದು. ಈ ಎಲ್ಲ ನಾಡುಗಳು ಉತ್ತರ ಧೃವಕ್ಕೆ ಬಲು ಹತ್ತಿರದವಾಗಿದ್ದು ಅಕ್ಷಾಂಶ ರೇಖಾoಶಗಳ ಪರಿಧಿ (ಫಿನ್ಲೆಂಡ್ ಗೆ ಸಂಬಂಧಿಸಿದಂತೆ) ಅಂದಾಜು 60 – 34 ‘ ಡಿಗ್ರಿಗಳಷ್ಟು. ನಮ್ಮ ಭೂಮಿ ತನ್ನ ಅಕ್ಷಕ್ಕೆ 23 ಡಿಗ್ರಿಗಳಷ್ಟು ವಕ್ರಲಂಬ ಗತಿಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತಿದ್ದು ಉತ್ತರ ಧೃವದಲ್ಲಿ ಸುಮಾರು ಜೂನ್ ಜುಲೈ ಗಳಲ್ಲಿ ಮತ್ತು ದಕ್ಷಿಣ ಧೃವದಲ್ಲಿ ಡಿಶಂಬರ್ ಮತ್ತು ಅದರ ಹಿಂದು ಮುಂದಿನ ಹಲವು ತಿಂಗಳ ಸಮಯಗಳಲ್ಲಿ ಸೂರ್ಯ ದಿನದ ಇಪ್ಪತ್ನಾಲ್ಕು ಗಂಟೆಗಳ ವರೆಗೂ ಕ್ಷಿತಿಜದಲ್ಲಿ ಪ್ರಜ್ವಲಿಸುತ್ತಲೇ ಇರುತ್ತಾನೆ. ಧೃವ ಪ್ರದೇಶದಿಂದ ಆಯಾ ದೇಶ ಎಷ್ಟು ದೂರವಿದೆ, ಯಾವ ಅಕ್ಷಾಂಶ/ರೇಖಾಂಶಗಳ ಮೇಲಿದೆ ಎನ್ನುವುದು ಸೂರ್ಯನು ಅಲ್ಲಿ ರಾತ್ರಿ ಕಾಣಿಸಿಕೊಳ್ಳುವ ಸಮಯವನ್ನು ನಿರ್ಧರಿಸುತ್ತದೆ.
'ಯೊಹಾನುಸ್' ಎಂಬುದು ಫಿನ್ನಿಷ್ ಜನ ಬೇಸಿಗೆಯಲ್ಲಿ ಬಲು ಕಾತರದಿಂದ ಕಾಯುತ್ತಿರುವ ನಿಸರ್ಗ ಪರ್ವ. ಇದು ಮಧ್ಯರಾತ್ರಿ ಪ್ರಜ್ವಲಿಸುವ ಸೂರ್ಯನನ್ನು ಕಣ್ತುಂಬಿಕೊಳ್ಳುವ ದಿನವೂ ಹೌದು. ನಾವಿರುವ ಕುವೋಪಿಯೋ ನಗರದಲ್ಲಿ ಒಂದಿಡೀ ವಾರ ಸೂರ್ಯಾಸ್ತಮಾನ ಆಗುವ ಮಾತೇ ಇರಲಿಲ್ಲ.ಅನಂತರವೂ ದಿನದ ಇಪ್ಪತ್ತು ಇಪ್ಪತ್ತೆರಡು ಗಂಟೆಗಳ ಕಾಲ ಬೆಳಕು, ಒಂದೆರಡು ಗಂಟೆಯ ಮಬ್ಬು ಮಸಕು ಅಷ್ಟೇ. ಮತ್ತೆ ಬಲುಬೇಗ ಆಕಾಶದಲ್ಲಿ ಸೂರ್ಯನ ಉಪಸ್ಥಿತಿ. ಇಲ್ಲಿ ಈ ದಿನಗಳಲ್ಲಿ ರಾತ್ರಿಯನ್ನು ಕತ್ತಲಾಗಿಸಿಕೊಳ್ಳಬೇಕೆಂದರೆ ಕಿಟಕಿಗಳಿಗೆಲ್ಲ ದಟ್ಟ ಗಾಢ ವರ್ಣದ ಪರದೆಗಳನ್ನು ಹಾಕಿ ಮುಚ್ಚುವುದೊಂದೇ ದಾರಿ. 'ಮಿಡ್ ಸಮ್ಮರ್ ಡೇ' ಅನ್ನಿಸಿಕೊಳ್ಳುವ ಯೋಹಾನುಸ್ ಜೂನ್ ತಿಂಗಳ 21 ಅಥವಾ 23 ರ ಸುಮಾರಿಗೆ ಬಂದಿಳಿಯುತ್ತೆ. ಪ್ರತಿ ಸೆಪ್ಟೆಂಬರ್, ಅಕ್ಟೊಬರ್ ನಲ್ಲಿ ಶುರುವಾಗುವ ಮೈ ಕೊರೆಯುವ ಚಳಿ, ಅದನ್ನು ಹಿಂಬಾಲಿಸಿ ಇಡೀ ನಾಡನ್ನೇ ಆವರಿಸುತ್ತಾ ಆರೆಂಟಡಿಯಷ್ಟು ಎತ್ತರಕ್ಕೆ ದಟ್ಟ ಬಿಳಿ ಹಿಮವನ್ನು ಹರಡುತ್ತದೆ. ತಾಪಮಾನ ಶೂನ್ಯದಿಂದ ಮೂವತ್ತು ನಲವತ್ತು ಡಿಗ್ರಿಗಳಷ್ಟು ಕೆಳಗಿಳಿದು, ಇಲ್ಲಿನ ಸಮಸ್ತವನ್ನೂಮೇ- ಜೂನ್ ಬರುವವರೆಗೆ ಶ್ವೇತವರ್ಣದ ಹೊದಿಕೆಯಲ್ಲಿ ಮುಚ್ಚಿ ಹಾಕಿಬಿಡುವ ಇನ್ನೂ ಖತರ್ ನಾಕ್ ಚಳಿಗಾಲಕ್ಕೆ ಬೇಸತ್ತ ಇಲ್ಲಿನವರು 'ದಯಮಾಡಿಸು ಹಿಮವೇ ಇನ್ನು ಹೊರಟು ಹೋಗು' ಅನ್ನುತ್ತಾ ಬಿಳ್ಕೊಟ್ಟು ಸುತ್ತಮುತ್ತಲ ಅರಣ್ಯವಿಡೀ ಅದೇ ಆಗ ಚಿಗುರಿದ ಚೆಂದೆಲರಿನ ಹಸಿರನ್ನು ಆಹ್ವಾನಿಸುತ್ತ ಅದರ ಸಂಕೇತವಾಗಿ ಅಚ್ಚುಕಟ್ಟಾಗಿ ಒಂದು 'ಬಾನ್ ಫೈರ್' ಬೆಂಕಿಯುರಿಸಿ ನದಿ ಯಾ ಸರೋವರದ ದಂಡೆಯಲ್ಲಿ ಮಧ್ಯರಾತ್ರಿಯಲ್ಲಿ ತನ್ನ ಪ್ರಭೆಯುಕ್ಕಿಸಿ ಹೊಳೆದು ನಗುವ ಸೂರ್ಯನ ಸೃಷ್ಟಿಯಾಟವನ್ನು ಬಗೆಬಗೆ ರಸದೂಟ, ಪೇಯ, ಪಾನೀಯಗಳೊಂದಿಗೆ ಸವಿಯುತ್ತಾರೆ. ಪರಿಚಿತರೊಬ್ಬರು ನೀಡಿದ್ದ ಇಂಥದೊಂದು ಪಾರ್ಟಿಯ ಆಹ್ವಾನವನ್ನು ತಪ್ಪಿಸಿಕೊಳ್ಳುವುದುಂಟೆ?
ಒಂದು ಸರೋವರದ ದಂಡೆಯಲ್ಲಿ ಅವರ ಸಮ್ಮರ್ ಕಾಟೇಜಿನಲ್ಲಿ ನಡೆಸಿದ ಈ ‘ಯೊಹಾನುಸ್’ ಬೇಸಿಗೆ ಕೂಟಕ್ಕೆ ಹೋಗಿದ್ದೆವು. ಹಾಗೆ ಗುಲ್ಲು ಗಲಾಟೆ, ಸದ್ದು ಗದ್ದಲಗಳ ಗೌಜಿಯನ್ನು ಅಷ್ಟಾಗಿ ಬಯಸದ ಫಿನ್ನಿಷ್ ಜನರ ಈ ಶಾಂತಿಪ್ರಿಯ ನಮೂನೆ ಯಾರಿಗೂ ಇಷ್ಟವಾಗಬಹುದಾದ ಗುಣವೇ. ಇವರೇನೇ ಮಾಡಿದರೂ ಅದರಲ್ಲೊಂದು ಶಿಸ್ತು, ವ್ಯವಸ್ಥೆಯ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಸಂಜೆಯ ಆರಕ್ಕೆ ಶುರುವಿಟ್ಟುಕೊಂಡ ಸ್ನೇಹಕೂಟಕ್ಕೆ ನಡು ನಡುವೆ ವಿಶಿಷ್ಟ ಫಿನ್ನಿಷ್- ಅಂದ ಹಾಗೆ ಇವರು ತಮ್ಮ ನಾಡನ್ನು ಸುವೊಮಿ ಎಂದು ಕರೆಯುತ್ತಾರೆ. ಇವರ ಸಂಸ್ಕೃತಿ ಸುವೊಮಿ… ಭಾಷೆ ಎಷ್ಟೇ ವೈವಿಧ್ಯಪೂರಿತ ಪ್ರಾದೇಶಿಕ ಸೊಗಡಿನದ್ದಾಗಿರಲಿ ಅದು ಸುವೊಮಿಯೇ. ತಮ್ಮ ಪದ್ಧತಿಯ ಅಡುಗೆ ಮಾಡಿದ್ದರೂ ಶಾಕಾಹಾರಿಗಳಾದ ನಮಗೆಂದೇ ವಿಶೇಷ ಮುತುವರ್ಜಿಯಲ್ಲಿ ಮಾಡಿಟ್ಟಿದ್ದ ಸುವೊಮಿ ಸಿಹಿಗಳಿದ್ದುವು, ಲೆಪ್ಪ ಎಂಬ ಬ್ರೆಡ್ಡು, ಹಣ್ಣುಹಂಪಲು, ಬಗೆ ಬಗೆ ಚಿಪ್ಸ್, ನಾನಾ ಬಗೆಯ ಜೂಸುಗಳು, ಬಾಸ್ಮತಿಯಕ್ಕಿಯ ಅನ್ನ ಮೊಸರು! ಒಟ್ಟಿನಲ್ಲಿ ಭೂರಿ ಭೋಜನ. ಊಟದ ನಂತರ ‘ಕ್ರೂಕೆಟ್’ ಅನ್ನುವ ಆಟವಾಡಿದರು. ಇದರಲ್ಲಿ ನೆಲದಲ್ಲಿ ನೆಟ್ಟ ಹಲವೆಂಟು ತಂತಿಯ ಪುಟ್ಟ ಗೋಲ್ ಪಾಸ್ ಗಳಲ್ಲಿ ಚೆಂಡನ್ನು ಬ್ಯಾಟ್ ನಿಂದ ಉರುಳಿಸಿ ದಾಟಿಸಬೇಕು. ಎಲ್ಲಾ ಗೋಲ್ ಮೊದಲು ಪಾಸ್ ಮಾಡಿದವರು ವಿಜೇತರು!
ಮಧ್ಯರಾತ್ರಿ ಮೋಡಗಳೇನಾದರೂ ಆವರಿಸಿದ್ದರೆ ಅವು ಅತ್ತ ಚಲಿಸಿ ಸೂರ್ಯ ಬೆಳಗುವುದನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ ಅಲ್ಲೇ ದಂಡೆಯಲ್ಲಿ ಪೇರಿಸಿದ ಕಟ್ಟಿಗೆಯ ರಾಶಿ, ಒಣಗಿದೆಲೆ ಪುರುಳೆಗಳ ಸಂಗ್ರಹಕ್ಕೆ ಬೆಂಕಿ ಕೊಟ್ಟು ಜ್ವಾಲೆ ನಭೋಮುಖವಾಗಿ ಹೊಮ್ಮುತ್ತಿರುವಂತೆ ಸಾಂಪ್ರದಾಯಿಕ ನಮೂನೆಯ ಹಾಡುಗಳನ್ನು ಹಾಡಿದರು..ಅಲ್ಲೇ ಸುತ್ತುತ್ತ ಚಪ್ಪಾಳೆ ತಟ್ಟಿ ಬೆಂಕಿಯ ಕಾಂತಿಯಲ್ಲಿ ಹೊಳೆದ ಅವರ ಮುಖಗಳಲ್ಲಿ- ಅಂದು ಬೆಳಗಿನಿಂದ ಗಾಳಿ ಬೀಸುತ್ತ ತುಂಬಿಕೊಂಡಿದ್ದ ಒಂದಷ್ಟು ಚಳಿ ಅತ್ತ ಸರಿದು- ಬೇಸಿಗೆಯ ಸುಖದಾಯಕ ಬಿಸಿಲಿನ ಖುಷಿ ತುಂಬಿತು.
ಯಾಕೆ ಇವರು ಈ ನಿಸರ್ಗದ ಹಬ್ಬವನ್ನಾಚರಿಸುತ್ತಾರೆ? ಇದಕ್ಕೇನು ಹಿನ್ನೆಲೆ? ಅನ್ನುವ ನನ್ನ ಪ್ರಶ್ನೆಯನ್ನವರ ಎದುರಿಟ್ಟೆ. ಉತ್ತರಗಳು ಸ್ವಾರಸ್ಯಕರ. ಫಿನ್ಲೆಂಡ್ ನ ಎರಡು ಮೂರಾಂಶ ಭಾಗವಿಡೀ ಅರಣ್ಯವಿದೆ. ಅದುವೇ ಅವರ ಮುಖ್ಯ ಸಂಪನ್ಮೂಲ. ಅರಣ್ಯವನ್ನವರು ತಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತ ಅದು ಹಾಳಾಗದೆ ಉಳಿದು ಬೆಳೆದು ನಿಲ್ಲುವ ವ್ಯವಸ್ಥೆಯಲ್ಲಿ ಸದಾ ನಿರತರು.ನಮ್ಮಲ್ಲಿನ ಹಾಗೆ ಇಲ್ಲಿ ಎಲ್ಲೆಂದರಲ್ಲಿ, ಯಾರೇ ಆಗಲಿ ಮನಸ್ವೀ ಕಾಡು ಕಡಿದು ಹಾಕುವಂತಿಲ್ಲ. ಇಲ್ಲಿನ ಇನ್ನೊಂದು ವಿಶೇಷ ಅಂದರೆ ನಮ್ಮಲ್ಲಿನಂತೆ ಹೊಲ, ಗದ್ದೆ ಆಸ್ತಿಯಾಗದೆ ಇಂತಿಷ್ಟು ಎಕರೆ ಅರಣ್ಯವೇ ಇವರ ಮನೆತನದ ಪ್ರಾಪರ್ಟಿ ಆಗಿರುತ್ತದೆ. ನಿಮ್ಮದೇ ಅರಣ್ಯವನ್ನು ಕಡಿದು ನಾಟಾ ಮಾಡಿ ಮಾರಲು ಸರಕಾರದ ಹಲವಾರು ನಿಯಮಗಳನ್ನು ಪಾಲಿಸಬೇಕು. ಕೃಷಿ ಭೂಮಿ ಹಾಗೆ ಕಡಿಮೆಯೇ. ಪೀಟ್ ಲ್ಯಾಂಡ್ ಎನ್ನಿಸಿಕೊಳ್ಳುವ ಅತಿ ಫಲವತ್ತು ನೆಲ ಇದು, ಏನೇ ಬೆಳೆದರೂ ಸಮೃದ್ಧವಾಗಿ ಬೆಳೆಯುತ್ತೆ. (ಆದರೆ ಇಲ್ಲಿ ಕೆಲವೇ ಬಗೆಯ ಬೆಳೆ ತೆಗೆಯುವುದು ಮಾತ್ರ ಸಾಧ್ಯ. ಕಾರಣ ವರ್ಷದ ಆರೇಳು ತಿಂಗಳು ಈ ನಾಡು ಹಿಮದಲ್ಲಿ ಅಡಗಿಬಿಟ್ಟಿರುತ್ತದೆ). ಕೆಲವು ಬಗೆಯ ತರಕಾರಿಗಳು, ಮುಸುಕಿನ ಜೋಳ, ಗೋಧಿ, ಬಾರ್ಲಿ, ಓಟ್ಸ್ ಮತ್ತು ರಾಯ್, ರೇಪ್ ಸೀಡ್ ಹೀಗೆ ಕೆಲವನ್ನು ಬೆಳೆಯುತ್ತಾರೆ. ಬೇಸಿಗೆಯ ಕೆಲವು ತಿಂಗಳೇ ಒಂದಿಷ್ಟು ಕೃಷಿ. ಹಿಂದಿನ ಕಾಲದ ರೈತಾಪಿ ಜನ ಹೊಲದ ಕಸ, ಕಳೆ, ಹೊತ್ತು, ಮರದ ಕಡಿದುರುಳಿದ ಕಟ್ಟಿಗೆಯ ಶೇಷಗಳನ್ನು ನಡುಬೇಸಿಗೆಯ ಒಂದು ದಿನ ರಾತ್ರಿ ಒಂದೆಡೆ ಒಟ್ಟಿ ಬೆಂಕಿ ಹಚ್ಚಿ ಅದೇ ಹೊತ್ತಿಗೆ ಸೂರ್ಯನೂ ಈ ಬೇಸಿಗೆಯಿಡೀ ಚೆನ್ನಾಗಿ ಬಿಸಿಲು ಕೊಡಲಿ, ನಮ್ಮ ಬೆಳೆ ಹೆಚ್ಚಲಿ ಎನ್ನುವ ಭಾವದ ಹಾಡುಗಳನ್ನು ಹಾಡುತ್ತ ನಡೆಸಿಕೊಂಡು ಬಂದಿರುವುದೇ ಯೋಹಾನುಸ್. ಹಿರಿಯರ ಹಬ್ಬಗಳೂ ಚಂದ, ಅವುಗಳ ಹಿಂದಿನ ಉದ್ದೇಶವೂ ಹಿರಿದು.
ಸರೋವರದ ದಂಡೆಯಲ್ಲಿ ಉರಿಸಿದ ಬಾನ್ ಫೈರ್ ಬೆಂಕಿ ಆಕಾಶ ಮುಟ್ಟುತ್ತಿದ್ದಂತೆ ಮಧ್ಯರಾತ್ರಿಯೂ ಆಗಿಯೇಬಿಟ್ಟು ನೀರಿನಂಚಿನಲ್ಲಿ ಝಗ ಮಗ ಹೊಳೆದ ಸೂರ್ಯನ ವರ್ಣ ವೈಚಿತ್ರ್ಯ ವೈಭವವನ್ನು ಮನದುಂಬಿಕೊಂಡು ಅಲ್ಲಿಂದ ಹೊರಟು ಬಂದು ನಾವು ಮನೆ ಸೇರಿದಾಗ ರಾತ್ರಿಯ ಒಂದು ಗಂಟೆ!
ಬಾನು ಬೆಳ್ಳಗೆ ಬೆಳಗಿಕೊಂಡೇ ಇತ್ತು! ಸೂರ್ಯ ಆಕಾಶದಲ್ಲೇ ನಗುತ್ತಿದ್ದ!
ಜಯಶ್ರೀ ದೇಶಪಾಂಡೆ
ಫಿನ್ಲೆಂಡ್ ದರ್ಶನ ಚೆನ್ನಾಗಿದೆ
Congrats Mme!
ಫಿನ್ಲೆಂಡ್ ನ ಅಪರೂಪದ ಮಾಹಿತಿಯನ್ನು ಸೊಗಸಾಗಿ ದಾಖಲಿಸಿದ್ದೀರಿ.